ಕ್ಯಾಂಪಸ್ ಕಲರವ
ಉತ್ತಮ ಸ್ನೇಹಕ್ಕಾಗಿ ಈ ಹತ್ತು ಸೂತ್ರಗಳನ್ನು ಪಾಲಿಸೋಣ!
ಮಾನವ ಒಂಟಿಯಾಗಿ ಬದುಕಲಾಗದೇ, ಸಾಮಾಜಿಕ ವ್ಯವಸ್ಥೆಯನ್ನು ಮಾಡಿಕೊಂಡ ಸಂಘಜೀವಿ. ಸ್ನೇಹ, ಆತ್ಮೀಯತೆ, ಪರಸ್ಪರ ಸಹಕಾರ, ಪ್ರೀತಿ ಇಲ್ಲದೇ ಆತ ಏನನ್ನೂ ಸಾಧಿಸಲಾರ. ಎಂತಹುದೇ ಕ್ಲಿಷ್ಟಕರವಾದ ಪರಿಸ್ಥಿತಿಯಲ್ಲಿಯೂ” ಸ್ನೇಹ” ವು ಸಮಸ್ಯೆಗಳನ್ನು ತಿಳಿಯಾಗಿಸುತ್ತದೆ. ಹೃದಯದ ಬಾಗಿಲನ್ನು ತೆರೆದು ಪ್ರೀತಿ, ವಿಶ್ವಾಸ, ಕರುಣೆಗಳನ್ನು ಸ್ನೇಹವೊಂದೇ ಪ್ರತಿಷ್ಟಾಪಿಸಬಲ್ಲದು!
ಸ್ನೇಹದ ಪರಿವ್ಯಾಪ್ತಿಯು ವಿಶಾಲವಾದುದು. ಇಲ್ಲಿ ಯಾವುದೇ ಚೌಕಟ್ಟಿಲ್ಲ. ಹೀಗೆ ಬೆಳೆಯುವ ಮೈತ್ರಿಯು ಎರಡು ಹೃದಯಗಳ ಭಾವನಾತ್ಮಕವಾದ ಸಮ್ಮಿಲನಕ್ಕೂ ಕಾರಣವಾಗಬಲ್ಲದು. ಮನಸ್ಸಿನ ಏಕಾಗ್ರತೆಯೇ ಸ್ನೇಹವು ಜೀವಂತವಾಗಿರಲು ಸಹಕಾರಿ. ಪರಸ್ಪರ ಒಡನಾಟದಿಂದ ಮಾತ್ರ ಸ್ನೇಹ- ಸಂಬಂಧ ವೃದ್ಧಿ. ಶಿಲ್ಪಿಯಿಂದ ಪ್ರಮಾಣ ಬದ್ಧ ಸುಂದರವಾದ ಮೂರ್ತಿ ರೂಪುಗೊಳ್ಳುವಂತೆ ಉತ್ತಮ ಸ್ನೇಹಿತರ ಸಹವಾಸದಿಂದ ಸಮಾಜದಲ್ಲಿ ಆದರ್ಶ ವ್ಯಕ್ತಿಗಳು ರೂಪುಗೊಳ್ಳುತ್ತಾರೆ.
ಒಳ್ಳೆಯ ಹವ್ಯಾಸವುಳ್ಳವರ ಸ್ನೇಹ ಗಳಿಸುವುದರಿಂದ, ನಮ್ಮಲ್ಲಿಯೂ ಅಂತಹ ಹವ್ಯಾಸಗಳು ಬೆಳೆದು ನಮ್ಮ ಅರಿವಿನ ಕಣಜ ಶ್ರೀಮಂತವಾಗುತ್ತದೆ. ನಮ್ಮ ಪುರಾಣಗಳನ್ನು ಅವಲೋಕಿಸಿದರೆ ಶ್ರೀಕೃಷ್ಣ,- ಸುಧಾಮ, ದುರ್ಯೊಧನ- ಕರ್ಣ ಮುಂತಾದವರು ಸ್ನೇಹ- ಸಂಬಂಧದ ಮಾದರಿಗಳು. ಭಾಗೀರಥಿಯ ಕತೆಯಲ್ಲಂತೂ ಸ್ನೇಹವೇ ಪ್ರಧಾನ. ತನ್ನನ್ನು ಬಲಿಕೊಡುವ ವಿಷಯವನ್ನು ಭಾಗೀರಥಿ ತನ್ನ ಗೆಳತಿಗೆ ಮಾತ್ರ ಹೇಳಿಕೊಳ್ಳುತ್ತಾಳೆ! ಹೌದು, ” ದಾರಿ ಕಾಣದ ಕಗ್ಗತ್ತಲೆಯಲ್ಲೂ ಕೈಬಿಡದೇ ದಾರಿ ತೋರುವವನೇ ಸ್ನೇಹಿತ ” ಎಂಬ ಮಾತು ಅದೆಷ್ಟು ಅರ್ಥಗರ್ಭಿತ!
ಎಲ್ಲೋ ಓದಿದ ನೆನಪು. ‘ ಜೀವನದಲ್ಲಿ ಕೆಟ್ಟ ಕಾಲ ಬಂದಾಗ ಒಳ್ಳೆಯ ಗೆಳೆಯರು ನೆನಪಾಗುತ್ತಾರೆ! ‘ಅನುಮಾನಂ ಪೆದ್ದ ರೋಗಂ’ ಎಂಬ ತೆಲುಗು ನಾಣ್ಣುಡಿಯಂತೆ ಸ್ನೇಹದಲ್ಲಿ ಎಂದೂ ಅನುಮಾನ ನುಸುಳಬಾರದು. ಗೆದ್ದಿಲು ಹಿಡಿದ ಮರ ಹೇಗೆ ಬಹಳ ದಿನ ನಿಲ್ಲುವುದಿಲ್ಲವೋ ಹಾಗೇ ಸಂಶಯ, ಅನುಮಾನದ ಸೋಂಕು ತಗುಲಿದ ಸ್ನೇಹವೂ ಉಳಿಯಲಾರದು. ‘ ಹೊಡೆದಾಡಿ ಸ್ನೇಹಿತರಾಗಬೇಕು, ಸ್ನೇಹಿತರಾಗಿ ಹೊಡೆದಾಡಬಾರದು’ ಎಂಬ ಮಾತು ಇಲ್ಲಿ ಉಲ್ಲೇಖನೀಯ.
ಇದೋ ಬನ್ನಿ ಉತ್ತಮ ಸ್ನೇಹಿತರಾಗಲು ಹತ್ತು ಸೂತ್ರಗಳನ್ನು ಅರಿಯೋಣ-
* ನಿಮ್ಮ ಮಾತಿನಲ್ಲಿ ಇತರರ ಬಗ್ಗೆ ಸಣ್ಣತನ ತೋರಬೇಡಿ
* ನಿಮ್ಮ ಸ್ನೇಹಿತರ ಎದುರು ಇನ್ನೊಬ್ಬರ ಬಗ್ಗೆ ಚಾಡಿ ಹೇಳಬೇಡಿ
* ನಿಮ್ಮನ್ನು ಹೊಗಳುವ ಸ್ನೇಹಿತರನ್ನು ಸ್ವಲ್ಪ ದೂರವೇ ಇಡಿ.
* ದೇವರು, ಧರ್ಮದ ಬಗ್ಗೆ ಎಂದೂ ಹಗುರವಾಗಿ ಮಾತನಾಡಬೇಡಿ
* ನಿಮ್ಮ ಸಂಭಾಷಣೆಗೆ ಸಾರ್ವಜನಿಕ ವಿಷಯವನ್ನೆತ್ತಿಕೊಳ್ಳಿ.
* ಮಾತನಾಡುವಾಗ ನಿಮ್ಮ ಸ್ವಾರ್ಥ ಬುದ್ಧಿಯನ್ನು ತೋರಗೊಡಬೇಡಿ.
* ಸ್ನೇಹಿತರ ಜೊತೆಗಿದ್ದಾಗ ಹಸನ್ಮುಖದಿಂದ, ಉತ್ಸಾಹ, ಉಲ್ಲಾಸದಿಂದಿರಿ.
* ವಿನಾಕಾರಣ ನಿಮ್ಮ ಜ್ಞಾನದ ಪ್ರದರ್ಶನ ಮಾಡಬೇಡಿ.
* ಮಾತನಾಡುವಾಗ ನಿಮ್ಮ ತಂದೆ- ತಾಯಿ,ಅಣ್ಣ- ತಮ್ಮ,ಅಕ್ಕ- ತಂಗಿ,ಹೆಂಡತಿ- ಮಕ್ಕಳ ಬಗ್ಗೆ ಕೇವಲವಾಗಿ ಮಾತನಾಡಬೇಡಿ.
* ಸಹೃದಯರಾಗಿರಿ, ಆದರೆ ವಿನಾಕಾರಣ ಯಾರನ್ನೂ ಹೊಗಳಬೇಡಿ
ಇವುಗಳ ಅನುಷ್ಟಾನ ಸಾಧ್ಯವಾದಲ್ಲಿ ಉತ್ತಮ ಗೆಳೆಯರ ದಂಡೇ ನಿಮ್ಮದಾಗಬಹುದು.
ಇದೊಂದು ಉತ್ತಮ ಸಂದೇಶ, ಸ್ನೇಹದ ಪರಿಕಲ್ಪನೆ ವ್ಯಾಪ್ತಿಯಲ್ಲಿನ ಸತ್ಯದ ಒಂದು ಪ್ರತಿಬಿಂಬ .