ಬೌದ್ಧಿಕ ದಾರಿದ್ರ್ಯ ತುಂಬಾ ಅಪಾಯಕಾರಿ-ಸತ್ಯಂಪೇಟೆ
ಕಸಾಪದಿಂದ ವಿಶ್ವ ಮಾನವ ದಿನಾಚರಣೆ
ಯಾದಗಿರಿ, ಶಹಾಪುರಃ ಬಡತನ ಜಾತಿಯತೆಗಿಂತಲೂ ನಮ್ಮ ಹಿಂದುಳಿವಿಕೆಗೆ ಮುಖ್ಯ ಕಾರಣ ನಮ್ಮ ಬೌದ್ಧಿಕ ದಾರಿದ್ರ್ಯವಾಗಿದೆ. ರಾಷ್ಟ್ರಕವಿ ಕುವೆಂಪು ಸಾಹಿತ್ಯ ಓದಿದ ಯಾರೂ ಹೇಡಿಗಳಾಗಲು ಸಾಧ್ಯವಿಲ್ಲ ಎಂದು ವಿಚಾರವಾದಿ ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ಹೇಳಿದರು.
ನಗರದ ಕಸಾಪ ಭವನದಲ್ಲಿ ತಾಲೂಕು ಆಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವಿಶ್ವ ಮಾನವ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕನ್ನಡ ಸಾಹಿತ್ಯಕ್ಕೆ ಕುವೆಂಪು ಅವರು ನೀಡಿದ ಕಾಣಿಕೆ ಅತ್ಯಮೂಲ್ಯವಾದದು. ಕುವೆಂಪು ಸಾಹಿತ್ಯ ಓದಿದರೆ ಸಾಕು ಕವಿ ಕಲಿಯೂ ಆಗಬಲ್ಲ. ಶಾಸ್ತ್ರ ಪುರಾಣ ಧಾರ್ಮಿಕ ವ್ಯಾಖ್ಯಾನಗಳು ಮುಖ್ಯ ಅಲ್ಲ. ಎದೆಯ ದನಿಗೆ ಸಾಟಿ ಯಾವುದೂ ಇಲ್ಲ. ಎಲ್ಲಾ ಶಾಸ್ತ್ರ ಪುರಾಣಗಳು ಹೊಟ್ಟೆ ಬದುಕಲಿಕ್ಕೆ ಸೃಷ್ಟಿ ಮಾಡಲಾಗಿದೆ ಎಂಬುದನ್ನು ಸ್ಪಷ್ಟ ಅರಿವಿಗೆ ಬರಲಿದೆ.
ಮಂದಿರ, ಮಸೀದಿ ಮತ್ತು ಚರ್ಚುಗಳನ್ನು ಮೀರಿ ನಾವು ಬೆಳೆಯಬೇಕಿದೆ. ಗುಡಿಯಲ್ಲಿರುವ ದೇವರು ಪೂಜಾರಿಯ ಕೈಸೆರೆ ಎಂಬುದನ್ನು ನಾವು ಮರೆಯಬಾರದು. ಸತ್ತ ಕಲ್ಗಳ ಮುಂದೆ ಅತ್ತು ಕರೆಯುತ್ತ ನಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ.
ಜಡಶಿಲೆಯನ್ನು ಪೂಜಿಸಿ ನಮ್ಮ ಬದುಕನ್ನು ಸ್ಥಾವರಗೊಳಿಸಿಕೊಳ್ಳದೆ, ವಿಚಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಬದುಕನ್ನು ಬಂಗಾರಗೊಳಿಸಿಕೊಳ್ಳಬೇಕು. ಕವಿ ಸಾಹಿತಿಗಳು ನಮ್ಮ ನಿತ್ಯದ ಬದುಕಿನಲ್ಲಿ ಬರುವ ನೋವು ನಲಿವುಗಳಿಗೆ ಕೈಗನ್ನಡಿಯಾಗಬೇಕು. ಸತ್ತಂತಿರುವ ಜನ ಸಾಮಾನ್ಯರನ್ನು ವಿಚಾರಗಳ ಮೂಲಕ ಬಡಿದೆಬ್ಬಿಸಬೇಕು ಎಂದು ಕುವೆಂಪು ಅವರ ಕವಿತೆಯ ಸಾಲುಗಳನ್ನು ಬಣ್ಣಿಸಿದರು.
ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಶಿವಣ್ಣ ಇಜೇರಿ, ಪ್ರತಿಯೊಬ್ಬರಿಗೂ ಪ್ರತ್ಯೇಕವಾದ ಮಿದುಳು ಇರಲಿದೆ. ಆ ಮಿದುಳನ್ನು ಸಕ್ರೀಯಗೊಳಿಸಿ ನಮಗೆ ನಾವೇ ಆಲೋಚಿಸಬೇಕು. ನನ್ನ ಬಡತನಕ್ಕೆ ಅಜ್ಞಾನಕ್ಕೆ ಅವಿಚಾರಕ್ಕೆ ಕಾರಣ ನಾವೇ ಹೊರತು ಇನ್ನಾರೂ ಅಲ್ಲ. ಮನುಷ್ಯನ ಬೆಳವಣಿಗೆ ಮತ್ತು ಅಧೋಗತಿ ಎರಡೂ ನಮ್ಮ ಕೈಯ್ಯಲ್ಲಿಯೇ ಇವೆ. ಅರಿವನ್ನೆ ಗುರುವಾಗಿ ಮಾಡಿಕೊಂಡ ಕವಿ ಕುವೆಂಪು ರಾಷ್ಟ್ರಕವಿಯಾಗಿ ಬೆಳೆದರು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕ.ಸಾ.ಪ. ಅಧ್ಯಕ್ಷ ಸಿದ್ದಲಿಂಗಪ್ಪ ಆನೇಗುಂದಿ ಮಾತನಾಡಿದರು. ವೇದಿಕೆ ಮೇಲೆ ಉಪ ತಹಶೀಲ್ದಾರ ಶ್ರೀಧರ ಆಚಾರ್ಯ, ಪಿ.ಡಬ್ಲ್ಯೂಡಿ ಇಲಾಖೆ ಮುಖ್ಯ ಅಭಿಯಂತರ ಶರಣಗೌಡ, ನಗರ ಸಭೆಯ ಪೌರಾಯುಕ್ತ ಬಸವರಾಜ ಶಿವಪೂಜೆ, ತಾಲೂಕಾ ಅಂಗನವಾಡಿ ಹಾಗೂ ಶಿಶು ಅಭಿವೃದ್ಧಿ ಅಧಿಕಾರಿ ಥಾಮಸ್ ದೊಡ್ಮನಿ, ಪಿ.ಡಬ್ಲ್ಯೂಡಿಯ ಬಕ್ಕಪ್ಪ ಇದ್ದರು.
ಬಸವರಾಜ ಸಿನ್ನೂರ ನಿರೂಪಿಸಿದರು. ಪಂಚಾಕ್ಷರಿ ಹಿರೇಮಠ ವಂದಿಸಿದರು. ಕವಿತಾ ಪತ್ತಾರ, ಮೈಲಾರಪ್ಪ ಸಗರ ಪ್ರಾರ್ಥನೆ ಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ಸುಧಾಕರ್ ಗುಡಿ, ಗುರುಬಸವಯ್ಯ ಗದ್ದುಗೆ, ಡಾ.ಮೋನಪ್ಪ ಶಿರವಾಳ, ಶ್ರೀಕಾಂತ ಬಿರಾದಾರ, ಸಾಹೇಬಣ್ಣ ಮಡಿವಾಳರ್, ಡಾ.ಡಿ.ಜಿ.ಬಳ್ಳೂರಗಿ ಸೇರಿದಂತೆ ಇತರರಿದ್ದರು.