ಯಾದಗಿರಿಯ ಬೀದಿಯಲಿ ಯುವಕರು ಬಡಿಗೆ ಹಿಡಿದು ಬಡಿದಾಡಿದ್ದೇಕೆ?
ಯಾದಗಿರಿ: ನಗರದ ಸ್ವಪ್ನ ಮೈದಾನದ ಬಳಿ ಯುವಕರ ಗುಂಪು ಬಡಿಗೆಗಳನ್ನಿಡಿದು ಹೊಡೆದಾಟ ನಡೆಸಿದ ಘಟನೆ ನಡೆದಿದೆ. ಪರಿಣಾಮ ಸ್ಥಳದಲ್ಲಿ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬೀದಿ ಕಾಳಗಕ್ಕಿಳಿದ ಯುವಕರನ್ನು ಕಂಡು ಜನ ದಂಗಾಗಿದ್ದರು. ಸುಮಾರು 20ಕ್ಕೂ ಹೆಚ್ಚು ಜನ ಯುವಕರು ಬೀದೀಲಿ ಬಡಿದಾಡಿಕೊಂಡಿದ್ದಾರೆ. ಯುವಕರ ಗುಂಪು ಘರ್ಷಣೆಗೆ ಕಾರಣವೇನೆಂಬುದು ಕೇಳಿದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಫೇಸ್ ಬುಕ್ ಫೇಕ್ ಅಕೌಂಟ್ ಮಾಡಿಕೊಂಡು ಒಯಕ್ತಿಕ ತೇಜೋವಧೆ ಮಾಡಲಾಗುತ್ತಿತ್ತಂತೆ. ಹೀಗಾಗಿ, ಎರಡು ಗುಂಪುಗಳ ಮಧ್ಯೆ ಇಂದು ಮಾತಿಗೆ ಮಾತು ಬೆಳೆದು ಘರ್ಷಣೆ ನಡೆದಿದೆಯಂತೆ. ಸುಮಾರು ಅರ್ಧಗಂಟೆ ಕಾಲ ಯುವಕರು ಬಡಿಗೆ ಹಿಡಿದು ಬಿದೀಲಿ ಹೊಡೆದಾಟದಲ್ಲಿ ತೊಡಗಿದ್ದಾರೆ.
ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಆದರೆ, ಪೊಲೀಸರು ಬಂದ ಸುಳಿವು ಸಿಗುತ್ತಿದ್ದಂತೆ ಯುವಕರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಘರ್ಷಣೆಯಲ್ಲಿ ಸುಮಾರು 8 ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಯಾದಗಿರಿ ನಗರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘರ್ಷಣೆಯಲ್ಲಿ ತೊಡಗಿದವರ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಆದರೆ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಯುವಕರು ಬೀದಿ ಕಾಳಗಕ್ಕಿಳಿದಿದ್ದು ನಗರದ ನಾಗರಿಕರು ತಲೆ ತಗ್ಗಿಸುವಂತೆ ಮಾಡಿದೆ. ಹೀಗಾಗಿ, ಪೊಲೀಸರು ಕೂಡಲೇ ಘರ್ಷಣೆಯಲ್ಲಿ ತೊಡಗಿದ ಯುವಕರನ್ನು ಬಂಧಿಸಿ ತಕ್ಕಪಾಠ ಕಲಿಸಬೇಕಿದೆ. ಇಲ್ಲವಾದಲ್ಲಿ ಬೀದಿ ಕಾಳಗದಲ್ಲಿ ತೊಡಗಿದ ಈ ಯುವಪಡೆ ಮತ್ತಷ್ಟು ಅಪಾಯಕಾರಿಯಾಗಿ ಬೆಳೆಯುವ ಸಾಧ್ಯತೆ ಇದೆ ಎಂಬುದು ಸ್ಥಳೀಯ ನಾಗರಿಕರ ಅಭಿಪ್ರಾಯವಾಗಿದೆ.