ಗೌರಿ ಹಂತಕರ ಬಂಧನಕ್ಕೆ ಒಂದು ವಾರ ಗಡುವು ನೀಡಿದ ಪ್ರಗತಿಪರರು
ಗೌರಿ ಹಂತಕರ ಬಂಧನಕ್ಕೆ ಒಂದು ವಾರ ಗಡುವು ನೀಡಿದ ಪ್ರಗತಿಪರರು
ಬೆಂಗಳೂರಃ ಗೌರಿ ಲಂಕೇಶ ಹತ್ಯೆ ಖಂಡಿಸಿ ನಗರದಲ್ಲಿಂದು ‘ನಾನೂ ಗೌರಿ’ ಬ್ಯಾನರನಡಿ ಪ್ರತಿರೋಧ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶದ ಅಂಗವಾಗಿ ಸಿಟಿ ರೈಲ್ವೆ ನಿಲ್ದಾಣದಿಂದ ಸೆಂಟ್ರಲ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಇದೇ ವೇಳೆ ಗೌರಿ ಹತ್ಯೆಗೈದ ಹಂತಕರನ್ನು ಕೂಡಲೇ ಬಂಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ ಪ್ರತಿರೋಧ ಸಮಾವೇಶದಲ್ಲಿ ಪಾಲ್ಗೊಳ್ಳಲು ನಾಡಿನ ಮೂಲೆಮೂಲೆಯಿಂದ ಭಾರೀ ಪ್ರಮಾಣದಲ್ಲಿ ಜನ ಸಮಾವೇಶಗೊಂಡಿದ್ದಾರೆ. “ನಾನು ಗೌರಿ, ನಾವೆಲ್ಲರೂ ಗೌರಿ” ಎಂಬ ಘೋಷಣೆಯೊಂದಿಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಚಿಂತಕಿ ಕೆ.ನೀಲಾ, ಪತ್ರಕರ್ತೆ ಗೌರಿ ಪ್ರಗತಿಪರ ಚಿಂತಕಿ ಆಗಿದ್ದರು. ಮೌಢ್ಯ ಆಚರಣೆಯನ್ನು ನಿಶ್ಚಿಂತೆಯಿಂದ ಎದುರಿಸುತ್ತಿದ್ದರು. ಸರ್ವಸಮಾನತೆಗಾಗಿ, ಶೋಷಿತರ ಏಳ್ಗೆಗಾಗಿ ಶ್ರಮಿಸುತ್ತಿದ್ದರು. ಶಾಂತಿ, ಸೌಹಾರ್ಧ ಸಮಾಜ ನಿರ್ಮಾಣಕ್ಕಾಗಿ ಹಾತೊರೆಯುತಿದ್ದರು. ಅಂಥ ಗೌರಿ ಅವರನ್ನು ಕೊಲೆ ಮಾಡಿದ ಖದೀಮರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು.
ರಾಜ್ಯ ಸರ್ಕಾರಕ್ಕೆ ಒಂದು ವಾರ ಗಡುವು ನೀಡಲಾಗುವುದು ಅಷ್ಟರಲ್ಲಿ ಕೊಲೆಗಡುಕರನ್ನು ಬಂಧಿಸಬೇಕು. ಇಲ್ಲವಾದಲ್ಲಿ ಪ್ರತಿಯೊಬ್ಬರೂಗೌ ರಿಯಾಗುತ್ತೇವೆ. ರಾಜ್ಯದಾದ್ಯಂತ ರಸ್ತೆಗಿಳಿದು ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಚಿಂತಕಿ ಬಿ.ಟಿ.ಲಲಿತಾ ನಾಯಕ ಸೇರಿದಂತೆ, ಪತ್ರಕರ್ತರು, ಚಿಂತಕರು, ದಲಿತ ನಾಯಕರು, ಎಎಪಿ, ಎಸ್ಡಿಪಿಐ ಮುಖಂಡರು, ಅನೇಕ ಬುದ್ಧಿಜೀವಿಗಳು ಪ್ರಗತಿಪರ ಹೋರಾಟಗಾರರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ.