ಗೌರಿ ಹತ್ಯೆಗೆ ನಾಡಿನೆಲ್ಲೆಡೆ ಆಕ್ರೋಶ ; ಸಾಹಿತಿ ಕಣವಿ, ದೇವನೂರು, ಕುಂವೀ ಹೇಳಿದ್ದೇನು..?
ಯಾದಗಿರಿ, ಶಹಾಪುರ, ಸುರಪುರದಲ್ಲಿ ಪ್ರತಿಭಟನೆ
ಇದು ಮೌಲ್ಯದ ಕೊಲೆ – ಸಾಹಿತಿ ದೇವನೂರು ಮಹಾದೇವ
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ರಕ್ತ ಕರ್ನಾಟಕದ ಮನೆಮನೆಗೆ ಚೆಲ್ಲಿದೆ. ಇದು ವ್ಯಕ್ತಿಯ ಕೊಲೆ ಅಲ್ಲ ಇದೊಂದು ಮೌಲ್ಯದ ಕೊಲೆ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಮೈಸೂರಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ವೈಚಾರಿಕತೆ ನೆಲೆಗಟ್ಟಿನಲ್ಲಿ ಬಾಳುತ್ತಿರುವ ಹಲವರ ಮೇಲೆ ಇಂತಹ ದುಷ್ಟ ಶಕ್ತಿಗಳು ಕಣ್ಣಿಟ್ಟಿವೆ. ತಮಗೆ ಇಷ್ಟ ಇಲ್ಲದೇ ಇರೋರು ಭೂಮಿ ಮೇಲೆ ಬದುಕಿರಬಾರದು ಎಂಬ ಮನೋವೃತ್ತಿ ಹೆಚ್ಚಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ವಿಷಾಧಿಸಿದರು.
ಅಲ್ಲದೆ ಇಂತಹ ಘಟನೆಗಳಿಗೆ ಮೂಲ ಕಾರಣ ನಿರುದ್ಯೋಗ. ನಿರುದ್ಯೋಗಿಗಳು ಕೆಲಸವಿಲ್ಲದೆ ಕೊನೆಗೆ ಹೇಗಾದರೂ ಬದುಕಬೇಕು ಎಂಬ ಮನಸ್ಥಿತಿಯಿಂದ ಇಂತಹ ಕೊಲೆ ಮಾಡುವಂತ ಹೀನಕೃತ್ಯಕ್ಕೆ ಇಳಿಯುತ್ತಿದ್ದಾರೆ. ಇನ್ನಾದರೂ ನಿರುದ್ಯೋಗ ನಿವಾರಣೆಗೆ ಸರ್ಕಾರ ಮುಂದಾಗಬೇಕಿದೆ. ಬಡವ -ಬಲ್ಲಿದ ನಡುವೆ ಅಂತರ ಕಡಿಮೆಯಾಗಬೇಕು. ಆ ನಿಟ್ಟಿನಲ್ಲಿ ಸರ್ಕಾರು ಗುರುತರ ಜವಬ್ದಾರಿ ಹೊತ್ತು ಕಾರ್ಯಕ್ರಮಗಳನ್ನು ರೂಪಿಸಿಬೇಕಿದೆ. ಗೌರಿ ಹತ್ಯೆ ವೈಚಾರಿಕತೆಯ ಹತ್ಯೆ.ವಾಗಿದ್ದು, ಕೂಡಲೇ ದುಷ್ಕರ್ಮಿಗಳನ್ನು ಬಂಧಿಸುವ ಮೂಲಕ ನಾಡಿನ ಜನತೆಗೆ ಧೈರ್ಯ ತುಂಬಬೇಕಿದೆ ಎಂದರು.
ಕೊಲೆಗಡುಕರ ಬಂಧನಕ್ಕೆ ಸಾಹಿತಿ ಕುಂವೀ ಆಗ್ರಹ
ಸಾಹಿತಿ ಕುಂ.ವೀರಭದ್ರಪ್ಪನವರು ಚಿತ್ರದುರ್ಗದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಗೌರಿ ಲಂಕೇಶ ಅವರ ಹತ್ಯೆಯನ್ನು ತೀವ್ರವಾಗಿ ಖಂಡಿಸಿದರು. ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಹತ್ಯೆಯಾಗಿ ಎರಡು ವರ್ಷ ಕಳೆದರೂ ಸರ್ಕಾರ ಇದುವರೆಗೂ ಹಂತಕರನ್ನು ಬಂಧಿಸಲು ಆಗಿಲ್ಲ. ಕಲಬುರ್ಗಿಯವರ ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದರೆ ಹೀಗಾಗುತ್ತಿರಲಿಲ್ಲ. ಇದೊಂದು ಹೇಯ ಕೃತ್ತ. ಅಭಿವೈಕ್ತಿ ಸ್ವಾತಂತ್ರ್ಯದ ಮೇಲಿನ ಹತ್ಯೆ, ಗೌರಿ ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಾಕಷ್ಟು ಶ್ರಮಿಸಿದ್ದರು. ನಾಡಿನಲ್ಲಿ ಇಬ್ಬರು ದಿಗ್ಗಜ ವಿಚಾರವಾದಿಗಳನ್ನು ಕೊಲೆ ಮಾಡಲಾಯಿತು. ಸರ್ಕಾರ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ದೇಶ ಫ್ಯಾಸಿಸಂ ಕಡೆವಾಲುತ್ತಿದೆ ಎಂದು ತಿಳಿಸಿದರು. ಕೊಲೆಗಡುಕರು ಯಾರೆಂದು ಮೇಲ್ನೋಟಕ್ಕೆ ಕಂಡು ಬಂದರೂ ಅವರನ್ನು ಬಂಧಿಸುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿರಿಯ ಸಾಹಿತಿ ಚನ್ನವೀರ ಕಣವಿ ಆಕ್ರೋಶ
ಧಾರವಾಡನಲ್ಲಿ ಮಾತನಾಡಿದ ಹಿರಿಯ ಸಾಹಿತಿ ಚನ್ನವೀರ ಕಣವಿ, ಗೌರಿ ಲಂಕೇಶ ಹತ್ಯೆ ಅಮಾನವೀಯವಾದ ಅಮಾನುಷ ಕೃತ್ಯವಾಗಿದೆ. ಇದು ಖಂಡನೀಯವಾದದು, ಕೂಡಲೇ ಹಂತಕರನ್ನು ಪತ್ತೆ ಮಾಡಬೇಕು ಎಂದು ಆಗ್ರಹಿಸಿದರು. ಅಲ್ಲದೆ ಗೌರಿಯವರು, ವೈಚಾರಿಕತೆ ಬರಹಗಾರರಾಗಿದ್ದರು. ಅನಾಚಾರ, ಮೌಢ್ಯಾಚರಣೆ ವಿರುದ್ಧ ತಮ್ಮ ಬರಹದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ನಾಡಿನಲ್ಲಿ ಇದು ಎರಡನೇ ವಿಚಾರವಾದಿ ಕೊಲೆ. ಕಲಬುರ್ಗಿಯವರನ್ನು ಕೊಲೆ ಮಾಡಿದ ಹಂತಕರ ಹಿಡಿಯುವಲ್ಲಿ ಪೊಲೀಸರು ವಿಫಲವಾಗಿದ್ದು, ಇದನ್ನು ವಿಳಂಬ ರೀತಿ ಅನುಸರಿಸಬಾರದು ಎಂದು ತಿಳಿಸಿದರು.
ಎಲ್ಲೆಡೆ ವ್ಯಾಪಕ ಖಂಡನೆ , ಪ್ರತಿಭಟನೆ, ಆಕ್ರೋಶ
ನಾಡಿನ ಹಲವಡೆ ಗೌರಿ ಲಂಕೇಶ ಅವರ ಹತ್ಯೆ ಖಂಡಿಸಿ ಹಲವಾರು ಸಂಘಟನೆಗಳು, ಪತ್ರಕರ್ತರು ಪ್ರತಿಭಟನೆ ನಡೆಸಿದ್ದಾರೆ. ಕಲಬುರ್ಗಿ, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ ಸೇರಿದಂತೆ ಯಾದಗಿರಿ, ಶಹಾಪುರ ಮತ್ತು ಸುರಪುರದಲ್ಲಿಯೂ ಪ್ರತಿಭಟನೆಗಳು ಜರುಗಿವೆ.
ಶಹಾಪುರದಲ್ಲಿ ಸಿಪಿಐಎಂ, ಎಸ್ಡಿಪಿಐ, ಎಎಸ್ಐಒ, ಕರ್ನಾಟಕ ದಲಿತ ಸಂರ್ಘಷ ಸಮಿತಿ ಸೇರಿದಂತೆ ಇತರೆ ಸಂಘ, ಸಂಸ್ಥೆಗಳು ಮತ್ತು ಕಾರ್ಯನಿರತ ಪತ್ರಕರ್ತರ ಸಂಘ ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಪ್ರತ್ಯೇಕವಾಗಿ ಮನವಿ ಪತ್ರ ಸಲ್ಲಿಸಿದರು. ಗೌರಿ ಲಂಕೇಶರನ್ನು ಕೊಲೆಗೈದ ಹಂತಕರನ್ನು ಕೂಡಲೇ ಬಂಧಿಸಬೇಕು. ಬಹಿರಂಗವಾಗಿ ಅವರಿಗೆ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.