ಹೋಗಿ ಬನ್ನಿ ವಿದ್ಯಾರ್ಥಿಗಳೇ..ಸಂಭ್ರಮವಿಲ್ಲದ ಬೀಳ್ಕೊಡುಗೆ
ಹೋಗಿ ಬನ್ನಿ ವಿದ್ಯಾರ್ಥಿಗಳೇ ನಿಮ್ಮ ಭವಿಷ್ಯ ಉಜ್ವಲವಾಗಲಿ-ಹಾರಣಗೇರಾ
-ರಾಘವೇಂದ್ರ. ಹಾರಣಗೇರಾ
ಪ್ರತಿವರ್ಷ ಎಪ್ರಿಲ್/ ಮೇ ತಿಂಗಳಲ್ಲಿ ಶೈಕ್ಷಣಿಕ ವರ್ಷದ ಕೊನೆಯ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಬಿಳ್ಕೋಡುವ ಸಮಾರಂಭ ಬಹಳಷ್ಟು ವಿಜೃಂಭಣೆಯಿಂದ ಜರುಗುತ್ತಿದ್ದವು.
ಈ ಸಮಾರಂಭದಲ್ಲಿ ತಾವು ಕಲಿತ ಶಿಕ್ಷಣ ಸಂಸ್ಥೆಯ ಬಗ್ಗೆ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಸಂಪನ್ಮೂಲ ವ್ಯಕ್ತಿ, ಸಾಧಕರು, ಸಾಹಿತಿ, ಚಿಂತಕ, ವಿದ್ವಾಂಸರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿ ಅವರ ಮೂಲಕ ವಿದ್ಯಾರ್ಥಿಗಳಿಗೆ ಮುಂದಿನ ಸಾಧನೆಯ ಬದುಕು, ಉಜ್ವಲ ಭವಿಷ್ಯದ ಬಗ್ಗೆ ತಿಳಿಸಿಕೊಡಲಾಗುತ್ತಿತ್ತು.
ನಂತರ ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ಮಿಮಿಕ್ರಿ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ಅವಕಾಶ ಮಾಡಿಕೊಡಲಾಗುತ್ತಿತ್ತು. ವರ್ಷಂಪೂರ್ತಿ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಚಟುವಟಿಕೆಗಳ, ಸಿದ್ದಿ, ಸಾಧನೆಗಳ, ಮುಂದಿನ ಹೆಜ್ಜೆಗಳ ಅವಲೋಕನ ಈ ಸಮಾರಂಭದಲ್ಲಿ ನಡೆಯುತ್ತಿತ್ತು.
ಕೊನೆಯಲ್ಲಿ ವಿದ್ಯಾಭ್ಯಾಸ ಮುಗಿಸಿ ಶಿಕ್ಷಣ ಸಂಸ್ಥೆಯಿಂದ ಹೊರಹೊಗುವ ವಿದ್ಯಾರ್ಥಿಗಳು ಎಲ್ಲಾ ಅಧ್ಯಾಪಕರೊಂದಿಗೆ, ತಮ್ಮ ಕಿರಿಯ ವಿದ್ಯಾರ್ಥಿಗಳೊಂದಿಗೆ ಪೊಟೊ ತೆಗಿಸಿಕೊಳ್ಳುವುದು, ಅಟೋಗ್ರಪ್ ಬರೆಸಿಕೊಳ್ಳುವುದು, ಪರಸ್ಪರ ಸಹಪಾಠಿಗಳು ಕಳೆದ ಸಂಭ್ರಮದ ಕ್ಷಣಗಳನ್ನು ನೆನೆದು ಕಣ್ಣಲ್ಲಿ ನೀರು ತರುವುದು ಮುಂತಾದ ಅನೇಕ ಸಂದರ್ಭಗಳಿಗೆ ಅವಕಾಶ ಮಾಡಿಕೊಡುತ್ತಿತ್ತು.
ಆದರೆ ಕೊರೊನಾ ಅರ್ದ ಶೈಕ್ಷಣಿಕ ವರ್ಷದ ಎಲ್ಲಾ ಚಟುವಟಿಕೆಗಳನ್ನು ರದ್ದು ಮಾಡಿತು. ವಿದ್ಯಾರ್ಥಿಗಳ ಅದ್ಯಯನದ ಕಲಿಕಾ ಚಟುವಟಿಕೆಗಳ ಮೇಲೆ ತುಂಬಾ ಪರಿಣಾಮ ಬೀರಿತು. ಎಲ್ಲಾ ಪರೀಕ್ಷೆಗಳು ರದ್ದು ಪಡಿಸಿದರೂ ಸಹ ಎಸ್.ಎಸ್.ಎಲ್.ಸಿ, ಪಿ.ಯು.ಸಿ. ಮತ್ತು ಅಂತಿಮ ವಿವಿಧ ಪರೀಕ್ಷೆಗಳು ನಡೆಯಲು ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು.
ಬಿ.ಎ. ಅಂತಿಮ ವರ್ಷದ ವಿದ್ಯಾರ್ಥಿ ಸರ್ ನಮಗೆ ಬಿಳ್ಕೋಡುವ ಸಮಾರಂಭ ಮಾಡಿ ಕಳಸ್ರಿ ಎಂದಾಗ ಮನಸ್ಸು ಭಾವುಕತೆಗೆ ಒಳಗಾಯಿತು. ನನ್ನ ಜೀವನದ ಹೆಚ್ಚು ಸಮಯ ನನ್ನ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಲ್ಲಿ ಕಳೆದಂತವನು. ತರಗತಿಯಲ್ಲಿ ಪಾಠದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ, ವಿವಿಧ ರೀತಿಯ ಪ್ರತಿಭೆಯ ಅನಾವರಣಕ್ಕೆ ಅಭಿವಿನ್ಯಾಸ, ಕೌಶಲ್ಯ ಅಭಿವೃದ್ಧಿ, ಮನದಾಳದ ಮಾತು, ಸಂಗೀತ ಸಾಹಿತ್ಯ, ನಾಟಕ, ಕ್ಷೇತ್ರ ಕಾರ್ಯ ಅಧ್ಯಯನ ಮುಂತಾದ ಚಟುವಟಿಕೆಗಳನ್ನು ಪ್ರಾಂಶುಪಾಲರ ಹಾಗೂ ಹಿರಿಯ ಅದ್ಯಾಪಕರ ಮಾರ್ಗದರ್ಶನದಲ್ಲಿ ತುಂಬಾ ಕ್ರಿಯಾಶೀಲತೆಯಿಂದ ನಡೆಸುತ್ತಿದ್ದೆ.
ವಿದ್ಯಾರ್ಥಿಗಳು ತುಂಬಾ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು. ತರಗತಿಯಲ್ಲಿ ಶಿಸ್ತು, ಗಾಂಭಿರ್ಯತೆ ಕಾಪಾಡಲು ಅನೇಕ ಸಲ ವಿದ್ಯಾರ್ಥಿಗಳಿಗೆ ಬೈದಿದ್ದೆನೆ, ತರಗತಿಯಿಂದ ಹೊರಗೆ ಕಳಿಸಿದ್ದೆನೆ, ಸಿಟ್ಟು ಮಾಡಿಕೊಂಡಿದ್ದೆನೆ. ಮರುದಿನ ಬೆಳಗ್ಗೆ ಕಾಲೇಜಿನಲ್ಲಿ ಆ ವಿದ್ಯಾರ್ಥಿಗಳು ನಗನಗುತ್ತ ಬಂದು ಮಾತಾಡಿಸಿದಾಗ ಮನೆಯಲ್ಲಿ ತಂದೆ ತಾಯಿ ಎನೇ ಬೈದರೂ, ಅಂದರೂ ಯಾವ ರೀತಿ ಅಪ್ಪಾ, ಅವ್ವಾ ಎಂದು ಮಡಿಲಿಗೆ ಬರುತ್ತವೋ ಅಂತಹ ತಂದೆ, ತಾಯಿ, ಮಕ್ಕಳ ನಡುವಿನ ಪ್ರೀತಿ, ವಾತ್ಸಲ್ಯ, ಮಮತೆ, ಕಾಳಜಿ ಭಾವನಾತ್ಮಕ, ಮಾನವೀಯ ಅಂತಃಕರಣ ನನ್ನ ವಿದ್ಯಾರ್ಥಿಗಳಲ್ಲಿ ಕಂಡಿದ್ದೆನೆ.
ಇಂತಹ ಮಕ್ಕಳು ಕಾಲೇಜಿನ ವಿದ್ಯಾಭ್ಯಾಸ ಮುಗಿಸಿ ಹೊಗುವ ಸಂದರ್ಭದಲ್ಲಿ ಕಣ್ಣಂಚಿನಲ್ಲಿ ನೀರು ತುಂಬಿ ಬಂತು. ಕೊರೊನಾ ನಿರ್ಬಂಧನಗಳ ನಡುವೆ ವಿದ್ಯಾರ್ಥಿಗಳನ್ನು ಸಂಭ್ರಮದಿಂದ ಕಾರ್ಯಕ್ರಮ ನಡೆಸಿ ಬಿಳ್ಕೋಡಲು ಸಾದ್ಯವಾಗಲಿಲ್ಲ. ಕೊನೆಯ ಪರೀಕ್ಷೆ ಮುಗಿದ ನಂತರ ಕಾಲೇಜಿನ ಕ್ರಿಯಾಶೀಲ ಪ್ರಾಂಶುಪಾಲರಾದ ಶಿವಲಿಂಗಣ್ಣ ಸಾಹು ಅವರು ಇವತ್ತು ವಿದ್ಯಾರ್ಥಿಗಳ ಪರೀಕ್ಷೆ ಮುಗಿಯುತ್ತವೆ.
ಎಲ್ಲಾ ಅಧ್ಯಾಪಕರು, ಸಿಬ್ಬಂದಿ ವರ್ಗದವರು ನೆನಪಿಗಾಗಿ ವಿದ್ಯಾರ್ಥಿಗಳೊಂದಿಗೆ ಪೊಟೊ ತೆಗೆದುಕೊಳ್ಳೊಣ ಎಂದು ಹೇಳಿದರು. ಪೊಟೊ ತೆಗಿಸಿಕೊಳ್ಳವುದಕ್ಕಿಂತ ಮುಂಚೆ ಪ್ರಾಂಶುಪಾಲರು ಮಾತನಾಡಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಮತ್ತು ಆರೋಗ್ಯಕರ ಬದುಕಿಗೆ ಶುಭ ಹಾರೈಸಿದರು.
ಪದವಿ ಅಧ್ಯಯನ ಮುಗಿಸಿ ಹೊಗುತ್ತಿರುವ ನನ್ನ ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಬೇಕಾದ ಕೆಲವು ವಿಚಾರಗಳು ವಿನಯವಾಣಿ ಪತ್ರಿಕೆಯ ಮೂಲಕ ಹಂಚಿಕೊಳ್ಳುತ್ತಿದ್ದೆನೆ. ಪ್ರೀತಿಯ ಅಕ್ಕರೆಯ ನನ್ನ ಅಚ್ಚುಮೆಚ್ಚಿನ ವಿದ್ಯಾರ್ಥಿಗಳೆ, ನಿಮ್ಮ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಬೇಕು.
ಅನಾವಶ್ಯಕವಾದ ಕಾರ್ಯಗಳಲ್ಲಿ ವಿಚಾರಗಳಲ್ಲಿ ವ್ಯರ್ಥ ಕಾಲಹರಣ ಮಾಡದೆ ಸತತ ಶ್ರದ್ದೆಯ ಅಧ್ಯಯನ, ಸಾಧನೆಯ ಛಲ, ನಿರಂತರ ಪ್ರಯತ್ನ , ಒಳ್ಳೆಯ ಯೋಚನೆ, ಒಳ್ಳೆಯ ಹವ್ಯಾಸ, ಒಳ್ಳೆಯ ಕೆಲಸ ನಿಮ್ಮ ಭವಿಷ್ಯಕ್ಕೆ ಬುತ್ತಿಯಾಗಿ ಪರಿಣಮಿಸುತ್ತದೆ.
ನಾನು ಚೆನ್ನಾಗಿ ಓದುತ್ತೆನೆ ಎಂಬ ಶ್ರದ್ದೆ ನಿಮ್ಮ ಓದನ್ನು ಮುನ್ನೆಡೆಸುತ್ತದೆ. ನಿಮ್ಮಲ್ಲಿರುವ ಪ್ರತಿಭೆಯನ್ನು ಅರಳಿಸುತ್ತದೆ. ನಿಮ್ಮೊಳಗಿರುವ ಸಾಮರ್ಥ್ಯ, ಪ್ರತಿಭೆ, ವಿಶೇಷತೆ ತಿಳಿಸಿಕೊಡುತ್ತದೆ. ನನ್ನಿಂದ ಏನಾದರೂ ಸಾಧನೆ ಮಾಡಲು ಸಾಧ್ಯವಿದೆ ಎಂಬ ನಂಬಿಕೆ ನಿಮ್ಮಲ್ಲಿ ಸಾಧಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಜೀವನದಲ್ಲಿ ಭರವಸೆ ಮತ್ತು ಧೈರ್ಯವನ್ನು ಕಳೆದುಕೊಳ್ಳಬಾರದು.
ಧೈರ್ಯದಿಂದ, ಅರ್ಪಣಾ ಮನೋಭಾವದಿಂದ ಗುರಿಯನ್ನು ಸಾಧಿಸಿ. ಹಗಲುಗನಸು ಕಾಣಬೇಡಿ, ಯಾವ ಆಕರ್ಷಣೆಗಳಿಗೆ ಒಳಗಾಗಬೇಡಿ, ಕಲ್ಪನಾ ಜಗತ್ತಿನಲ್ಲಿರಬೇಡಿ, ವರ್ತಮಾನದಲ್ಲಿ ಬದುಕು ಸಾಗಿಸಿ. ಆಲಸ್ಯ, ಅಸಹನೆ, ಅವಿಧೇಯತೆ ಮನಸ್ಸಿನಿಂದ ಹೊರಹಾಕಿ. ಅಸೂಯೆ, ಕೋಪ, ನಿರಾಶೆ, ಹತಾಶೆ ಇವು ವ್ಯಕ್ತಿತ್ವ ವಿಕಸನಕ್ಕೆ ಅಡ್ಡಿಯನ್ನುಂಟು ಮಾಡುತ್ತವೆ.
ನಕಾರಾತ್ಮಕ ಭಾವನೆಗಳಿಗೆ ಕಡಿವಾಣ ಹಾಕಿ. ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸಿ. ಗುರು ಹಿರಿಯರನ್ನು ಗೌರವಿಸಿ. ನಿಮ್ಮ ಮೇಲೆ ನಿಮಗೆ ಗೌರವ ಇರಲಿ. ಸರಳ, ಸಜ್ಜನಿಕೆ, ವಿನಯ, ಸೌಜನ್ಯ, ಸಹನೆ, ತಾಳ್ಮೆ, ಹೊಂದಾಣಿಕೆ ಮುಂತಾದ ಗುಣಗಳು ನಿಮ್ಮ ವ್ಯಕ್ತಿತ್ವಕ್ಕೆ ಮೆರಗು ನೀಡುತ್ತವೆ. ಅರ್ಥ ತರುತ್ತವೆ.
ನೀವು ಯಾವ ಕ್ಷೇತ್ರದಲ್ಲಿ ಸಾಧಿಸಲು ಸಾಧ್ಯವಿದೆ ಎಂಬುದನ್ನು ಅರಿತುಕೊಂಡು ಆ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಿ. ಜನ್ಮ ನೀಡಿದ ತಂದೆ-ತಾಯಿಗೆ, ಜ್ಞಾನ ನೀಡಿದ ಗುರುಗಳಿಗೆ ನಿಮ್ಮ ಸಾಧನೆಯ ಬದುಕಿನ ಮೂಲಕ ಕೀರ್ತಿ ತರಬೇಕು. ದೃಢ ನಿರ್ಧಾರ, ಸ್ಪಷ್ಟ ಗುರಿ, ಯೋಜನಬದ್ದವಾದ ಶಿಸ್ತಿನ ಅಧ್ಯಯನ, ಆತ್ಮವಿಶ್ವಾಸ ಯಶಸ್ವಿ ಬದುಕಿಗೆ ದಾರಿ ಮಾಡಿಕೊಡುತ್ತವೆ. ನಾವು ಕೇವಲ ಉಪನ್ಯಾಸಕರಾಗಿದ್ದೆವೆ ಆದರೆ ಮಹತ್ತರವಾದದ್ದನ್ನು ಸಾಧಿಸಿಲ್ಲ. ಸಾಧನೆಯ ಬದುಕು ನಿಮ್ಮಿಂದ ನಿರೀಕ್ಷಿಸುತ್ತಿದ್ದೆವೆ.
ನಿಮ್ಮ ಬದುಕಿನ ದಾರಿ ನೀವೆ ಕಂಡುಕೊಳ್ಳಬೇಕು. ನೀವು ನಡೆತುತ್ತಿರುವ ದಾರಿ ನಿಮ್ಮ ವೈಯಕ್ತಿಕ, ಕೌಟುಂಬಿಕ, ಸಮಾಜದ ಹಿತಕ್ಕೆ ಪೂರಕವಾಗಿರಬೇಕು. ಸಾಧನೆಯ ಮೂಲಕ ಉಜ್ವಲ ಭವಿಷ್ಯದೊಂದಿಗೆ, ಒಳ್ಳೆಯ ಮಾರ್ಗದಲ್ಲಿ, ಸುಖ, ಸಂತೋಷ, ನೆಮ್ಮದಿ, ಸಂತೃಪ್ತಿ, ಆರೋಗ್ಯದಿಂದ ಬದುಕನ್ನು ಸಾಗಿಸುವ ಭಾಗ್ಯ ನಿಮ್ಮದಾಗಲಿ. ಹೋಗಿ ಬನ್ನಿ ವಿದ್ಯಾರ್ಥಿಗಳೇ, ನಿಮ್ಮ ಭವಿಷ್ಯ ಉಜ್ವಲವಾಗಲಿ.
-ರಾಘವೇಂದ್ರ ಹಾರಣಗೇರಾ ಸಮಾಜಶಾಸ್ತ್ರ ಉಪನ್ಯಾಸಕರು ಶಹಾಪುರ