ಪ್ರಮುಖ ಸುದ್ದಿ

ರಾಜ್ಯಪಾಲರು ಕೇಂದ್ರಸರ್ಕಾರದ ಪ್ರತಿನಿಧಿಯಾಗಿ ಕೆಲಸ ಮಾಡಬಾರದು -ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ತನ್ನ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವ ಮೂಲಕ ರಾಜ್ಯಪಾಲರು ತಾರತಮ್ಯವೆಸಗಿದ್ದು, ಅವರು ಭಾರತದ ರಾಷ್ಟ್ರಪತಿಯವರ ಪ್ರತಿನಿಧಿಗಳಾಗಿ ಕೆಲಸ ಮಾಡಬೇಕೆ ಹೊರತು ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಕೆಲಸ ಮಾಡಬಾರದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಮೇಲಿನ ತನಿಖೆಗಾಗಿ ರಾಜ್ಯಪಾಲರು ಅನುಮತಿ ನೀಡಲು ಲೋಕಾಯುಕ್ತದವರು ಮನವಿ ಮಾಡಿರುವ ಬಗ್ಗೆ ಮಾಧ್ಯಮದವರಿಗೆ ತಮ್ಮ ಪ್ರತಿಕ್ರಿಯೆ ನೀಡುತ್ತಾ, ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ನಲ್ಲಿ ನಡೆದ ಗಣಿಗಾರಿಕೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಲೋಕಾಯುಕ್ತದವರು 23-11-2023 ರಂದು ಅನುಮತಿ ಕೋರಿದ್ದು, ಆ ಬಗ್ಗೆ ರಾಜ್ಯಪಾಲರು ಯಾವುದೇ ನಿರ್ಣಯ ಕೈಗೊಳ್ಳದ ಕಾರಣ ,ಲೋಕಾಯುಕ್ತ ಮತ್ತೊಮ್ಮೆ ಕೋರಿದ್ದಾರೆ. ಆದರೆ 26-07-2024 ರಂದು ಅಬ್ರಾಹಂ ರವರು ತನ್ನ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿದ ತಕ್ಷಣ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದು, ಇಂತಹ ತಾರತಮ್ಯವೇಕೆ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.

ರಾಜ್ಯಪಾಲರನ್ನು ಮೂದಲಿಸಲಾಗಿದೆ ಎಂದು ಬಿಜೆಪಿಯವರು ಕಾಂಗ್ರೆಸ್ ನವರ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಶ್ರೀಮತಿ ಶಶಿಕಲಾ ಜೊಲ್ಲೆ , ಹೆಚ್.ಡಿ. ಕುಮಾರಸ್ವಾಮಿ , ಮುರುಗೇಶ್ ನಿರಾಣಿ, ಜನಾರ್ಧನ ರೆಡ್ಡಿನವರ ಮೇಲಿರುವ ಆರೋಪಗಳಿದ್ದು, ಇದುವರೆಗೆ ತನಿಖೆಗೆ ಆದೇಶಿಸಿರುವುದಿಲ್ಲ. ರಾಜ್ಯಪಾಲರ ಹುದ್ದೆ ಸಂವಿಧಾನಾತ್ಮಕವಾಗಿದ್ದು, ಅವರ ಮೇಲೆ ಗೌರವವಿದೆ. ಆದರೆ ರಾಜ್ಯಪಾಲರು ತಾರತಮ್ಯ ಧೋರಣೆ ಅನುಸರಿಸಬಾರದು ಎಂದರು.

 

Related Articles

Leave a Reply

Your email address will not be published. Required fields are marked *

Back to top button