ಶಹಾಪುರಃ ಜೈಭವಾನಿ, ಟಾನಿಕ್ ದಾಭಾ ಮೇಲೆ ಪೊಲೀಸರ ದಾಳಿ
ಅಕ್ರಮ ಮದ್ಯ ಮಾರಾಟ ದಾಭಾಗಳ ಮೇಲೆ ದಾಳಿ
ಯಾದಗಿರಿಃ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯ ಜೈ ಭವಾನಿ ಮತ್ತು ಶಹಾಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಟಾನಿಕ್ ದಾಭಾಗಳ ಮೇಲೆ ದಾಳಿ ನಡೆಸಿ, ದಾಭಾ ಮಾಲೀಕರÀನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಸೋನವಣೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಹಾಪೂರ ಹಾಗೂ ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕೆಲವು ದಾಭಾಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಅಪರಾಧ ಪತ್ತೆ ದಳದ ಪೊಲೀಸ್ ಇನ್‍ಸ್ಪೆಕ್ಟರ್ ಸದಾಶಿವ ಎಸ್. ಮತ್ತು ಸಿಬ್ಬಂದಿ ಮಹಾಂತೇಶ, ನಾಗರಾಜ ಹಾಗೂ ಮಹೇಶ ಅವರೊಂದಿಗೆ ದಾಳಿ ನಡೆಸಲಾಗಿದೆ.
ರಬನಳ್ಳಿ ಕ್ರಾಸ್ ಹತ್ತಿರ ಇರುವ ಜೈ ಭವಾನಿ ದಾಭಾದ ಮೇಲೆ ದಾಳಿ ಮಾಡಿ ಆರೋಪಿತನಿಂದ 5,509 ರೂ. ಮೌಲ್ಯದ ವಿವಿಧ ಮಾದರಿಯ ಮದ್ಯ ಹಾಗೂ 530 ರೂ. ನಗದು ಜಪ್ತಿ ಮಾಡಿದ್ದು, ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅದೇ ರೀತಿ ಶಹಾಪುರ ಹೊಸ ತಹಸೀಲ್ ಕಚೇರಿ ಹತ್ತಿರ ಇರುವ ಟಾನಿಕ್ ದಾಭಾದ ಮೇಲೆ ದಾಳಿ ಮಾಡಿ ಆರೋಪಿತರಿಂದ 8067.32 ರೂ. ಮೌಲ್ಯದ ವಿವಿಧ ಮಾದರಿಯ ಮದ್ಯ ಹಾಗೂ 3,400 ರೂ. ನಗದು ಜಪ್ತಿ ಮಾಡಿದ್ದು, ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.