ದೇವರ ಚಿತ್ರಕ್ಕೆ ಬೆಂಕಿಯಿಟ್ಟು ಮತಾಂತರಕ್ಕೆ ಮುಂದಾದ ದಲಿತರು?
ಕಲುರಗಿ: ಫೆಬ್ರವರಿ 09ರಂದು ಜೇವರಗಿ ತಾಲೂಕಿನ ಕೊಂಡಗುಳಿ ಗ್ರಾಮದ ಮರೆಮ್ಮ ದೇವಿ ಜಾತ್ರೆ ಅಂಗವಾಗಿ ರಥೋತ್ಸವ ನಡೆಯುವ ವೇಳೆ ತೇರು ಎಳೆಯುವ ವಿಚಾರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ ಸಂಭವಿಸಿತ್ತು. ದಲಿತರು ತೇರು ಎಳೆಯಲು ಮುಂದಾಗಿದ್ದಕ್ಕೆ ಸವರ್ಣೀಯರು ವಿರೋಧ ವ್ಯಕ್ತಪಡಿಸಿದ್ದರೆಂಬ ಆರೋಪ ಕೇಳಿಬಂದಿತ್ತು. ಘರ್ಷಣೆಯಲ್ಲಿ 15ಜನ ಗಾಯಗೊಂಡಿದ್ದು ವಿಜಯಪುರ ಜಿಲ್ಲೆಯ ಸಿಂದಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಬಗ್ಗೆ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಫೆಬ್ರವರಿ 10ರಂದು ದಲಿತ ಮುಖಂಡರು ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಎರಡು ಸಮುದಾಯಗಳ ಮದ್ಯೆ ಕಲ್ಲು ತೂರಾಟ ನಡೆದಿತ್ತು. ಪರಿಣಾಮ ಹಿಂದೂ ಧರ್ಮದಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತವಿದ್ದು ದಲಿತರನ್ನು ಕೀಳುಮಟ್ಟದಿಂದ ಕಾಣಲಾಗುತ್ತಿದೆ. ಹಾಗಾದರೆ ಹಿಂದೂ ಧರ್ಮದಲ್ಲಿ ನಾವಿದ್ದರೇನು ಪ್ರಯೋಜನ ಎಂದು ದಲಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಮನೆಗಳಲ್ಲಿರುವ ದೇವರ ಚಿತ್ರಗಳಿಗೆ ಬೆಂಕಿಯಿಟ್ಟು ಸಿಟ್ಟು ಹೊರಹಾಕಿದ್ದಾರೆ. ಹಿಂದೂ ಧರ್ಮ ತೊರೆದು ಬೌದ್ಧ ಧರ್ಮ ಸ್ವೀಕರಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.