ತಾಯಿ ನಾಡಿನ ಭಾಷೆ ಉಳಿವಿಗೆ ಸರ್ವರ ಪ್ರಯತ್ನ ಅಗತ್ಯಃ ಶಾಸಕ ಗುರು ಪಾಟೀಲ್
ಕರವೇಯಿಂದ ಗಡಿ ಕನ್ನಡಿಗರ ನುಡಿ ಉತ್ಸವ
ಯಾದಗಿರಿಃ ಅವನತಿಯ ಹಂತ ತಲುಪುವದರಲ್ಲಿಯೇ ನಮ್ಮ ತಾಯಿ ನಾಡಿನ ಭಾಷೆ ಉಳಿವಿಗಾಗಿ ಸರ್ವರೂ ಪ್ರಯತ್ನಿಸಬೇಕಿದೆ. ಕನ್ನಡ ಭಾಷೆ ರಕ್ಷಣೆಗಾಗಿ ಸದಾ ಸಿದ್ದವೆಂದು ಶಾಸಕ ಗುರು ಪಾಟೀಲ ಶಿರವಾಳ ಹೇಳಿದರು.
ಜಿಲ್ಲೆಯ ಶಹಾಪುರ ತಾಲೂಕಿನ ಭೀಮರಾಯನಗುಡಿಯ ಕೃಷಿ ಮಹಾ ವಿದ್ಯಾಲಯದ ರಂಗ ಮಂದಿರದಲ್ಲಿ ಕರವೇ ಮತ್ತು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ಗಡಿ ಕನ್ನಡಿಗರ ನುಡಿ ಉತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನಾಡಿನ ನೆಲದಲ್ಲಿ ಮತ್ತು ಹೈಕ ಭಾಗದಲ್ಲಿ ಅನೇಕ ಎಲೆಮರೆಯ ಕಾಯಿಯಂತಿರುವ ಕಲಾವಿದರನ್ನು ಪ್ರೋತ್ಸಾಹಿಸಲು ಇಂತಹ ವೇದಿಕೆಗಳು ಅವಶ್ಯವಾಗಿವೆ. ಆ ನಿಟ್ಟಿನಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡಪರ ರಕ್ಷಣಾ ವೇದಿಕೆಗಳು ಪ್ರಯತ್ನಿಸುತ್ತಿರುವುದು ಶ್ಲಾಘನೀಯವೆಂದರು.
ವೇದಿಕೆಯ ಸಾನ್ನಿಧ್ಯವನ್ನು ಶ್ರೀಚರಬಸವೇಶ್ವರ ಸಂಸ್ಥಾನದ ಬಸವಯ್ಯ ಶರಣರು ವಹಿಸಿದ್ದರು. ಯಾದಗಿರಿ ನಗರಸಭೆ ಪೌರಾಯುಕ್ತ ಸಂಗಮೇಶ ಉಪಾಸೆ, ಕೃಷಿ ವಿದ್ಯಾಲಯದ ಡೀನ್ ಡಾ.ಸುರೇಶ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಇರ್ವರು ರಂಗಕಲಾವಿದರಾದ ವಿಶಾಲ ಸಿಂಧೆ, ರಾಘವೇಂದ್ರ ಕುಲ್ಕರ್ಣಿ ಹಾಗೂ ಸೇವಾನಿವೃತ್ತರಾದ ಚಂದ್ರಶೇಖರ ಹೋತಪೇಟ್, ಸಿದ್ರಾಮಪ್ಪ, ಸಂಶೋಧಕ ನಿಂಗನಗೌಡ ದೇಸಾಯಿಯವರನ್ನು ಸನ್ಮಾನಿಸಲಾಯಿತು. ಚಿತ್ರ ಕಲಾವಿದರಾದ ಸಂತೋಷ ಉಪ್ಪಿನ ಮತ್ತು ನಟಿ ರಾಧಿಕಾಗೌಡ ಅವರಿಂದ ತಡ ರಾತ್ರಿಯವರೆಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.