ಅಮಿತ್ ಶಾ ಸಮ್ಮುಖದಲ್ಲಿ ಮಾಲೀಕಯ್ಯ ಗುತ್ತೇದಾರ್ ಬಿಜೆಪಿ ಎಂಟ್ರಿ ಪ್ಲಾನ್ ಫೇಲಾಗಿದ್ದೇಕೆ?
-ಮಲ್ಲಿಕಾರ್ಜುನ ಮುದನೂರ್
ಕಲಬುರಗಿ : ಅಫ್ಜಲಪುರ ಮತಕ್ಷೇತ್ರದ ಶಾಸಕ ಮಾಲೀಕಯ್ಯ ಗುತ್ತೇದಾರ್ ಈಗಾಗಲೇ ಬಿಜೆಪಿ ಸೇರ್ಪಡೆಯ ನಿರ್ಧಾರ ಪ್ರಕಟಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅದ್ಯಕ್ಷ ಅಮಿತ್ ಶಾ ಸಮ್ಮುಖದಲ್ಲಿ ಮೈಸೂರಿನ ಸಮಾವೇಶದಲ್ಲಿ ಕೇಸರಿ ಬಾವುಟ ಹಿಡಿಯುವುದಾಗಿ ತಿಳಿಸಿದ್ದರು. ಆದರೆ, ನಿನ್ನೆ ಮೈಸೂರಿನಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಮಾಲೀಕಯ್ಯ ಗುತ್ತೇದಾರ್ ಕಾಣಿಸಿಕೊಂಡಿಲ್ಲ. ಬದಲಾಗಿ ಇಂದು ಸ್ವಗ್ರಾಮ ಸ್ಟೇಷನ್ ಗಾಣಗಾಪುರದಲ್ಲಿ ಬೆಂಬಲಿಗರ ಸಭೆ ಕರೆದಿದ್ದಾರೆ ಎಂದು ತಿಳಿದು ಬಂದಿದೆ.
ಕಲಬುರಗಿಯಲ್ಲಿ ಖರ್ಗೆ ಕಾಂಗ್ರೆಸ್ ಕೋಟೆ ಕೆಡವಿ ಕಮಲ ಕೋಟೆ ಕಟ್ಟುವ ಕನಸಿನ ಮಾತುಗಳನ್ನಾಡಿದ್ದ ಮಾಲೀಕಯ್ಯ ಗುತ್ತೇದಾರ್ ಇದೀಗ ದಿಢೀರನೇ ಬೆಂಬಲಿಗರ ಸಭೆ ಕರೆದಿದ್ದು ಕುತೂಹಲ ಮೂಡಿಸಿದೆ. ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಹೆಜ್ಜೆಯಿಡುವ ನಿರ್ಧಾರಕ್ಕೆ ಮಾಲೀಕಯ್ಯ ಗುತ್ತೇದಾರ್ ಬಂದಿದ್ದಾರೆ ಎಂಬ ಸುದ್ದಿ ಕಲಬುರಗಿ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಬಿಜೆಪಿ ರಾಜ್ಯದ್ಯಕ್ಷ ಬಿ.ಎಸ್.ಯಡಿಯೂರಪ್ಪ ಭೇಟಿಯಾಗಿ ಬಿಜೆಪಿ ಸೇರುವ ನಿರ್ಧಾರ ಪ್ರಕಟಿಸುವ ಮುನ್ನ ಕಲಬುರಗಿಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಸ್ವಾಗತ ಎಂಬ ಬ್ಯಾನರ್ ಹಾಕಲಾಗಿತ್ತು. ಅಲ್ಲದೆ ಬಿಜೆಪಿ ಸೇರುವ ನಿರ್ಧಾರದ ಜೊತೆಗೇನೆ ಅಫ್ಜಲಪುರದಲ್ಲಿ ಮಾಲೀಕಯ್ಯ ಗುತ್ತೇದಾರ್ ಎಂಬುದೇ ಐಕಾನ್ ಪಕ್ಷ ಅಲ್ಲ, ಸ್ವಬಲದ ಮೇಲೆ ನಾನು ಗೆದ್ದು ಬರುತ್ತೇನೆ. ಹೈದರಾಬಾದ್ ಕರ್ನಾಟಕದಲ್ಲಿ ಇನ್ನಿತರೆ ಕ್ಷೇತ್ರಗಳನ್ನು ಗೆಲ್ಲಿಸುವ ತಾಕತ್ತು ನನಗಿದೆ ಎಂದು ಗುತ್ತೇದಾರ್ ಹೇಳಿದ್ದರು.
ಮಾಲೀಕಯ್ಯ ಗುತ್ತೇದಾರ್ ನಾಮಕಾವಾಸ್ತೆ ಬೆಂಬಲಿಗರ ಸಭೆ ನಡೆಸಿ ತಮ್ಮ ಕ್ಷೇತ್ರದಲ್ಲೇ ಭರ್ಜರಿ ಸಮಾವೇಶದ ಮೂಲಕ ಕಮಲ ಪಡೆ ಎಂಟ್ರಿಗೆ ಸಜ್ಜಾಗುತ್ತಾರೆಯೇ. ಅಥವಾ ಜೆಡಿಎಸ್ ನತ್ತ ಚಿತ್ತ ಹರಿಸಿದ್ದಾರೆಯೇ ಎಂಬುದೀಗ ಕುತೂಹಲಕ್ಕೆ ಎಡೆಮಾಡಿದೆ. ಮತ್ತೊಂದು ಕಡೆ ಕೌಟುಂಬಿಕ ಕಲಹ ತಲೆದೋರಲಿದ್ದು ಸಹೋದರ ನಿತಿನ್ ಗುತ್ತೇದಾರ್ ರನ್ನು ಎದುರಾಳಿಯನ್ನಾಗಿಸುವ ಮೂಲಕ ಕಾಂಗ್ರೆಸ್ ಹೊಸ ತಲೆನೋವು ಸೃಷ್ಠಿಸುವ ಪ್ಲಾನ್ ಮಾಡುತ್ತಿದೆ ಎನ್ನಲಾಗಿದೆ . ಹೀಗಾಗಿ, ಎದುರಾಳಿಯ ರಾಜಕೀಯ ನೀತಿಗೆ ತಿರುಗೇಟು ನೀಡಲು ಮಾಲೀಕಯ್ಯ ರಣತಂತ್ರ ಹೆಣೆಯಲು ಬೆಂಬಲಿಗರ ಸಭೆ ಮೂಲಕ ಬಲಾಬಲ ಪ್ರದರ್ಶಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಮಾಲೀಕಯ್ಯ ಗುತ್ತೇದಾರ್ ಇಂದು ಮದ್ಯಾನ 12ಗಂಟೆಗೆ ಸ್ವಗ್ರಾಮ ಸ್ಟೇಷನ್ ಗಾಣಗಾಪುರದಲ್ಲಿ ಬೆಂಬಲಿಗರ ಸಭೆ ನಡೆಸಲಿದ್ದಾರೆ. ಸಹೋದರರು, ಸಂಬಂಧಿಕರು, ಸ್ನೇಹಿತರು ಹಾಗೂ ಹಿತೈಷಿಗಳ ಜೊತೆಯೂ ಚರ್ಚಿಸಲಿದ್ದಾರೆ. ಮದ್ಯಾನದ ಹೊತ್ತಿಗೆ ಮಾಲೀಕಯ್ಯ ಗುತ್ತೇದಾರ್ ಅವರ ಸ್ಪಷ್ಟ ನಿರ್ಧಾರ ಹೊರಬೀಳಲಿದೆ. ಮಾಲೀಕಯ್ಯ ಗುತ್ತೇದಾರ ಅವರ ನಿರ್ಧಾರ ಯಾವ ಪಕ್ಷಕ್ಕೆ ವರವಾಗಲಿದೆ. ಮತ್ಯಾವ ಪಕ್ಷಕ್ಕೆ ಶಾಪವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.