ಶಹಾಪುರಃ ಸರ್ಕಾರಿ ನೌಕರರ ಸಂಘದಿಂದ ಪ್ರತಿಭಟನೆ
6 ನೇ ವೇತನ ಆಯೋಗದ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಮನವಿ
ಶಹಾಪುರ: 6ನೇ ವೇತನ ಆಯೋಗದ ವರದಿ ಅನುಷ್ಠಾನ ಮತ್ತು ಶೇ.30 ರಷ್ಟು ಮಧ್ಯಂತರ ಪರಿಹಾರ ನೀಡುವಂತೆ ಆಗ್ರಹಿಸಿ ತಾಲೂಕು ಸರ್ಕಾರಿ ನೌಕರರ ಸಂಘದವತಿಯಿಂದ ನಗರದಲ್ಲಿ ಪ್ರತಿಭಟನೆ ಮೆರವಣಿಗೆ ಮೂಲಕ ತಹಸೀಲ್ ಕಚೇರಿ ತಲುಪಿ ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿತು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು, ಕೇಂದ್ರ ಸರ್ಕಾರದ 7 ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಯಥಾವತ್ತಾಗಿ ರಾಜ್ಯ ಸರ್ಕಾರಿ ನೌಕರರಿಗೂ ಅನುಷ್ಠಾನಗೊಳಿಸಬೇಕು. ಅಲ್ಲದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳಲ್ಲಿ ಸಮಾನತೆ ತರುವ ಮೂಲಕ ಅನುಕೂಲ ಕಲ್ಪಿಸಬೇಕೆಂದು ಆಗ್ರಹಿಸಿದರು.
ಸಂಘದ ಬಹುದಿನದ ಬೇಡಿಕೆಯಂತೆ ರಾಜ್ಯ ಸರ್ಕಾರ ವೇತನ ಆಯೋಗ ರಚಿಸಿದೆ. ಆಯೋಗ ನೀಡುವ ವರದಿಯಂತೆ ನೌಕರರಿಗೆ ವೇತನ ಭತ್ಯೆ ಪಡೆಯುವ ಆಶಾಭಾವನೆ ಹೊಂದಿದ್ದು, 2017 ರೊಳಗಾಗಿ ಸಮರ್ಪಕ ಬೇಡಿಕೆ ಈಡೇರಿಸುವ ಮೂಲಕ ನೌಕರರ ಹಿತ ಕಾಪಾಡಬೇಕು ಎಂದು ಮನವಿ ಮಾಡಿತು.
ನೌಕರರ ಸಂಘವು ಸಮೀಪದ ಭೀಮರಾಯನ ಗುಡಿ ಯೋಜನಾ ಘಟಕದ ಅಡಿಯಲ್ಲಿ ಎಲ್ಲಾ ಇಲಾಖೆಯ ರಾಜ್ಯ ಸರ್ಕಾರಿ ನೌಕರರು ಆಡಳಿತ ಅಧಿಕಾರಿಗಳ ಕಟ್ಟಡದಿಂದ ಮೆರವಣಿಗೆ ಮೂಲಕ ನಗರದ ತಹಸೀಲ್ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿತು.
ಈ ಸಂದರ್ಭದಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸೇರಿದಂತೆ ನಾನಾ ಇಲಾಖೆಯ ಸರ್ಕಾರಿ ನೌಕರರು, ವಿವಿಧ ಇಲಾಖೆ ನೌಕರರ ಸಂಘ ಮತ್ತು ನಿವೃತ್ತ ಸರ್ಕಾರಿ ನೌಕರರ ಸಂಘದವರು ಭಾಗವಹಿಸಿದ್ದರು.
ವಿವಿಧ ಸಂಘದ ಮುಖಂಡರಾದ ಮಾನಪ್ಪ ಕೆ.ಜಾಲಿಬೆಂಚಿ, ಗೋಪಿಚಂದ ಚವ್ಹಾಣ, ಬಸವರಾಜ ಕೋರಿ, ತಿಮ್ಮಾರಡ್ಡಿ ಮ್ಯಾಕಲ್, ವೈಜನಾಥ ಪಾಟೀಲ್, ಸಿದ್ರಾಮಪ್ಪ ಶ್ಯಾವಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಸುಧಾಕರ ಗುಡಿ, ಪ್ರೀತಿ ದೆಸಾಯಿ, ಶರಣಬಸವ ಹೊಸಮನಿ, ಸೂಗರಡ್ಡಿ ಎಇಇ ಜಿ.ಪಂ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎ. ಬಸವರಾಜ ಹೂಗಾರ ಬಸವಂತಪೂರ ಉಪಸ್ಥಿತರಿದ್ದರು.