ಗ್ರಾಮೀಣ ಭಾಗದ ರಸ್ತೆ ದುಸ್ಥಿತಿ, ತಡೆಗೋಡೆ ಇಲ್ಲದ ಸೇತುವೆ ಅಪಾಯಕ್ಕೆ ಆಹ್ವಾನ
ಶಹಾಪುರಃ ಕನ್ಯಾಕೋಳೂರ-ತಿಪ್ಪನಟಗಿ ರಸ್ತೆ ದುಸ್ಥಿತಿ, ತಡೆಗೋಡೆ ಇಲ್ಲದ ಸೇತುವೆ ಅಪಾಯಕ್ಕೆ ಆಹ್ವಾನ
ಯಾದಗಿರಿಃ ಜಿಲ್ಲೆಯ ತಾಲೂಕಿನ ಕನ್ಯಾಕೋಳೂರ ಗ್ರಾಮದ ಮೂಲಕ ತಿಪ್ಪನಳ್ಳಿ ಗ್ರಾಮ ಸಂಪರ್ಕ ಕಲ್ಪಿಸುವ ಹಳ್ಳದ ಸೇತುವೆ ಮಧ್ಯದಲ್ಲಿ ಕಂದಕಗಳು ಬಿದ್ದಿದ್ದು ಅಲ್ಲದೆ ತಡೆ ಗೋಡೆ ಇಲ್ಲದ ಸೇತುವೆ ಅಪಾಯಕ್ಕೆ ಆಹ್ವಾನಿಸುತ್ತಿದೆ.
ಈ ರಸ್ತೆ ಮೂಲಕ ನಿತ್ಯ ನೂರಾರು ವಾಹನಗಳ ಸಂಚಾರವಿದೆ. ರೈತಾಪಿ ಜನರು ಇದೇ ರಸ್ತೆ ಮಾರ್ಗವಾಗಿ ನಿತ್ಯ ತಮ್ಮ ತಮ್ಮ ಜಮೀನುಗಳಿಗೆ ಕೃಷಿ ಚಟುವಟಿಕೆಗಳಿಗಾಗಿ ಜಾನುವಾರು, ಎತ್ತಿನ ಬಂಡಿ, ಬೈಕ್, ಟ್ರ್ಯಾಕ್ಟರ್ ಸಮೇತ ಸಂಚಾರ ಜಾಸ್ತಿ .
ಅಲ್ಲದೆ ಶಹಾಪುರ ಸೇರಿದಂತೆ ಸುರಪುರ ಮತು ಸಗರ ಹೋಬಳಿಗೆ ತೆರಳಲು ಇದೇ ರಸ್ತೆ ಮಾರ್ಗ ಅನುಕೂಲವಿದೆ ಎನ್ನುತ್ತಾರೆ ಕನ್ಯಾಕೋಳೂರ ಗ್ರಾಮಸ್ಥರು.
ಆದರೆ ಈ ರಸ್ತೆ ಮಧ್ಯೆ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು, ತಡೆ ಗೋಡೆ ಇಲ್ಲದ ಸೇತುವೆ ದಾಟಲು ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ನಿತ್ಯ ಸಾವಿರಾರ ಜನರ ಓಡಾಟವಿದ್ದು, ಕೂಡಲೇ ರಸ್ತೆ ದುರಸ್ತಿ ಸೇರಿದಂತೆ ಸೇತುವೆಗೆ ತಡೆಗೋಡೆ ನಿರ್ಮಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಟಂಟಂ ಆಟೋಗಳ ಸೌಲಭ್ಯ ಜಾಸ್ತಿ ಇದ್ದು, ಇದೇ ರಸ್ತೆ ಮೇಲೆ ಸಂಚರಿಸುತ್ತಾರೆ. ಸಮರ್ಪಕ ಬಸ್ ಸೌಲಭ್ಯ ವಿಲ್ಲದ ಕಾರಣ, ಜನರು ಟಂಟಂ ಆಟೋದಲ್ಲಿ ಸಂಚರಿಸುವಂತ ಅನಿವಾರ್ಯತೆ ಎದುರಾಗಿದೆ. ಹದಗೆಟ್ಟ ರಸ್ತೆ ಮತ್ತು ತಡೆ ಗೋಡೆಯಿಲ್ಲದ ಸೇತುವೆ ಸಂಚಾರಕ್ಕೆ ನಾಗರಿಕರು ಜೀವಭಯದಿಂದಲೇ ಪ್ರಯಾಣಿಸುವಂತಾಗಿದೆ.
ಹಳ್ಳಕ್ಕೆ ನಿರ್ಮಿಸಿದ ಸೇತುವೆಯೂ ಅಭದ್ರತೆಯಿಂದ ಕೂಡಿದ್ದು, ಕೂಡಲೇ ಸುಭದ್ರ ಸೇತುವೆ ಮತ್ತು ತಡೆಗೋಡೆ ನಿರ್ಮಿಸಬೇಕು. ಅಲ್ಲದೆ ರಸ್ತೆ ದುರಸ್ತಿಗೊಳಿಸುವ ಮೂಲಕ ನಾಗರಿಕರ ಸುಲಭ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂದು ಡಿ.ವೈ.ಎಫ್.ನ ವಿದ್ಯಾರ್ಥಿ ಘಟಕದ ಮುಖಂಡ ಭೀಮರಾಯ ಪೂಜಾರಿ ಒತ್ತಾಯಿಸಿದ್ದಾರೆ.