ಗಾಂಧಿ ಅಭಿಯಾನದ ಸ್ತಬ್ಧಚಿತ್ರಕ್ಕೆ ಸುರಪುರದಲ್ಲಿ ಅದ್ಧೂರಿ ಸ್ವಾಗತ
ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ
ಯಾದಗಿರಿಃ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ಹಮ್ಮಿಕೊಂಡಿರುವ “ಗಾಂಧಿ-150 ಅಭಿಯಾನ”ದ ಶಾಂತಿಮಾರ್ಗ ಸ್ತಬ್ಧಚಿತ್ರ ರಥಯಾತ್ರೆಗೆ ಸುರಪುರ ನಗರದಲ್ಲಿ ಭಾನುವಾರ ಅದ್ಧೂರಿ ಸ್ವಾಗತ ದೊರಕಿತು.
ಗ್ರೇಡ್-2 ತಹಶೀಲ್ದಾರ್ ಸೂಫಿಯಾ ಸುಲ್ತಾನಾ ಅವರು ಗಾಂಧೀಜಿಯವರ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಸ್ವಾಗತಿಸಿ ಮಾತನಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ವಿಚಾರಧಾರೆ ಕುರಿತು ರಾಜ್ಯದಾದ್ಯಂತ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸತ್ಯಮಾರ್ಗ ಮತ್ತು ಶಾಂತಿಮಾರ್ಗ ಎಂಬ ಎರಡು ಸ್ತಬ್ಧಚಿತ್ರಗಳ ಸಂಚಾರವನ್ನು ಆಯೋಜಿಸಲಾಗಿದೆ.
ಪ್ರತಿಯೊಬ್ಬರು ಮಹಾತ್ಮ ಗಾಂಧೀಜಿಯವರ ವಿಚಾರಧಾರೆ ಮತ್ತು ಅವರ ಸಂದೇಶಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ಮೊದಲು ಅಕ್ಟೋಬರ್ 19ರಂದು ಯಾದಗಿರಿ ಮತ್ತು ಅ.20ರಂದು ಶಹಾಪುರದಲ್ಲಿ ಶಾಂತಿಮಾರ್ಗ ಸ್ತಬ್ಧಚಿತ್ರ ಸಂಚರಿಸಿತ್ತು.
ಈಗ ರಾಜ್ಯದ ಉಳಿದ ತಾಲ್ಲೂಕುಗಳಲ್ಲಿ ಮತ್ತೊಮ್ಮೆ ಸಂಚಾರ ಆರಂಭಿಸಿದ್ದು, ಈ ನಿಟ್ಟಿನಲ್ಲಿ ಸುರಪುರಕ್ಕೆ ಸ್ತಬ್ಧಚಿತ್ರ ಆಗಮಿಸಿದೆ. ನಂತರ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿಗೆ ಪ್ರಯಾಣ ಬೆಳಸಲಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಸಿದ್ದೇಶ್ವರಪ್ಪ ಜಿ.ಬಿ. ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಸ್ತಬ್ಧಚಿತ್ರದಲ್ಲಿನ ಬಾಲಕ ಗಾಂಧಿ, ಬ್ಯಾರಿಸ್ಟರ್ ಗಾಂಧಿ, ಭಾರತೀಯ ಸೈನ್ಯ ಶುಶ್ರೂಷಾ ಪಥದಲ್ಲಿ ಗಾಂಧಿ, ದೇಶಿ ಉಡುಪಿನಲ್ಲಿ ಗಾಂಧಿ, ಸಮಾಜ ಪರಿಶೋಧಕ ಗಾಂಧಿ, ಮಗುವಿನ ಜೊತೆ ಗಾಂಧಿ, ಬರವಣಿಗೆಯಲ್ಲಿ ನಿರತ ಗಾಂಧಿ ಹಾಗೂ ಅನಂತದೆಡೆಗೆ ಗಾಂಧಿ ಕುರಿತ ಭಾವಚಿತ್ರಗಳು, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಚಿತ್ರಣ ಹಾಗೂ ಎಲ್‍ಇಡಿ ಪರದೆಯಲ್ಲಿ ಗಾಂಧೀಜಿಯವರ ಘೋಷವಾಕ್ಯಗಳನ್ನು ಸಾರ್ವಜನಿಕರು, ವಿದ್ಯಾರ್ಥಿಗಳು, ಮಹಿಳೆಯರು, ಯುವಕರು ವೀಕ್ಷಣೆ ಮಾಡಿದರು.
ರಥಯಾತ್ರೆಯು ಸುರಪುರ ನಗರದ ಗಾಂಧಿ ವೃತ್ತದ ಮೂಲಕ ವಿವಿಧ ಬೀದಿಗಳಲ್ಲಿ ಸಂಚರಿಸಿತು. ಈ ಸಂದರ್ಭದಲ್ಲಿ ನಗರಸಭೆ ಮ್ಯಾನೇಜರ್ ಯಲ್ಲಪ್ಪ, ಗ್ರಾಮ ಲೆಕ್ಕಾಧಿಕಾರಿ ಪ್ರದೀಪ್, ನಗರಸಭೆ ಸಿಬ್ಬಂದಿಗಳಾದ ಅಮಲಪ್ಪ, ಶರಣಪ್ಪ, ಕೃಷ್ಣಾ, ತಿಮ್ಮಣ್ಣ ಪೋತಲ್ಕರ್ ಅವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.