“ಆರ್ಯ ಸಮಾಜದ ಕಟ್ಟಾಳು ಜಗದೇವಪ್ಪ ಹಾಲಭಾವಿ” ಕುರಿತು ಪಾಟೀಲರು ಬರೆದ ಲೇಖನ
ಆರ್ಯ ಸಮಾಜದ ಕಟ್ಟಾಳು ಜಗದೇವಪ್ಪ ಹಾಲಭಾವಿ
ಕೇಳಿರಿದೋ ಈ ಕ್ರಾಂತಿಯ ಕಥೆಯಾ ಹೈದ್ರಾಬಾದಿನ ಶರಣಾಗತಿಯ ||ಪ||
ಭಾರತ ದೇಶವು ಬ್ರಿಟಿಷರಾಜ್ಯದಾಳಿಕೆ ಮುಗಿದು |
ಭಾರತ ಸಂಸ್ಥಾನಿಕರು ಸೇರಿದರು ಹಿಂದೀ ಒಕ್ಕೂಟವನೊಲಿದು |
ಭಾರತಿ ಕಣ್ಣಲಿ ನೋಡಿ ನಲಿದಳು ಆನಂದಾಶ್ರುಗಳನು ಸುರಿದು |
ಎಂದು ಲಾವಣಿಕಾರರು ಬ್ರಿಟಿಷರಿಂದ ಮುಕ್ತಿ ಹೊಂದಿದ ಭಾರತದ ಕೋಟ್ಯಾಂತರ ಜನರ ಕನಸು ನನಸಾಗಿದ್ದನ್ನು ಹಾಡಿ ಸಂಭ್ರಮಿಸುತ್ತಿರುವಾಗಲೆ ಹೈದ್ರಾಬಾದ್ ನಿಜಾಮನು ಭಾರತದ ಒಕ್ಕೂಟಕ್ಕೆ ಸೇರದೆ ಸ್ವತಂತ್ರವಾಗಿರುವೆನೆಂದು ಘೋಷಿಸಿಕೊಳ್ಳುತ್ತಾನೆ.
ಬ್ರಿಟಿಷರಿಂದ ಮುಕ್ತಿ ದೊರಕಿತು, ನಾವಿನ್ನು ಸ್ವತಂತ್ರರು ಎಂದು ಸ್ವಾತಂತ್ರ್ಯ ಹೋರಾಟಗಾರರು ಉಸ್ಸಪ್ಪ…. ಎಂದು ಉಸಿರಾಡುವ ಹೊತ್ತಿಗೆ ಹೈದ್ರಾಬಾದ್ ನಿಜಾಮನ ನಿರ್ಧಾರದಿಂದ ಸಿಡಿಲೆರಗಿದಂತಾಗುತ್ತದೆ. ಆಗಿನ ಕಾಲಕ್ಕೆ ಅತ್ಯಂತ ಶ್ರೀಮಂತ ಸಂಸ್ಥಾನವೆಂಬ ಹೆಗ್ಗಳಿಕೆಯೂ ನಿಜಾಮ ಸಂಸ್ಥಾನಕ್ಕಿತ್ತು. ಅಪಾರ ಸಂಪತ್ತು, ಪ್ರತ್ಯೇಕ ಸೈನ್ಯವನ್ನು ಹೊಂದಿದ್ದರಿಂದ ಭಾರತದ ಒಕ್ಕೂಟಕ್ಕೆ ಸೇರದೆ ಪ್ರತ್ಯೇಕವಾಗಿರಲು ನಿಶ್ಚಯಿಸಿದ್ದ.
ಆಗಿನ ಉಪ ಪ್ರಧಾನಿ, ಗೃಹ ಮಂತ್ರಿಯಾಗಿದ್ದ ಸರ್ದಾರ್ ವಲ್ಲಭ ಭಾಯ್ ಪಟೇಲ್ರ ಚಾಣಾಕ್ಷ ನಡೆಯಿಂದ ಹಾಗೂ ಉಕ್ಕಿನಂತಹ ನಿರ್ಧಾರಗಳಿಂದ ಸ್ವಾತಂತ್ರ್ಯಾನಂತರದಲ್ಲಿ ಭಾರತದಲ್ಲಿದ್ದ ಸುಮಾರು 500 ಕ್ಕೂ ಹೆಚ್ಚು ಸಂಸ್ಥಾನಗಳನ್ನು ಭಾರತದ ಒಕ್ಕೂಟಕ್ಕೆ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಹೈದ್ರಾಬಾದ್ ನಿಜಾಮ್ ಮಾತ್ರ ಅಷ್ಟು ಸಲೀಸಾಗಿ ಭಾರತದ ಒಕ್ಕೂಟಕ್ಕೆ ಸೇರ್ಪಡೆಗೊಳ್ಳಲಿಲ್ಲ. ನಿಜಾಮನಿಂದ ಮುಕ್ತಿ ಹೊಂದಲು ಈ ಭಾಗದ ಜನ ಮತ್ತೊಂದು ಸ್ವಾತಂತ್ರ್ಯ ಹೋರಾಟವನ್ನೇ ಮಾಡಬೇಕಾಯಿತು.
ಪಕ್ಕದ ಜಿಲ್ಲೆಗಳಲ್ಲಿನ ಜನರು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜೀವನ ಸಾಗಿಸುತ್ತಿದ್ದರೆ,ಇಲ್ಲಿನ ಜನ ಮಾತ್ರ ನಿಜಾಮ್ ಪ್ರಭುತ್ವದಲ್ಲಿ ಕ್ರೌರ್ಯ,ಹಿಂಸೆ,ಅತ್ಯಾಚಾರ,ದರೋಡೆ,ಕೊಲೆಗಳಿಂದ ನರಳಾಡುತ್ತಿದ್ದರು. ನಿಜಾಮ್ ಸಾಮ್ರಾಜ್ಯದಲ್ಲಿದ್ದ ರಜಾಕಾರರಿಂದ ಇಲ್ಲಿನ ಜನ ಅನುಭವಿಸಿದ ನೋವು ಅಷ್ಟಿಷ್ಟಲ್ಲ. ಇವರು ಕೊಟ್ಟ ನೋವು ಹಿಂಸೆಯೇ ಮತ್ತೊಂದು ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆಯಾಯಿತು. ಹಿಂದೂ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳನ್ನು ಅತ್ಯಾಚಾರ ಕೊಲೆಗಳಿಂದಾಗಿ ರೋಸಿ ಹೋಗಿದ್ದರು. ನಿಜಾಮನಿಂದ ಮುಕ್ತಿ ಹೊಂದದ ಹೊರತು ನಮಗ್ಯಾರಿಗೂ ಇಲ್ಲಿ ಉಳಿಗಾಲವಿಲ್ಲ ಎಂದು ಅರಿತು ಹೋರಾಟಕ್ಕೆ ಅಣಿಯಾದ ಅನೇಕ ಹೋರಾಟಗಾರರಲ್ಲಿ ಯಾದಗಿರಿಯ ದಿ. ಜಗದೇವಪ್ಪ ಹಾಲಭಾವಿ ಕೂಡ ಒಬ್ಬರು.
ಸ್ವಾತಂತ್ರ್ಯ ಹೋರಾಟಗಾರ, ಗುರುಮಠಕಲ್ ಮಾಜಿ ಶಾಸಕ, ಶತಾಯುಷಿ ದಿ. ವಿದ್ಯಾಧರ ಗುರೂಜಿಯವರು ಜಗದೇವಪ್ಪ ಹಾಲಭಾವಿ ಕುರಿತು ತಮಗೆ ನೆನಪಿಗೆ ಬಂದಷ್ಟು ನೀಡಿದ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇನೆ.
ಯಾದಗಿರಿಯಲ್ಲಿ ಒಂದು ಬಾರಿ ಬಸವಣ್ಣ ದೇವರ ಪಲ್ಲಕ್ಕಿ ಮೆರವಣಿಗೆ ಹೊರಟ ಸಂದರ್ಭದಲ್ಲಿ ರಜಾಕಾರರು ದಾಳಿ ಮಾಡಿದರು. ಇದರಿಂದ ಹೆದರಿದ ಜನ ಪಲ್ಲಕ್ಕಿಯನ್ನು ಗಾಂಧಿಚೌಕದಲ್ಲಿಟ್ಟು ದಿಕ್ಕಾಪಾಲಾಗಿ ಓಡಿ ಹೋದರು. ಆದರೆ ನಡು ರಸ್ತೆಯಲ್ಲಿದ್ದ ಪಲ್ಲಕಿಯನ್ನ ರಾತ್ರಿ ಪೂರ್ತಿ ಸುರಕ್ಷಿತವಾಗಿ ಕಾಯ್ದವರು ಜಗದೇವಪ್ಪ ಹಾಲಭಾವಿ ಮತ್ತು ಚಟ್ನಳ್ಳಿ ಶರಣಪ್ಪ ಎಂಬ ತರುಣ ಯುವಕರು. ರಜಾಕಾರರ ಉಪಟಳವನ್ನು ಲೆಕ್ಕಿಸದೆ ಅವರ ಕಣ್ತಪ್ಪಿಸಿ ಕಾಯ್ದಿದ್ದರು. ಬೆಳಿಗ್ಗೆ ನಿಜಾಮ್ ಪೊಲೀಸ್ ಇಲಾಖೆಯವರಿಂದ ಎಲ್ಲ ಹಿಂದೂ-ಮುಸ್ಲಿಂ ನಾಯಕರನ್ನು ಸಭೆ ಸೇರಿಸಿ ಪಲ್ಲಕ್ಕಿಯನ್ನು ಮತ್ತೆ ಮೆರವಣಿಗೆ ಮೂಲಕ ರಸ್ತೆಯ ಮಧ್ಯದಲ್ಲಿದ್ದ ಪಲ್ಲಕ್ಕಿಯನ್ನು ಗುಡಿಯಲ್ಲಿ ಪುನರ್ ಪ್ರತಿಷ್ಠಾಪಿಸುವವರೆಗೆ ಜಗದೇವಪ್ಪ ಹಾಲಭಾವಿ ಮತ್ತು ಚಟ್ನಳ್ಳಿ ಶರಣಪ್ಪ ಅತ್ಯಂತ ಜಾಗರೂಕತೆಯಿಂದ ಕಾರ್ಯನಿರ್ವಹಿಸಿದ್ದರು.
ದಿ.ವಿದ್ಯಾಧರ ಗುರೂಜಿಯವರ ಅತ್ಯಂತ ನಿಕಟವರ್ತಿಗಳಲ್ಲಿ ಜಗದೇವಪ್ಪ ಕೂಡ ಒಬ್ಬರು. ಜಗದೇವಪ್ಪನವರ ಹೋರಾಟದ ಕಿಚ್ಚು ಕಂಡ ಗುರೂಜಿಯವರು ತಮ್ಮೊಡನೆ ಆರ್ಯ ಸಮಾಜದ ಕಾರ್ಯಚಟುವಟಿಕೆಗಳಲ್ಲಿ ತೊಡಗಲು ಪ್ರೇರೇಪಿಸಿದರು. ಗುರೂಜಿ ಸಹವಾಸದಿಂದಾಗಿ ಆರ್ಯ ಸಮಾಜ, ಹಿಂದಿ ಪ್ರಚಾರ ಸಭಾಗೂ ಸೇರಿದರು. ಅಲ್ಲಿ ಅಸ್ಪøಷ್ಯತೆ ನಿವಾರಣೆ, ಬಡವರ ಕಲ್ಯಾಣ, ಜಾತಿ ವಿನಾಶದಂತಹ ಸಾಮಾಜಿಕ ಚಳುವಳಿಗೂ ಶ್ರಮಿಸುತ್ತಿದ್ದರು. ಅಪ್ಪಟ ಖಾದಿ ಪ್ರೇಮಿ, ರಾಷ್ಟ್ರೀಯ ವಿಚಾರವಾದಿಯಾಗಿದ್ದ ಜಗದೇವಪ್ಪ ಆರ್ಯಸಮಾಜ ಸೇರಿದ ನಂತರ ಹಿಂದಿ ಭಾಷೆ ಕಲಿತು, ಹಿಂದಿ ಪ್ರಚಾರ ಸಭೆ ನಡೆಸುತ್ತಿದ್ದ ಪರೀಕ್ಷೆಯಲ್ಲಿ ಪಾಸಾದರು. ಮುಂದೆ ಇದೇ ಹಿಂದಿ ಪ್ರಚಾರ ಸಭಾ ಉಪಾಧ್ಯಕ್ಷರಾಗಿ ಮತ್ತು ಕೋಶಾಧ್ಯಕ್ಷರಾಗಿ ಕೆಲಸ ನಿರ್ವಹಿಸಿದರು.
ಆರ್ಯ ಸಮಾಜ : ಹೈದ್ರಾಬಾದ್ ಮುಕ್ತಿ ಹೋರಾಟ ಚರಿತ್ರೆಯಲ್ಲಿ ಆರ್ಯ ಸಮಾಜದ ಪಾತ್ರ ಕೈಬಿಟ್ಟರೆ, ಆ ಚಳುವಳಿಯಲ್ಲಿ ಏನೂ ಉಳಿಯುವುದಿಲ್ಲ ಎನ್ನುವಷ್ಟರ ಮಟ್ಟಿಗೆ ದುಡಿದಿದೆ, ಬಲಿದಾನ ನೀಡಿದೆ. 1892 ಕ್ಕೂ ಪೂರ್ವದಲ್ಲೇ ಸ್ಥಾಪಿತವಾಗಿರುವ ಆರ್ಯ ಸಮಾಜದ ಸ್ಥಾಪನೆಯ ಉದ್ದೇಶ ಹಿಂದೂ ಸಮಾಜವನ್ನು ಸುಧಾರಿಸುವುದಾಗಿತ್ತು. ಹಿಂದೂ ಸಮಾಜದಲ್ಲಿ ಬೇರೂರಿದ್ದ ಅನಿಷ್ಠ ಕೆಟ್ಟ ಪರಂಪರೆಗಳನ್ನು, ಮೌಢ್ಯಗಳನ್ನು ಕಿತ್ತು ಹಾಕುವುದು, ವರ್ಣಭೇಧ, ಜಾತಿಭೇದಗಳನ್ನು ತೊಲಗಿಸುವುದಾಗಿತ್ತು. ಇಂತಹ ಸಂದರ್ಭದಲ್ಲಿ ರಜಾಕಾರರ ಕೌರ್ಯಕ್ಕೆ ಹಿಂದೂ ಮಹಿಳೆಯರ ಮೇಲಾಗುತ್ತಿ ಅತ್ಯಾಚಾರ, ದೌರ್ಜನ್ಯಗಳನ್ನು ಉಗ್ರವಾಗಿ ವಿರೋಧಿಸಿ ಹೋರಾಡಿದ್ದು ಆರ್ಯ ಸಮಾಜ. ಜಗದೇಪ್ಪನವರು ಆರ್ಯ ಸಮಾಜ ಪ್ರತಿವರ್ಷ ನಡೆಸುತ್ತಿದ್ದ ಸಮ್ಮೇಳನಗಳಲ್ಲಿ ತಪ್ಪದೇ ಭಾಗವಹಿಸುತ್ತಿದ್ದರು. 1940 ರಲ್ಲಿ ನಡೆದ ಮೊದಲ ಸಮಾವೇಶ ಉದ್ಗೀರನಲ್ಲಿ ಜರುಗಿತ್ತು. 1942 ರಲ್ಲಿ ನಡೆದ ಸಮಾವೇಶ ನಿಜಾಮಾಬಾದ್ನಲ್ಲಿ ಜರುಗಿತ್ತು. 1943 ರ ಮೂರನೆಯ ಸಮಾವೇಶ ನಾರಾಯಣಪೇಠದಲ್ಲಿ ಹಾಗೂ ನಾಲ್ಕನೆಯ ಸಮಾವೇಶ 1944 ರಲ್ಲಿ ಕಲಬುರಗಿಯಲ್ಲಿ ಜರುಗಿತ್ತು. ಜಗದೇವಪ್ಪ ಈ ಎಲ್ಲ ಸಮಾವೇಶಗಳಲ್ಲಿ ತಪ್ಪದೇ ಹಾಜರಿರುತ್ತಿದ್ದರು.
ಜಗದೇವಪ್ಪನವರಿಗೆ ಆಗಿನ ಆರ್ಯ ಸಮಾಜದ ನಿಕಟವರ್ತಿಗಳೆಂದರೆ ದಿ.ವಿದ್ಯಾಧರ ಗುರೂಜಿ, ದಿ.ಈಶ್ವರಲಾಲ್ ಭಟ್ಟಡ, ದಿ.ಸೀತಾರಾಂ ನಾಗಪ್ಪ ಅತ್ಯಂತ ನಿಕಟವರ್ತಿಗಳು. 1944 ರಲ್ಲಿ ಕಲಬುರಗಿಯಲ್ಲಿ ನಡೆದ ಆರ್ಯ ಸಮಾಜದ ಸಮಾವೇಶದಲ್ಲಿ ಬಂದಿದ್ದ ಬೇರೆ ಬೇರೆ ಭಾಗಗಳಿಂದ ಬಂದಿದ್ದ ಹಿಂದೂ ಹೆಣ್ಣು ಮಕ್ಕಳನ್ನು, ಚಿಕ್ಕ ಮಕ್ಕಳನ್ನು ರಜಾಕಾರರ ಕಣ್ತಪ್ಪಿಸಿ ಸುರಕ್ಷಿತವಾಗಿ ರೈಲ್ವೆ ಸ್ಟೇಶನ್, ಬಸ್ ಸ್ಟ್ಯಾಂಡ್ಗಳಿಗೆ ಸ್ವತ: ತಾವೇ ಮುಂದೆ ನಿಂತು ತಲುಪಿಸುತ್ತಿದ್ದರು.
ಜಗದೇವಪ್ಪನವರು ಅಡತಿ ಹಾಗೂ ಹೊಟೆಲ್ ವ್ಯವಹಾರ ನಡೆಸುತ್ತಿದ್ದರು. ಚಕ್ಕರಕಟ್ಟಾದಲ್ಲಿದ್ದ ಹಾಲಭಾವಿಯವರ ಹೊಟೆಲ್ ಆಗಿನ ಕಾಲಕ್ಕೆ ರಾಜಕೀಯ ಚರ್ಚೆಗಳಿಗೆ ಬೈಠಕ್ ಆಗಿತ್ತು. ಜಗದೇವಪ್ಪ ಆರ್ಯ ಸಮಾಜದ ಸ್ವಯಂ ಸೇವಕರಿಗೆ ಕ್ಯಾಪ್ಟನ್ ಆಗಿದ್ದರು. ಹೆಣ್ಣು ಮಕ್ಕಳ ಮಾನ ಹಾನಿ ಕಾಪಾಡುವ ಜವಾಬ್ದಾರಿ ಇವರ ನಾಯಕತ್ವದ ಸ್ವಯಂ ಸೇವಕರಿಗಿತ್ತು. ಇವರ ಹೊಟೆಲ್ನಲ್ಲಿ ರಾಜಕೀಯ ಪುಢಾರಿಗಳು, ಸಾಮಾಜಿಕ ಕಾರ್ಯಕರ್ತರು ಚರ್ಚೆ ನಡೆಸುತ್ತಿದ್ದರಿಂದ ರಜಾಕಾರರ ಕೆಂಗಣ್ಣಿಗೆ ಗುರಿಯಾಗಿದ್ದರು.
ಹೀಗಾಗಿ ಇವರ ಮೇಲೆ ಸುಳ್ಳು ಕೇಸ್ ಹಾಕಿ 6 ತಿಂಗಳುಗಳ ಕಾಲ ಜೈಲಿಗಟ್ಟಿದ್ದರು. ಜೈಲಿನಿಂದ ಹೊರಬಂದ ಮೇಲೂ ಮತ್ತೆ ತಮ್ಮ ಚಟುವಟಿಕೆಗಳನ್ನು ಮುಂದುವರೆಸಿದರು. ಆರ್ಯ ಸಮಾಜ ಸೇರಿದ ನಂತರ ಹಿಂದಿ ಭಾಷೆ ಕಲಿತು ಹಿಂದಿ ಪ್ರಚಾರ ಸಭೆ ನಡೆಸುತ್ತಿದ್ದ ಪರೀಕ್ಷೆಯಲ್ಲಿ ಕೂತು ಪಾಸಾದರು. ಮುಂದೆ ಇದೇ ಜಗದೇಪ್ಪನವರು ಕರ್ನಾಟಕ ಹಿಂದಿ ಪ್ರಚಾರ ಸಭೆಯ ಉಪಾಧ್ಯಕ್ಷರೂ ಹಾಗೂ ಕೋಶಾಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದರು.
“ಗಾಣದಾಳ ಸ್ಟೇಶನ್ದಿ ಗಾಡಿಯ ನಿಲ್ಲಿಸಿ ಲೂಟಿಯ ಮಾಡಿದರು
ಮಾನವತಿಯರನು ಹಿಡಿದೆಳೆದೊಯ್ಯುತೆ ಮಾನಹಾನಿಯನ್ನೆಸಗಿದರು
ಕೋಣನಂಥ ರಜಾಕಾರರು ಕೆಲವರ ಪ್ರಾಣವನ್ನೇ ಹೀರಿದರು
ಪ್ರಾಣ ಭಯವ ತೋರಿಸಿ ನಾರಿಯರನ್ನೊಯ್ದು ಕಣ್ಗೆ ಮರೆಮಾಚಿದರು
ಗೋಣಿಗೆ ನೇಣನು ಸುತ್ತಿ ಗಿಡಗಳಿಗೆ ಜೋತುಗಟ್ಟಿ ತೂಗಾಡಿದರು||
(ಹೈದ್ರಾಬಾದ್ ರಜಾಕಾರರ ಲಾವಣಿ.-ದಿ.ಪಂ.ನಲವಡಿ ಶ್ರೀಕಂಠಶಾಸ್ತ್ರಿ)
ಇಂತಹ ದುರ್ಘಟನೆಗಳು ಹೋರಾಟಗಾರರಿಗೆ ಕಿಚ್ಚು ಹಚ್ಚಿತ್ತು. ಕೊನೆಗೂ ಉಕ್ಕಿನ ಮನುಷ್ಯನ ಆಗಮನದಿಂದ ಬೆಚ್ಚಿಬಿದ್ದ ನಿಜಾಮ್ ಸೈನ್ಯ 1948 ಸೆಪ್ಟೆಂಬರ್ 17 ರಂದು ಶರಣಾಗತಿಯಾಗಿ ಭಾರತದ ಒಕ್ಕೂಟಕ್ಕೆ ಸೇರಿದ. ನಿಜಾಮನಿಂದ ಮುಕ್ತಿಗಾಗಿ ಹೋರಾಡಿ ಪ್ರಾಣಾರ್ಪಣೆ ಮಾಡಿದ ಅದೆಷ್ಟೋ ಹೋರಾಟಗಾರರಿಗೆ ಬ್ರಿಟಿಷರ ವಿರುದ್ಧ ಮಾಡಿದ್ದ ಹೋರಾಟವನ್ನೇ ಮರೆಯುವಂತೆ ಮಾಡಿತ್ತು !!!
ಚರಿತ್ರೆಯ ಪುಟಗಳಲ್ಲಿ ಜಗದೇವಪ್ಪನವರಂತಹ ಅದೆಷ್ಟೋ ಕಣ್ತಪ್ಪಿದ ಹೋರಾಟಗಾರರು ಹುಡುಕಿದರೂ ಸಿಗುವುದಿಲ್ಲ. ಅಂತಹ ಹೋರಾಟಗಾರರ ಹೋರಾಟದ ದಿನಗಳನ್ನು ವರ್ಷಕ್ಕೊಮ್ಮೆಯಹಾದರೂ ನೆನಪಿಸಿಕೊಳ್ಳುವದು ನಮ್ಮ ಯುವ ಜನಾಂಗದ ಕರ್ತವ್ಯ. ಅವರ ತ್ಯಾಗ, ಬಲಿದಾನ ನಮ್ಮಂತಹ ಯುವಕರಿಗೆ ಸ್ಫೂರ್ತಿಯಾಗಬೇಕು ಎಂಬುದೇ ಈ ಲೇಖನದ ಉದ್ದೇಶ.
-ಪಾಟೀಲ.ಬಸನೌಡ.ಹುಣಸಗಿ.
9900771427
Nice
ಜಗದೇವಪ್ಪ ಹಾಲಬಾವಿಯವರ ಹೋರಾಟದ ಜೀವನ..ಹಾಗೂ ಅದನ್ನು ಬಹುಸುಂದರವಾಗಿ, ಪಾಟೀಲ ಬಸನಗೌಡರವರು ಬರೆದಿರುವುದು.ಅಭಿನಂದನಿಯ..
ಈ ಎರಡು ಸಂಗತಿಗಳು ನಮ್ಮೆಲ್ಲರ ಹೆಮ್ಮೆ..