ಕಥೆವಿನಯ ವಿಶೇಷ

“ಹನುಮಾನ್ ಚಾಲೀಸ” ರಚನೆ ಹೇಗಾಯಿತು ಗೊತ್ತೆ.? ಆ ಸಂದರ್ಭ ಹೇಗಿತ್ತು.? ಓದಿ

ಹನುಮಾನ್ ಚಾಲೀಸ ರಚನೆಯ ಸ್ವಾರಸ್ಯಕರ ಭಕ್ತಿಯ ಶಕ್ತಿ ಬಗ್ಗೆ ಓದಿ ತಿಳಿದುಕೊಳ್ಳಿ

ದಿನಕ್ಕೊಂದು ಕಥೆ

ಹನುಮಾನ್ ಚಾಲೀಸ ರಚನೆಯ ಹಿನ್ನೆಲೆ

ಯಹನುಮಾನ್ ಜ್ಞಾನಗುಣಸಾಗರ್ ಎಂದು ಪ್ರಾರಂಭವಾಗುವ “ಹನುಮಾನ್ ಚಾಲೀಸ” ವನ್ನು ಬಹಳಷ್ಟು ಮಂದಿ ಕೇಳಿಯೇ ಇರುತ್ತೇವೆ. ಅದನ್ನು ರಚಿಸಿದವರು ಯಾರು, ರಚಿಸಲು ಸಂದರ್ಭ ಏನಿತ್ತು, ಇದರ ಬಗ್ಗೆ ಸ್ವಾರಸ್ಯಕರ ಕಥೆಯೊಂದಿದೆ.

ವಾರಾಣಸಿಯಲ್ಲಿ ವಾಸ ಮಾಡುತ್ತಿದ್ದ ಸಂತ ತುಲಸೀದಾಸರು ರಾಮನಾಮ ಸಂಕೀರ್ತನದಲ್ಲಿ ನಿರತರಾಗಿ ಬ್ರಹ್ಮಾನಂದವನ್ನು ಅನುಭವಿಸುತ್ತಿದ್ದರು.
ಅವರ ಮಹಿಮೆಯನ್ನರಿತ ನೂರಾರು ಜನಗಳು ಅವರ ಆಶೀರ್ವಾದಕ್ಕಾಗಿ, ಅವರ ಹತ್ತಿರ ತಮ್ಮ ಸಂಕಷ್ಟಗಳನ್ನು ಹೇಳಿಕೊಂಡು ಪರಿಹಾರ ಪಡೆಯುವುದಕ್ಕಾಗಿ ನಿತ್ಯವೂ ನೆರೆಯುತ್ತಿದ್ದರು. ರಾಮನಾಮ ಉಪಾಸನೆಯಲ್ಲಿ ಅವರೆಲ್ಲರನ್ನೂ ತೊಡಗಿಸುತ್ತಿದ್ದರು. ಶ್ರೀ ತುಲಸೀದಾಸರು. ಇವರ ಪ್ರಭಾವ, ಪವಾಡಗಳ ಮಹಿಮೆಗಳಿಂದಾಗಿ ಅನ್ಯಮತಗಳ ಜನರೂ ಇವರ ಬಳಿ ಬರುತ್ತಿದ್ದರು, ಹಾಗೂ ರಾಮನಾಮ ಜಪದಲ್ಲಿ ಭಾಗಿಯಾಗುತ್ತಿದ್ದರು.

ಇದು ಅನ್ಯಮತದ ಗುರುಗಳಿಗೆ ಸಹನೆಯಾಗದ ವಿಷಯವಾಯಿತು. ‘ಈ ತುಲಸೀದಾಸ ಏನೋ ಮೋಡಿ ಮಾಡಿ ನಮ್ಮ ಮತದವರನ್ನು ತನ್ನ ಕಡೆಗೆ ಸೆಳೆದುಕೊಂಡು ತಮ್ಮ ಮತಕ್ಕೆ ಸೇರಿಸಿಕೊಳ್ಳಲು ಹುನ್ನಾರ ನಡೆಸುತ್ತಿದ್ದಾನೆ” ಎಂದು ಡೆಲ್ಲಿ ಬಾದಶಾಹನವರೆಗೆ ದೂರು ತೆಗೆದುಕೊಂಡು ಹೋದರು. ಈ ಮಧ್ಯೆ ವಾರಾಣಸಿಯಲ್ಲಿನ ಸದಾಚಾರವಂತನಾದ ಗೃಹಸ್ಥನೊಬ್ಬ ತನ್ನ ಏಕಮಾತ್ರ ಪುತ್ರನ ವಿವಾಹವನ್ನು ಒಂದು ಉತ್ತಮ ಕನ್ಯೆಯೊಂದಿಗೆ ನೆರವೇರಿಸಿದ. ಮಗ ಸೊಸೆ ಆನಂದದಿಂದ ಸಂಸಾರ ನಡೆಸುತ್ತಿದ್ದರು. ಆದರೆ ವಿಧಿಯಾಟ ಬೇರೆಯೇ ಇತ್ತು. ಸ್ವಲ್ಪ ಕಾಲದಲ್ಲೇ ಮಗ ಹಟಾತ್ತನೆ ತೀರಿಕೊಂಡ. ಆ ಚಿಕ್ಕ ವಯಸ್ಸಿನ ಹೆಂಡತಿಯ ಶೋಕ ಮುಗಿಲು ಮುಟ್ಟಿತ್ತು. ಗಂಡನ ಶವದ ಮೇಲೆ ಬಿದ್ದು ಬಿದ್ದು ರೋದಿಸುತ್ತಿದ್ದಳು. ಏನು ರೋದಿಸಿದರೆ ಏನು, ಹೋದ ಜೀವ ಪುನಃ ಬಂದೀತೇ ಎಂದು ಅವಳಿಂದ ಬಿಡಿಸಿಕೊಂಡು ಶವಯಾತ್ರೆಗೆ ಸಿದ್ಧ ಮಾಡಿಕೊಂಡರು ಬಂಧುಗಳು. ಶವಯಾತ್ರೆ ಹೊರಟಿತು. ಅವಳನ್ನು, ನೆರೆದಿದ್ದ ಸ್ತ್ರೀಯರು ಹಿಡಿದುಕೊಂಡಿದ್ದರೂ ಕೊಸರಿಕೊಂಡು ತಾನೂ ಶವದ ಹಿಂದೆ ಓಡಿದಳು.

ಶವಯಾತ್ರೆ ತುಲಸೀದಾಸರ ಆಶ್ರಮದ ಹತ್ತಿರ ಬಂದಾಗ ಅವಳು ನೇರವಾಗಿ ಆಶ್ರಮದೊಳಗೆ ಹೋಗಿ ಧ್ಯಾನ ಮಗ್ನರಾಗಿದ್ದ ತುಲಸೀದಾಸರ ಚರಣಗಳನ್ನು ಗಟ್ಟಿಯಾಗಿ ಹಿಡಿದು ತನ್ನ ಪತಿಯನ್ನು ಹೇಗಾದರೂ ಬದುಕಿಸಿ ಕೊಡಬೇಕೆಂದು ಅಂಗಲಾಚಿ ಬೇಡಿದಳು. ತುಲಸೀದಾಸರು ‘ದೀರ್ಘ ಸುಮಂಗಲೀ ಭವ” ಎಂದರೂ, ಅವಳು ಮತ್ತೂ ರೋದಿಸುತ್ತಾ “ಇನ್ನೆಲ್ಲಿಯ ಸುಮಂಗಲಿ ಸ್ವಾಮೀಜೀ, ನನ್ನ ಪತಿಯ ಶವಯಾತ್ರೆಯೇ ನಿಮ್ಮ ಆಶ್ರಮದ ಮುಂದೆ ಹೋಗುತ್ತಿದೆ. ಹೇಗಾದರೂ ಮಾಡಿ ನನ್ನ ಪತಿಯನ್ನು ಬದುಕಿಸಿಕೊಟ್ಟು ನಿಮ್ಮ ಆಶೀರ್ವಾದ ವನ್ನು ನಿಜಮಾಡಿ ಸ್ವಾಮೀಜೀ” ಎಂದು ಭೋರಿಟ್ಟಳು.

ಅಳಬೇಡ ತಾಯೀ, ನನ್ನ ಬಾಯಿಂದ ಶ್ರೀ ರಾಮಚಂದ್ರ ಮಹಾಪ್ರಭುವೇ ಹಾಗೆ ನುಡಿಸಿದ್ದಾನೆ. ಆ ಮಹಾಮಹಿಮನ ವಾಕ್ಕು ವ್ಯರ್ಥವಾಗಲಾರದು. ನಡೆ, ನೋಡೋಣ, ನಿನ್ನ ಪತಿಯನ್ನು ಎಂದು ನುಡಿದು ಎದ್ದು ಹೊರಟರು. ಯಾವುದೋ ಕಾರಣಕ್ಕೆ ಶವಯಾತ್ರೆ ಅಲ್ಲಿ ನಿಂತಿತ್ತು. ಶವವನ್ನು ಇಳಿಸಿದ್ದರು. ತುಲಸೀದಾಸರು ಶವವನ್ನೊಮ್ಮೆ ದೃಷ್ಟಿಸಿ ನೋಡಿ, ರಾಮನಾಮ ಜಪಿಸಿ, ತಮ್ಮ ಕಮಂಡಲದಿಂದ ಜಲಪ್ರೋಕ್ಷಣೆ ಮಾಡಿದರು.
ಆಶ್ಚರ್ಯವೆಂಬಂತೆ ಶವದಲ್ಲಿ ಮೆಲ್ಲನೆ ಚಲನೆ ಮೂಡಿ ಚೈತನ್ಯ ಬಂದಿತು. ಅದನ್ನು ಪ್ರತ್ಯಕ್ಷ ನೋಡುತ್ತಾ ನಿಂತಿದ್ದ ಜನಸ್ತೋಮ ಸ್ವಾಮೀಜಿ ಯವರಿಗೂ, ಶ್ರೀ ರಾಮಚಂದ್ರನಿಗೂ ಜೈ ಜೈ ಕಾರ ಘೋಷಣೆ ಮಾಡುತ್ತಾ ಆನಂದದಿಂದ ವಾಪಸ್ಸಾದರು.

ಈ ಪವಾಡದಂತಹ ಘಟನೆಯಿಂದಾಗಿ ತುಲಸೀದಾಸರ ಮಹಿಮೆ ಇನ್ನೂ ಹೆಚ್ಚು ಹೆಚ್ಚು ಹರಡಲಾರಂಭಿಸಿತು. ಜನಗಳಲ್ಲಿ ಶ್ರೀ ರಾಮನ ಮೇಲೆ ಭಕ್ತಿ ಹೆಚ್ಚು ಹೆಚ್ಚು ಬೆಳೆಯಲು ಅನುವಾಯಿತು. ಈಗಲಂತೂ ಪರಮತಸ್ಥರ ಅಸಹನೆ ಎಲ್ಲೆ ಮೀರಿತು. ಅವರೆಲ್ಲಾ ಸೇರಿ ನೇರವಾಗಿ ಡೆಲ್ಲಿ ಬಾದಶಾಹನಲ್ಲಿಗೇ ಹೋಗಿ ಈ ತುಲಸೀದಾಸ ತನ್ನ ಪವಾಡಗಳಿಂದ ನಮ್ಮ ಮತದವರನ್ನು ಮೋಸಗೊಳಿಸುತ್ತಿದ್ದಾನೆ, ಎಂದು ಫಿ಼ರ್ಯಾದು ಕೊಟ್ಟರು. ಬಾದಶಹಾ ವಿಚಾರಣೆ ಮಾಡುತ್ತೇನೆಂದು ಹೇಳಿ ತುಲಸೀದಾಸರನ್ನು ತನ್ನ ದರ್ಬಾರ್ ಗೆ ಕರೆಸಿ “ತುಲಸೀದಾಸರೇ, ನೀವು ನಿಮ್ಮ ರಾಮ್ ನಾಮ್ ಎಲ್ಲಕ್ಕಿಂತ ಮಿಗಿಲು ಎಂದು ಪ್ರಚಾರ ಮಾಡುತ್ತಿದ್ದೀರಂತೆ, ಹೌದೇ?’ ಎಂದು ಪ್ರಶ್ನಿಸಿದ.

ತುಲಸೀದಾಸರು ಸ್ವಲ್ಪವೂ ಅಂಜದೇ, ಅಳುಕದೇ “ಹೌದು ಪ್ರಭೂ! ಸೃಷ್ಟಿಯಲ್ಲಿ ಸಕಲರಿಗೂ ಆಧಾರವಾಗಿರುವುದು ಶ್ರೀ ರಾಮನಾಮವೇ ಹೊರತು ಬೇರಾವುದೂ ಅಲ್ಲ” ಎಂದರು. ಬಾದಶಹಾ “ಓಹೋ ಹಾಗೇನು? ನೀವು ನಿಮ್ಮ ರಾಮ್ ನಾಮ್ ಶಕ್ತಿಯಿಂದ ಏನು ಬೇಕಾದರೂ ಸಾಧಿಸಬಹುದು” ಎಂದ. ತುಲಸೀದಾಸರು “ಸತ್ಯಸ್ಯ ಸತ್ಯ, ಶ್ರೀ ರಾಮನ ನಾಮಸ್ಮರಣೆಯಿಂದ ಸಾಧಿಸಲಾಗದ್ದು ಏನಿದೆ?” ಎಂದರು.ಬಾದಶಹಾ “ಮರಣವನ್ನು ಸಹ ಜಯಿಸಬಹುದು ಎಂದು ಹೇಳುತ್ತಿದ್ದೀರಿ” ಎಂದಾಗ, ತುಲಸೀದಾಸರು “ಹೌದು ಪ್ರಭುಗಳೇ, ರಾಮನಾಮಕ್ಕೆ ಯಾವುದೂ ಅಸಾಧ್ಯವಲ್ಲ” ಎಂದರು.

ಬಾದಶಹಾ “ಹಾಗೋ, ಹಾಗಾದರೆ ನಾವು ಇಲ್ಲಿಗೆ ಒಂದು ಶವವನ್ನು ತರಿಸುತ್ತೇವೆ. ಅದಕ್ಕೆ ನೀವು ನಿಮ್ಮ ರಾಮ್ ನಾಮ್ ಶಕ್ತಿಯಿಂದ ಮತ್ತೆ ಜೀವ ಬರಿಸಿ. ಆಗ ನಿಮ್ಮ ರಾಮ್ ನಾಮ್ ಶಕ್ತಿಯನ್ನು ನಂಬುತ್ತೇವೆ” ಎಂದ. ತುಲಸೀದಾಸರು “ಪ್ರಭುಗಳು ಕ್ಷಮಿಸಬೇಕು. ಜನನ ಮರಣಗಳು ಆ ಜಗತ್ಪತಿಯ ಆಜ್ಞೆಯಂತೆ ನಡೆಯುತ್ತವೆಯೇ ಹೊರತು ನಾವು ಬಯಸಿದಂತೆ ಅಲ್ಲ” ಎಂದರು

ಬಾದಶಹಾ “ಆಹಾಹಾ, ನೋಡಿದಿರಾ ತುಲಸೀದಾಸ್ ಅವರೇ. ನಿಮ್ಮ ಮಾತನ್ನು ನೀವೇ ನಿಲ್ಲಿಸಿ ಕೊಳ್ಳಲಾಗದೇ, ನೀವು ಪ್ರಚಾರ ಮಾಡುತ್ತಿರುವ ಸುಳ್ಳನ್ನು ಪ್ರತ್ಯಕ್ಷವಾಗಿ ಅಲ್ಲಗಳೆಯಲಾರದೇ, ಹೀಗೆಲ್ಲಾ ಹೇಳಿ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೀರಿ.
ನೀವು ಹೇಳುತ್ತಿರುವುದೆಲ್ಲಾ ಸುಳ್ಳು ಎಂದು ಎಲ್ಲರೆದುರು ಒಪ್ಪಿಕೊಳ್ಳಿ. ಇಲ್ಲವೇ ಶವಕ್ಕೆ ಜೀವ ಬರಿಸಿ ನಿಮ್ಮ ಮಾತು ಉಳಿಸಿಕೊಳ್ಳಿ. ಆಗ ನಿಮ್ಮನ್ನು ಹೋಗಲು ಬಿಡುತ್ತೇವೆ. ಆಗ ತುಲಸೀದಾಸರು “ಶ್ರೀ ರಾಮಾ, ಇಂತಹ ವಿಪತ್ಕರ ಪರಿಸ್ಥಿತಿಯನ್ನು ನೀನೇ ಸೃಷ್ಟಿಸಿದ್ದೀಯೆ. ಈಗ ನೀನೇ ಅದನ್ನು ಪರಿಹರಿಸಬೇಕು ತಂದೇ” ಎಂದು ಮನಸ್ಸಿನಲ್ಲೇ ಶ್ರೀ ರಾಮನ ಧ್ಯಾನದಲ್ಲಿ ಮಗ್ನರಾಗುತ್ತಾರೆ.
ಅದನ್ನು ಅವರ ಉದ್ಧಟತನವೆಂದು ಭಾವಿಸಿದ ಬಾದಶಹಾ ತುಲಸೀದಾಸರನ್ನು ಬಂಧಿಸಲು ಆಜ್ಞೆ ಮಾಡುತ್ತಾನೆ.

ಅಷ್ಟರಲ್ಲೇ, ಎಲ್ಲಿಂದ ಬಂದವೋ ಸಾವಿರಾರು ಕೋತಿಗಳ ಸೈನ್ಯ! ದರ್ಬಾರ್ ನಲ್ಲಿ ಧುಮುಕಿ ತುಲಸೀದಾಸರನ್ನು ಬಂಧಿಸಲು ಉದ್ಯುಕ್ತರಾಗುತ್ತಿದ್ದ ರಕ್ಷಕಭಟರನ್ನೂ, ಅಲ್ಲಿದ್ದ ಎಲ್ಲರನ್ನೂ ಘಾಸಿಗೊಳಿಸಿ ಅವರ ಆಯುಧಗಳನ್ನೆಲ್ಲಾ ಕಸಿದುಕೊಂಡು ಎಲ್ಲರಲ್ಲೂ ದಿಗ್ಭ್ರಾಂತಿ ಹುಟ್ಟಿಸಿ ಚದರಿ ಓಡುವಂತೆ ಮಾಡಿದವು. ಈ ಗಲಭೆಗೆ ಕಣ್ತೆರೆದು ನೋಡಿದ ತುಲಸೀದಾಸರಿಗೆ ಮಹದಾಶ್ಚರ್ಯ!!! ಸುತ್ತಲೂ ನೋಡಿದಾಗ ಅವರಿಗೆ ಸಿಂಹದ್ವಾರದಲ್ಲಿ ಆಸೀನನಾಗಿದ್ದ ಮಾರುತಿಯೇ ಕಂಡ!!!

ಶ್ರೀ ರಾಮಭಕ್ತ ಹನುಮಂತನೇ ಸ್ವತಃ ತಮ್ಮ ರಕ್ಷಣೆಗಾಗಿ ಬಂದಿರುವುದನ್ನು ನೋಡಿ ತುಲಸೀದಾಸರು ರೋಮಾಂಚನಗೊಂಡು ಆ ಕ್ಷಣದಲ್ಲಿ ಮನದಲ್ಲಿ ಮೂಡಿದ “ಜಯ ಹನುಮಾನ್, ಜ್ಞಾನಗುಣಸಾಗರ್….”
ಎಂಬ 40 ದೋಹಾಗಳನ್ನು ರಚಿಸಿ ಹಾಡಿಹೊಗಳುತ್ತಾರೆ. ಆ 40 ದೋಹಾಗಳೇ ಹನುಮಾನ್ ಚಾಲೀಸ.

🖊️ಸಂಗ್ರಹ🖋️
ಡಾ.ಅಭಿನವ ರಾಮಲಿಂಗ ಶಿವಶರಣ ಮಹಾಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button