ಪ್ರಮುಖ ಸುದ್ದಿ

ಶರಣರ ವಿಚಾರ ಧಾರೆ ವ್ಯಕ್ತಿತ್ವದ ಭಾಗವಾಗಲಿಃ ಶಿರವಾಳ

ಶರಣ ಮಡಿವಾಳ ಮಾಚಿದೇವ ಜಯಂತ್ಯುತ್ಸವ

ಯಾದಗಿರಿಃ ಶರಣರ ವಿಚಾರಗಳನ್ನು ಗೌರವಿಸಿ ಜಯಂತಿ ಆಚರಣೆ ಮಾಡಿ ಮನೆ ಸೇರಿದರೆ ಅದು ಸಾರ್ಥಕತೆ ಪಡೆದುಕೊಳ್ಳುವದಿಲ್ಲ. ಶರಣರ ತತ್ವಾದರ್ಶ ಅಂತರಂಗದ ಧ್ವನಿಯಾಗುವ ವ್ಯಕ್ತಿತ್ವದ ಭಾಗವಾಗಿಸಿ ಆಚರಣೆಯಲ್ಲಿ ತರುವ ಪ್ರಯತ್ನ ಬಹುಮುಖ್ಯವಾಗಿದೆ ಎಂದು ಶಾಸಕ ಗುರು ಪಾಟೀಲ್ ಶಿರವಾಳ ಹೇಳಿದರು.

ಜಿಲ್ಲೆಯ ಶಹಾಪುರ ತಾಲೂಕಾ ಆಡಳಿತದಿಂದ ಇಲ್ಲಿನ ನಗರ ಸಭೆ ಆವರಣದಲ್ಲಿ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

12 ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಯ ಮೂಲಕ ಶರಣ ಪರಂಪರೆಯ ಅರಿವಿನ ಮಹತ್ವ ಸಾರಿದ ಕಾಯಕ ನಿಷ್ಠ ಮಡಿವಾಳ ಮಾಚಿದೇವರು ಪ್ರಮುಖರಾಗಿದ್ದಾರೆ. ಶರಣರ ಜೊತೆಗೆ ವಚನ ಗ್ರಂಥಗಳನ್ನು ರಕ್ಷಣೆ ಮಾಡಿದ ಕೀರ್ತಿ ಮಾಚಿದೇವರಿಗಿದೆ.

ಅವರು ಸರ್ವಕಾಲಕ್ಕೂ ಜೀವನ ಮೌಲ್ಯ ಹಾಗೂ ಸುಧಾರಣೆಯ ಮಾರ್ಗಗಳು ವಚನಕಾರರ ಆಲೋಚನೆಗಳಲ್ಲಿ ಅಡಗಿದ್ದು ಪ್ರತಿಯೊಬ್ಬರು ಪ್ರಸ್ತುತ ಸಂದರ್ಭದಲ್ಲಿ ಸರ್ಕಾರ ಯೋಜನೆಗಳನ್ನು ಅರ್ಥಪೂರ್ಣವಾಗಿ ಸದ್ಬಳಕೆ ಮಾಡಿಕೊಂಡು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ವಿಕಾಸಕ್ಕೆ ಮೇಲ್ಪಂಕ್ತಿಯಾಗಬೇಕು.
ಮನುಷ್ಯನ ವ್ಯಕ್ತಿತ್ವ ಅರಳುವಿಕೆಗೆ ಶಿಕ್ಷಣವೇ ಮೈಲಿಗಲ್ಲು. ಮಡಿವಾಳ ಸಮುದಾಯ ಪ್ರತಿಯೊಂದು ರಂಗದಲ್ಲಿಯು ಮುಂದೆ ಬರುವ ಪ್ರಯತ್ನ ಮಾಡಿದಾಗ ಶರಣರ ಜಯಂತಿ ಕಾರ್ಯಕ್ರಮಗಳಿಗೆ ಅರ್ಥ ಬರುತ್ತದೆ. ಸಮುದಾಯದ ಮುಖಂಡರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂದು ಕರೆ ನೀಡಿದರು.

ಉಪನ್ಯಾಸಕ ಡಾ.ರವೀಂದ್ರನಾಥ ಹೊಸ್ಮನಿ ಮಾತನಾಡಿ, ಮಾಚಿದೇವರು ಅನುಭವ ಮಂಟಪದ ಸದಸ್ಯರಾಗಿ ವಚನಗಳನ್ನು ರಚಿಸುತ್ತ, ಶರಣರ ಬಟ್ಟೆಯೊಡನೆ ಜಗದ ಜಿಡ್ಡುನ್ನು ಹಸನುಗೊಳಿಸಿದರು. ಮನದ ಮೈಲಿಗೆಯನ್ನು ಶುಚಿಗೊಳಿಸುವ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದರು. ಮಡಿವಾಳ ಮಾಚಿದೇವರ ಭಕ್ತಿ ಪ್ರಭಾವದಿಂದ ಹಿಪ್ಪರಗಿ ಗ್ರಾಮ ದೇವರ ಹಿಪ್ಪರಗಿಯಾಯಿತು. ಅಂದಿನ ದಿನಗಳಲ್ಲಿ ವಚನ ಸಾಹಿತ್ಯದ ಸಂರಕ್ಷಣೆ ಮತ್ತು ಶರಣರ ಸಂರಕ್ಷಣೆಗೆ ಮಡಿವಾಳ ಮಾಚಿದೇವರು ಪ್ರಮುಖಸ್ಥಾನ ವಹಿಸಿದ್ದರು ಎಂದು ಮಾಚಿದೇವರ ಕುರಿತು ಸವಿವರವಾಗಿ ಚರಿತ್ರಾ ಪೂರ್ಣ ಮಾಹಿತಿಯನ್ನು ನೀಡಿದರು.

ಮಡಿವಾಳ ಸಮುದಾಯದ ತಾಲೂಕಾ ಅಧ್ಯಕ್ಷ ಭೀಮರಾಯ ಗುತ್ತಿಪೇಟ, ಗೌರವಾಧ್ಯಕ್ಷ ಶೇಖಪ್ಪ ಸಾಧು, ಗ್ರೇಡ 2 ತಹಶೀಲ್ದಾರ ಶ್ರೀಧರಾಚಾರ್ಯ, ಮುಖಂಡರಾದ ಹಣಮಂತ್ರಾಯ ಯಕ್ಚಿಂತಿ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುಂಚೆ ಮಡಿವಾಳ ಮಾಚಿದೇವರ ಭಾವಚಿತ್ರದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಉಪನ್ಯಾಸಕ ದೇವಿಂದ್ರ ಮಡಿವಾಳ, ಮಲ್ಲಣ್ಣ ಮಾಸ್ಟರ ಹಳಿಸಗರ, ಸಾಯಬಣ್ಣ ಮಡಿವಾಳಕರ್, ಭೀಮರಾಯ ಮುದನೂರ, ಮೌನೇಶ ಕನ್ಯಾಕೋಳೂರ, ಚಂದ್ರಪ್ರಕಾಶ ಕಟ್ಟಿಮನಿ, ಮುರಿಗೆಪ್ಪ ಗೋಗಿ, ವೀರೇಶ ಗೋಗಿ, ಮಲ್ಲಪ್ಪ ಮಡಿವಾಳ, ಶರಣಪ್ಪ ಹೋತಪೇಟ ಸೇರಿದಂತೆ ಶಿರಸ್ತೆದಾರ ವೆಂಕನಗೌಡ, ಗುರು ಕಾಮಾ, ಶಿವಪುತ್ರ ಜವಳಿ, ಶಿವಶರಣ ತಳವಾರ, ರಾಮು ತಹಸೀಲ್, ರಾಜಕುಮಾರ, ಶ್ರೀಕಾಂತ ಇತರರು ಭಾಗವಹಿಸದ್ದರು.
ಸುಮಿತ್ರಾ ಎನ್.ಸಗರ ವಚನಗಾಯನ ಪ್ರಸ್ತುತ ಪಡಿಸಿದರು. ಸಿದ್ದಪ್ಪ ಹಳಿಗೋದಿ ನಿರೂಪಿಸಿದರು. . ಉಪನ್ಯಾಸಕ ಗುರುಲಿಂಗಪ್ಪ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button