
ಇಲಿ ಮೇಲೆ ಗಣೇಶ ಅದ್ಹೇಗೆ ಸವಾರಿ ಮಾಡಲು ಸಾಧ್ಯ..? ಓದಿ
ಗಣೇಶನ ವಾಹನ ಇಲಿ ಹೇಗಾಯಿತು..! ಪುರಾಣ ಕಥೆ
ವಿನಯವಾಣಿ
ಗಣೇಶನ ಬಗ್ಗೆ ಹಲವು ಪುರಾಣ, ಶಾಸ್ತ್ರ, ಗ್ರಂಥಗಳಲ್ಲಿ ಹಲವಾರು ಕಥೆಗಳು ಇವೆ.
ಒಂದೂರಲ್ಲಿ ಓರ್ವ ಕ್ರೌಂಚ ಎಂಬ ಒಬ್ಬ ಸಂಗೀತಗಾರನಿದ್ದ. ಆತ ಬಹಳ ಅಹಂಕಾರಿ ಅನ್ನೋದಕ್ಕಿಂತ ದುರಹಂಕಾರಿಯಾಗಿದ್ದ.
ಆತ ಒಮ್ಮೆ ನಡೆದುಕೊಂಡು ಹೋಗುತ್ತಿರುವಾಗ ಆಕಸ್ಮಿಕವಾಗಿ ಒಬ್ಬ ಋಷಿ ಮುನಿಯ ಪಾದವನ್ನು ತುಳಿದುಬಿಟ್ಟ. ಇದರಿಂದ ಕೋಪಗೊಂಡ ಋಷಿಮುನಿಗಳು ಆ ಸಂಗೀತಗಾರ ಕ್ರೌಂಚನಿಗೆ ನೀನು ಈ ಕ್ಷಣದಿಂದಲೇ ಇಲಿಯಾಗಿ ಓಡಾಡು ಎಂದು ಶಾಪವಿಟ್ಟು ಬಿಟ್ಟ.
ಆಗ ಮೊದಲೇ ದೈತ್ಯಕಾರ ಹೊಂದಿದ್ದ ಕ್ರೌಂಚ ತಕ್ಷಣವೇ ಒಂದು ದೊಡ್ಡ, ದೈತ್ಯಾಕಾರದ ಇಲಿಯಾಗಿ ಬದಲಾದ. ಅಂದಿನಿಂದ ಇಲಿಯಾದ ಕ್ರೌಂಚ ಹೊಲ, ತೋಟಗಳಲ್ಲಿದ್ದ ಜನರನ್ನು ಹೆದರಿಸಿ, ಬೆಳೆ, ಮನೆಗಳನ್ನು ನಾಶ ಮಾಡಲು ಪ್ರಾರಂಭಿಸಿದ. ಅಲ್ಲದೆ ಆಶ್ರಮಗಳಿಗೂ ನುಗ್ಗಿ ಕಿರಿಕಿರಿ ಉಂಟು ಮಾಡ ತೊಡಗಿತು. ಜೊತೆಗೆ ಧ್ಯಾನ ಮಾಡುವ ಋಷಿಮುನಿಗಳಿಗೂ ಸಹ ತೊಂದರೆ ಕೊಡಲು ಶುರು ಮಾಡಿತು.
ಈ ದೈತ್ಯಕಾರದ ಇಲಿಯಿಂದ ಬೇಸತ್ತ ಹೋಗಿದ್ದ ಋಷಿಮುನಿಗಳು ಒಮ್ಮೆ ಗಣೇಶನಲ್ಲಿ ಪಾರ್ಥಿಸಿಕೊಂಡು, ಈ ಇಲಿಯಿಂದ ಆಗುತ್ತಿರುವ ವಿನಾಶದಿಂದ ನಮ್ಮನ್ನು ರಕ್ಷಿಸು ಎಂದು ಪ್ರಾರ್ಥಿಸಿಕೊಂಡರು.
ಆಗ ಪ್ರತ್ಯಕ್ಷನಾದ ಗಣೇಶ ಋಷಿಮುನಿಗಳ ಬೇಡಿಕೆ ಈಡೇರಿಸಲು ಇಲಿಯ ಜೊತೆಗೆ ಕಾದಾಟಕ್ಕಿಳಿದ.
ಗಣೇಶನನ್ನು ಸೋಲಿಸಲು ಇಲಿರಾಯ ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಗಣೇಶ ತನ್ನ ಉಪಾಯದಿಂದ ಇಲಿಯನ್ನು ಬಲೆಗೆ ಬೀಳಿಸಿಕೊಂಡು ತಕ್ಕ ಶಿಕ್ಷೆ ನೀಡಿದ. ಆಗ ಸೋಲನ್ನು ಒಪ್ಪಿಕೊಂಡ ಇಲಿರಾಯ ಕ್ಷಮೆಯಾಚಿಸಿತು. ಆಗ ಗಣೇಶ ಇಲಿಯ ಕ್ಷಮೆಗೆ ಮನ್ನಿಸಿ ಇಂದಿನಿಂದ ನೀನು ನನ್ನ ವಾಹನವಾಗಿರು ಎಂದು ಸೂಚಿಸಿದ.
ಅಂದಿನಿಂದ ಇಲಿಯು ಮೂಷಕನಾಗಿ ಬದಲಾಗಿ ಗಣೇಶನ ಸೇವೆಯಲ್ಲಿ ತೊಡಗಿತು. ಇದು ಪುರಾಣ ಸೇರಿದಂತೆ ಹಲವಾರು ಕಥೆಗಳಲ್ಲಿ ಬರುವ ಪ್ರಸಂಗವಾಗಿದೆ.