ಗುಂಬಳಾಪುರ ಮಠದಲ್ಲಿ ಶ್ರಾವಣ ಸಂಪನ್ನ
ನೂತನ ಕಟ್ಟಡ ಗುರು ಮಂದಿರ ಉದ್ಘಾಟನೆ
yadgiri, ಶಹಾಪುರಃ ನಗರದ ಗುಂಬಳಾಪುರ ಮಠದಲ್ಲಿ ಶ್ರಾವಣ ಮಾಸದಂಗಾಗಿ ಒಂದು ತಿಂಗಳ ಕಾಲ ನಡೆದ ಪ್ರವಚನ ವಿವಿಧ ಧಾರ್ಮಿಕ ಕಾರ್ಯಗಳು ಶ್ರಾವಣ ಕೊನೆಯ ಶನಿವಾರ ಸಂಪನ್ನಗೊಂಡವು.
ಶ್ರಾವಣ ಸಂಪನ್ನ ಕಾರ್ಯಕ್ರಮ ಹಿನ್ನೆಲೆ ಶ್ರೀಮಠದ ಸಂತ ಸಿದ್ದೇಶ್ವರರ ಕರ್ತೃ ಗದ್ದುಗೆಗೆ ಅಭಿಷೇಕ, ಹೂವಿನ ಅಲಂಕಾರ ವಿಶೇಷ ಪೂಜೆ ಸಲ್ಲಿಸಲಾಯಿತು.
ಬೆಳಗ್ಗೆಯಿಂದಲೇ ಭಕ್ತರು ಗದ್ದುಗೆಗೆ ಕಾಯಿ, ಕರ್ಪೂರ ನೈವೇದ್ಯ ಅರ್ಪಿಸಿ ದರ್ಶನ ಪಡೆದು ಪುನೀತರಾದರು. ಶ್ರೀಮಠದಲ್ಲಿ ತಯಾರಿಸಿದ ಪ್ರಸಾದ ಸೇವಿಸಿದರು.
ನಂತರ ಶ್ರೀಮಠದ ಸಿದ್ಧೇಶ್ವರ ಶಿವಾಚಾರ್ಯರ ಆಶೀರ್ವಾದ ಪಡೆದು ಪುನೀತರಾದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ಮಕ್ಕಳು ಹಿರಿಯರು ಭಾಗವಹಿಸಿ ಭಕ್ತಿ ಸಮರ್ಪಣೆಗೈದರು.
ಗುರು ಮಂದಿರ ಉದ್ಘಾಟನೆಃ ಶುಕ್ರವಾರ ಶ್ರೀಮಠದಲ್ಲಿ ನೂತನವಾಗಿ ನಿರ್ಮಾಣಗೊಂಡ ಗುರು ಮಂದಿರವನ್ನು ಕೈಗಾರಿಕೆ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ದರ್ಶನಾಪುರ, ಗುರು ಮಂದಿರ ನಿರ್ಮಾಣದಿಂದ ಶ್ರೀಮಠದ ಧಾರ್ಮಿಕ ಕಾರ್ಯಕ್ರಮಗಳಿಗೆ ಪ್ರಸಾದ ವಿತರಣೆಗೆ ಇತರೆ ಕಾರ್ಯಕ್ರಮಗಳಿಗೆ ಅನುಕೂಲವಾಗಲಿದೆ.
ಧಾರ್ಮಿಕ ಕಾರ್ಯಕ್ರಮ ಮೂಲಕ ಪುರಾಣ, ಪ್ರವಚನ ಜತೆಗೆ ಆಧ್ಯಾತ್ಮಿಕ ಜ್ಞಾನ ಉಣಬಡಿಸಿ ನಾಗರಿಕರಿಗೆ ಉತ್ತಮ ಮಾರ್ಗದರ್ಶನ ನೀಡುವ ಮೂಲಕ ಸಾವಿರಾರು ಕುಟುಂಬಗಳ ಪಾಲಿಗೆ ಶ್ರೀಮಠ ಸನ್ಮಾರ್ಗ ತೋರುವ ಕಾರ್ಯ ಶ್ಲಾಘನೀಯವಾಗಿದೆ.
ಯಾವುದೇ ಬೇಧಭಾವ ಮಾಡದೆ ಸತ್ಕಾರ್ಯಗಳಲ್ಲಿ ಮೈಗೂಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರೀಮಠದ ಗುರುಗಳ ಮಾರ್ಗದರ್ಶನ ಅತ್ಯಂತ ಉಪಯುಕ್ತವಾಗಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀಮಠದ ಸಿದ್ಧೇಶ್ವರ ಶಿವಾಚಾರ್ಯರು, ಶರಣು ಬಿ.ಗದ್ದುಗೆ, ಗುಂಡಪ್ಪ ತುಂಬಿಗಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶ್ರೀಮಠದಿಂದ ನೂತನ ಸಚಿವ ದರ್ಶನಾಪುರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
—————-