ಪ್ರಮುಖ ಸುದ್ದಿ

ಶಹಾಪುರಃ ಗೌರಿ ಹತ್ಯೆಗೆ ಖಂಡನೆ, 3ದಿನ ಕಳೆದರೂ ಆರೋಪಿಗಳ ಪತ್ತೆ ಹಚ್ಚುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲ ಆರೋಪ

ಗೌರಿ ಲಂಕೇಶ ಹತ್ಯೆ ಖಂಡಿಸಿ ಬೃಹತ್ ಪ್ರತಿಭಟನೆ

ಶಹಾಪುರ: ವಿಚಾರವಾದಿ ಗೌರಿ ಲಂಕೇಶ ಅವರ ಹತ್ಯೆಯನ್ನು ಖಂಡಿಸಿ ಹಾಗೂ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ದಲಿತ ಸಂಘಟನೆಗಳ ಒಕ್ಕೂಟದಿಂದ ಶನಿವಾರ ಬೃಹತ್ ಪ್ರತಿಭಟನೆ ಜರುಗಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ನಿಜಗುಣ ದೋರನಹಳ್ಳಿ, ವಿಚಾರವಾದಿ, ಪತ್ರಕರ್ತೆ ಗೌರಿ ಲಂಕೇಶ ಕೊಲೆ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಮೂಲಕ ಪ್ರತಿಯೊಬ್ಬ ಪ್ರಜೆಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಲಾಗಿದೆ. ಆದರೆ ಸಾಮಾಜಿಕ ವ್ಯವಸ್ಥೆಯ ವಿರುದ್ಧ ಮಾತನಾಡಲು ಅವಕಾಶವೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣುಕಿಸಿದಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನರೇಂದ್ರ ದಾಬೋಳಕರ, ಗೋವಿಂದ ಪನಸರೆ, ಡಾ.ಎಂ.ಎಂ.ಕಲಬುರಗಿಯವರ ಹತ್ಯೆಗಳು ಜನರ ನೆನಪಿನಲ್ಲಿ ಇನ್ನೂ ಹಸಿಯಾಗಿರುವಾಗಲೇ ವಿಚಾರವಾದಿ ಗೌರಿ ಲಂಕೇಶರ ಹತ್ಯೆ ನಡೆದಿರುವುದು ನಾಗರಿಕರಲ್ಲಿ ಆತಂಕ ಮೂಡಿಸಿದೆ.

ಅಲ್ಲದೆ ಗೌರಿ ಲಂಕೇಶರನ್ನು ಕೊಂದು ಮೂರು ದಿನಗಳೇ ಕಳೆದರೂ ಯಾರೊಬ್ಬರನ್ನು ಬಂಧಿಸಲು ಸರ್ಕಾರದಿಂದ ಆಗಿರುವದಿಲ್ಲ. ಇದು ಖಂಡನೀಯವಾದುದು. ಪಕ್ಷಾತೀತವಾಗಿ ಇದನ್ನು ಖಂಡಿಸಲೇಬೇಕಿದೆ. ರಾಜಧಾನಿ ಪ್ರದೇಶದಲ್ಲಿ ನಡೆದ ಘಟನೆ ಕುರಿತು ಕೊಲೆಗಡುಕರನ್ನು ಹಿಡಿಯಲು ಆಗುತ್ತಿಲ್ಲವೆಂದರೆ, ಜನರ ಸ್ಥಿತಿ ಏನಾಗಬೇಡ ಎಂದು ವಿಷಾಧಿಸಿದರು.

ಕಳೆದ ಎರಡು ವರ್ಷದ ಹಿಂದೆ ಸಂಶೋಧಕ ಕಲಬುರ್ಗಿಯವರನ್ನು ಇದೇ ಮಾದರಿಯಲ್ಲಿ ಹತ್ಯೆ ಮಾಡಲಾಗಿತ್ತು. ಇಲ್ಲಿವರೆಗೂ ಕೊಲೆಗೆ ಸಂಬಂಧಿಸಿದಂತೆ ಯಾರೊಬ್ಬರನ್ನು ಬಂಧಿಸದಿರುವುದು ನಾಚಿಕೆಗೇಡು. ಜನ ರೊಚ್ಚಿಗೇಳುವ ಮುನ್ನ ಸರ್ಕಾರ ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅಲ್ಲದೆ ಪ್ರಗತಿಪರ ಹೋರಾಟಗಾರರಾದ ಬಾಸ್ಕರ್ ಪ್ರಸಾದರವರಿಗೆ ನಿನ್ನೆ ದೂರವಾಣಿ ಮುಖಾಂತರ ಜೀವ ಬೆದರಿಕೆ ಬಂದಿದೆ. ಈ ಕುರಿತು ಪೊಲೀಸರು ತೀವ್ರ ತನಿಖೆ ಕೈಗೊಂಡು ಕ್ರಮ ಜರುಗಿಸಬೇಕಿದೆ. ಮತ್ತು ನಾಡಿನ ಪ್ರಗತಿಪರ ಚಿಂತಕರು ಹೋರಾಟಗಾರರಾದ ನಿಡುಮಾಮಿಡಿ ಚನ್ನಮಲ್ಲ ಸ್ವಾಮೀಜಿ, ಪ್ರೊ. ಕೆ.ಎಸ್.ಭಗವಾನ್, ಬೆಳಗಾವಿಯ ನಿಜಗುಣಾನಂದ ಸ್ವಾಮೀಜಿ ಮತ್ತು ಯೋಗೇಶ್ ಮಾಸ್ಟರ್‍ರವರಿಗೆ ಪೊಲೀಸರು ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದರು. ಸ್ಥಳಕ್ಕೆ ಆಗಮಿಸಿದ ಗ್ರಾ.ಪಂ ಅಧಿಕಾರಿಗಳಿಗೆ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಬರೆದ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಈರಪ್ಪ ಕಸನ್, ಶರಣು ದೋರನಹಳ್ಳಿ, ಹಣಮಂತ ಕಸನ್, ನಿಂಗಣ್ಣ ಹಾಲಬಾವಿ, ಮಾನಯ್ಯ ಬಡಿಗೇರ, ನಾರಾಯಣ ಬಡಿಗೇರ, ಬಲಭೀಮ ಬೇವಿನಹಳ್ಳಿ, ದೇವು ರಡ್ಡಿ, ವಿಠಲ್, ಮಲ್ಲಿಕಾರ್ಜುನ ಕುದುರಿ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button