ಸಂಗೀತದಲ್ಲಿ ಅದ್ಭುತ ಔಷಧಿ ಗುಣವಿದೆಃ ಸಿಪಿಐ ನಾಗರಾಜ
ಮನುಷ್ಯನನ್ನು ಉಲ್ಲಾಸ ಭರಿತವಾಗಿಸುವ ಶಕ್ತಿ ಸಂಗೀತಕ್ಕಿದೆ
ಯಾದಗಿರಿಃ ಮನದ ನೋವು ಶಮನ ಮತ್ತು ಮನಸ್ಸಿಗೆ ನವ ಚೈತನ್ಯ ತುಂಬುವ ಶಕ್ತಿ ಸಂಗೀತಕ್ಕಿದೆ ಎಂದು ಸಿಪಿಐ ನಾಗರಾಜ ಜೆ ಹೇಳಿದರು.
ಜಿಲ್ಲೆಯ ಶಹಾಪುರ ನಗರದ ಶ್ರೀಚರಬಸವೇಶ್ವರ ಸಂಗೀತ ಸೇವಾ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಚರಬಸವೇಶ್ವರ ದೇವಸ್ಥಾನದ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾದ 10ನೇ ವರ್ಷದ ಸಂಗೀತ ಹಾಸ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಂಗೀತ ಒಂದು ದಿವ್ಯ ಔಷಧಿಯಂತೆ, ಮನುಷ್ಯನ ಪ್ರತಿಯೊಂದು ನೋವು ನಲಿವುಗಳ ಮಧ್ಯದಲ್ಲಿ ಕರ್ತವ್ಯ ನಿಭಾಯಿಸುತ್ತದೆ. ಮತ್ತು ಪ್ರತಿ ಜೀವಿಗಳಿಗೂ ಸಂಗೀತ ನಿನಾದ ಮುದ ನೀಡುತ್ತಿದೆ. ಹಸು ಮುದ ನೀಡುವ ಸಂಗೀತ ಕೇಳುತ್ತಿದ್ದರೆ, ಹಾಲು ಜಾಸ್ತಿ ನೀಡುತ್ತದೆ ಅಲ್ಲದೆ ಯಾವುದೇ ತೊಂದರೆ ಮಾಡದೆ ಖುಷಿಯಿಂದಲೇ ಸಂಗೀತದ ಅಲೆಯಲ್ಲಿ ತೇಲುತ್ತಾ ಆನಂದದಿಂದ ಹಾಲು ನೀಡುತ್ತದೆ ಎಂಬ ವಿಷಯವನ್ನು ಸಂಶೋಧನಾತ್ಮಕ ತಿಳಿದು ಬಂದಿದೆ. ಅಲ್ಲದೆ ಕೆಲವು ಗೋಶಾಲೆಗಳಲ್ಲಿ ಸಂಗೀತ ಬಳಸಲಾಗುತ್ತಿದೆ ಎಂದರು.
ಸಮಾರಂಭದ ಸಾನ್ನಿಧ್ಯವನ್ನು ಗುರುಬಸ್ಸಯ್ಯ ಗದ್ದುಗೆ ವಹಿಸಿದ್ದರು, ನಗರಸಭೆ ಉಪಾಧ್ಯಕ್ಷ ಡಾ.ಬಸವರಾಜ ಇಜೇರಿ ಜ್ಯೋತಿ ಬೆಳಗಿಸಿದರು. ಸಮಾರಂಭದ ನೇತೃತ್ವವನ್ನು ಡಾ.ಶರಣು.ಬಿ.ಗದ್ದುಗೆ ವಹಿಸಿದ್ದರು. ಉದ್ಯಮಿ ಶಿವಯೋಗಿ ಹಿರೇಮಠ ಉಪಸ್ಥಿತರಿದ್ದರು. ಕಲಾವಿದರಾದ ರಾಮು ಖಾನಾಪುರ, ಬಾಲೇಶ್, ಗಣೇಶ, ಮಹಾಂತೇಶ, ಅಪರ್ಣಾ ಸೇರಿದಂತೆ ಹಲವಾರು ಕಲಾವಿದರು ವಿವಿಧ ಕಲೆಯ ಮೂಲಕ ನೆರೆದಿದ್ದ ಜನಸ್ಥೋಮವನ್ನು ರಂಜಿಸಿದರು.