ಗುಜರಾತ್-ಹಿಮಾಚಲ ಬಿಜೆಪಿ ವಶಕ್ಕೆ, ರಾಜ್ಯದಲ್ಲೂ ಬಿಜೆಪಿ ಬಿರುಗಾಳಿ-ಲಾಲನಸಾಬ ಖುರೇಶಿ
ಗುಜರಾತ, ಹಿಮಾಚಲ ಫಲಿತಾಂಶಃ ಬಿಜೆಪಿ ಸಂಭ್ರಮ
ಯಾದಗಿರಿಃ ಗುಜರಾತ ಮತ್ತು ಹಿಮಾಚಲ ಪ್ರದೇಶ ಎರಡು ರಾಜ್ಯದ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯುವ ಮೂಲಕ ಗುಜರಾತಿನಲ್ಲಿ 6 ನೇ ಬಾರಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದರೆ, ಹಿಮಾಚಲ ಪ್ರದೇಶದ ಪ್ರಸ್ತುತ ಆಡಳಿತ ಕಾಂಗ್ರೆಸ್‍ನ್ನು ಧೂಳಿಪಟ ಮಾಡುವ ಮೂಲಕ ಬಿಜೆಪಿ ಅಧಿಕಾರದ ಗದ್ದುಗೆ ಪಡೆದ ಹಿನ್ನೆಲೆಯಲ್ಲಿ ಜಿಲ್ಲೆಯ ಯಾದಗಿರಿ, ಸುರಪುರ ಸೇರಿದಂತೆ ಶಹಾಪುರ ನಗರಗಳಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.
ಶಹಾಪುರದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಸಂದರ್ಭದಲ್ಲಿ ವಿನಯವಾಣಿ ಯೊಂದಿಗೆ ಮಾತನಾಡಿದ ನಗರ ಘಟಕ ಬಿಜೆಪಿ ಅಧ್ಯಕ್ಷ ಲಾಲನಸಾಬ ಖುರೇಶಿ ಮತ್ತು ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುರು ಕಾಮಾ, ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ ಪ್ರಭಾವ ಕರ್ನಾಟಕದ 2018 ರ ಚುನಾವಣೆ ಮೇಲೂ ಪರಿಣಾಮ ಬೀರಲಿದ್ದು, ರಾಜ್ಯದಲ್ಲಿ ಬಿಜೆಪಿ ಬಿರುಗಾಳಿ ಬೀಸಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಈ ಎರಡು ರಾಜ್ಯಗಳ ಫಲಿತಾಂಶ ದಿಕ್ಸೂಚಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿ, ನಗರಸಭೆ ಸದಸ್ಯ ವಸಂತಕುಮಾರ ಸುರಪುರಕರ್, ಯುವ ಘಟಕ ಅಧ್ಯಕ್ಷ ಅಬ್ದುಲ್ ಹಾದಿಮನಿ, ಮುಖಂಡರಾದ ಬಸವರಾಜ ಆನೇಗುಂದಿ, ಉಮೇಶ ಬಾಗೇವಾಡಿ, ಮಲ್ಲಿಕಾರ್ಜುನ ಬುಕಿಸ್ಟಗಾರ, ಶಾಂತಪ್ಪ ಕಟ್ಟಿಮನಿ, ಡಾ.ಪ್ರಭುರಾಜ ಮಡ್ಡಿ, ಡಾ.ಚಂದ್ರಶೇಖರ ಕೊಲ್ಲೂರು, ಶ್ರೀಕಾಂತ ಜೈನ್, ಸತೀಶ ಪಂಚಭಾವಿ, ಉಮೇಶ ಚಾಕರಿ, ಬಸವರಾಜ ತಳವಾರ, ಮಲ್ಲು ಜಾಕಾ, ಭೀಮರಾಯ ಕೋಲ್ಕಾರ, ಕರಿಬಸವ ಬಿಳಾರ, ಅಮೃತ ಹೂಗಾರ, ನಾಗರಾಜ ದೇಸಾಯಿ, ಮಂಜುನಾಥ, ಸೋಮು ಪಾಲ್ಪುರೆ ಸೇರಿದಂತೆ ಇತರರು ಭಾಗವಹಿಸಿದ್ದರು.