ಹೊಸ ಚಿಂತನೆಯ ಯುವ ಸಾಹಿತಿ ಡಾ.ಎಂ.ನಾಟೇಕಾರ್
ಹೊಸ ತಲೆಮಾರಿನ ಪ್ರಮುಖ ಸಾಹಿತಿ, ದಲಿತ ಸಂವೇದನಾಶೀಲ ಚಿಂತಕ – ಡಾ. ಮರಿಯಪ್ಪ ನಾಟೇಕರ್
–ರಾಘವೇಂದ್ರ ಹಾರಣಗೇರಾ
ಸಗರನಾಡಿನಲ್ಲಿ ಅಕ್ಷರ ಲೋಕಕ್ಕೆ ತೆರೆದುಕೊಂಡ ಹೊಸ ತಲೆಮಾರಿನ ಲೇಖಕ, ಸಾಹಿತಿಗಳಲ್ಲಿ ಡಾ. ಮರಿಯಪ್ಪ ನಾಟೇಕರ್ ಅವರು ಪ್ರಮುಖರಾಗಿದ್ದಾರೆ.
ಯಾದಗಿರಿ ಜಿಲ್ಲೆಯ ನೂತನ ತಾಲೂಕ ವಡಗೇರಾದಲ್ಲಿ ವೀರಪ್ಪ ಮತ್ತು ನಿಂಗಮ್ಮ ನಾಟೇಕರ್ ಸುಸಂಸ್ಕೃತ ಬಡ ದಂಪತಿಗಳ ಉದರದಲ್ಲಿ ಜುಲೈ 01, 1979 ರಲ್ಲಿ ಹಿರಿಯ ಮಗನಾಗಿ ಜನಿಸಿದರು.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ವಡಗೇರಾದಲ್ಲಿ, ಪದವಿಪೂರ್ವ ಶಿಕ್ಷಣ ಶಹಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಾಗೂ ಕಲ್ಬುರ್ಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ ಪದವಿ ಅಧ್ಯಯನ ಮಾಡಿದ ನಾಟೇಕರ್ ಅವರು ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಬಿ.ಎಡ್ ಪದವಿ, ಮುಂಬಯಿ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಮ್.ಎ ಸ್ನಾತಕೋತ್ತರ ಪದವಿ ಮತ್ತು ಮುಂಬಯಿ ಕನ್ನಡ ಕಾವ್ಯ- ಒಂದು ಅಧ್ಯಯನ ಎಂಬ ವಿಷಯದ ಮೇಲೆ ಅಧ್ಯಯನ ಮಾಡಿ M.Phil ಪದವಿ ಹಾಗೂ ದ.ರಾ. ಬೇಂದ್ರೆಯವರ ಸಮಗ್ರ ನಾಟಕಗಳು ಎಂಬ ವಿಷಯದ ಮೇಲೆ ಸಂಶೋಧನೆ ನಡೆಸಿ ಮಹಾಪ್ರಬಂಧ ಮಂಡಿಸಿ Ph.D ಪದವಿ ಪಡೆದಿದ್ದಾರೆ.
ಮುಂಬಯಿ ಮಹಾನಗರ ಪಾಲಿಕೆಯ ಡಿ.ಎನ್ ನಗರ ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಡಾ. ಮರಿಯಪ್ಪ ನಾಟೇಕರ್ ಅವರು ಈ ಶಾಲೆಯಲ್ಲಿ ಆರು ವರ್ಷ ಸೇವೆ ಸಲ್ಲಿಸಿ ತಾಯಿನಾಡಿಗೆ ಆಗಮಿಸಿ ರಾಯಚೂರು ಹಾಗೂ ಯಾದಗಿರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಮುಂಬಯಿ ವಿಶ್ವವಿದ್ಯಾಲಯದ ಶೈಕ್ಷಣಿಕ ಹಾಗೂ ಮುಂಬಯಿ ನಗರದ ಸಾಂಸ್ಕೃತಿಕ ಪರಿಸರ ಅವರ ಬದುಕಿಗೆ ಹೊಸ ಆಯಾಮವನ್ನು ನೀಡಿದೆ. ಕರ್ನಾಟಕದ ಅನೇಕ ಹಿರಿಯ ಸಾಹಿತಿಗಳ, ಚಿಂತಕರ, ವಿದ್ವಾಂಸರ, ಒಡನಾಟವನ್ನು ಬೆಳೆಸಿದೆ. ಬರಹ ಮತ್ತು ಬದುಕಿಗೆ ಹೊಸ ದೃಷ್ಟಿಯನ್ನು ಕೊಟ್ಟಿದೆ.
ಶೈಕ್ಷಣಿಕ ಮತ್ತು ಸಾಹಿತ್ಯಿಕವಾಗಿ ಬೆಳೆಯಲು ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡಿದ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಜಿ.ಎನ್ ಉಪಾಧ್ಯೆ ಹಾಗೂ ಬಡತನದ ಪರಿಸ್ಥಿತಿಯಲ್ಲಿ ಹಲವು ಸಂಕಟಗಳಲ್ಲಿ ಅಧ್ಯಯನ ಮಾಡುತಿದ್ದ ನಾಟೇಕರ್ ಅವರಿಗೆ ತನು ಮನ ಧನದಿಂದ ಸಹಾಯ ಮಾಡಿ ಬೆಳೆಸಿದ ಮುಂಬಯಿಯ ವಿಜ್ಞಾನ ತಜ್ಞರಾದ ಶ್ರೀಮತಿ ಸುಮನ್ ಚಿಪ್ಳೂಣಕರ್ ಮುದ್ರಾ ಅವರಿಗೆ ಡಾ. ಮರಿಯಪ್ಪ ನಾಟೇಕರ್ ಅವರು ತುಂಬು ಹೃದಯದಿಂದ ಕೃತಜ್ಞತೆಯನ್ನು ಸಲ್ಲಿಸುತ್ತಾರೆ.
ಅಧ್ಯಯನ, ಸಂಘಟನೆ, ಹೋರಾಟ ಹಾಗೂ ಹೊಸ ಆಲೋಚನೆಗಳ ಮೂಲಕ ತಮ್ಮ ಬರಹಗಳನ್ನು ಜೀವಂತವಾಗಿಟ್ಟುಕೊಂಡ ಡಾ. ನಾಟೇಕರ್ ಅವರು ಸಾರಸ್ವತ ಲೋಕಕ್ಕೆ ” ಇತಿಹಾಸ ಮರೆತವರು” (ಕಾವ್ಯ), ” ಬದುಕು ಕರಗುವ ಮುನ್ನ” (ಕಾವ್ಯ), ” ಅಂಬಲಿ” (ಸಣ್ಣ ಕಥೆ), ” ಸುಗತ ಸಂವಾದ” ಮುಂತಾದ ಕೃತಿಗಳನ್ನು ಅರ್ಪಿಸಿದ್ದಾರೆ. ” ಕಾಗೆ ಬಣ್ಣದ ಕವಿತೆ” ಅಚ್ಚಿನಲ್ಲಿದೆ. ಉಡುಪಿಯಲ್ಲಿ ನಡೆದ 74 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ಬೆಳಗಾವಿಯಲ್ಲಿ ನಡೆದ 4 ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಮತ್ತು ಮುಂಬಯಿ, ಸೊಲ್ಲಾಪುರ, ದೇಹಲಿ, ಗುಲ್ಬರ್ಗ, ಮೈಸೂರು ದಸರಾ ಕವಿಗೋಷ್ಠಿ ಮುಂತಾದವುಗಳ ಕಡೆ ಆಯೋಜಿಸಿದ ಕವಿಗೋಷ್ಟಿಗಳಲ್ಲಿ ಕವನ ವಾಚನ ಮಾಡಿ ನಾಡಿನ ವಿದ್ವಾಂಸರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸಂಕ್ರಮಣ ಪತ್ರಿಕೆಯ ಕಾವ್ಯ ಪುರಸ್ಕಾರ ಪಡೆದಿರುವ ಡಾ. ನಾಟೇಕಾರ್ ಅವರು ನಾಡಿನ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಘ ಸಂಸ್ಥೆಗಳಿಂದ ಹಲವು ಸನ್ಮಾನ, ಗೌರವಗಳಿಗೆ ಪಾತ್ರರಾಗಿದ್ದಾರೆ. ಮಹಾರಾಷ್ಟ್ರ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ೬ ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಯಾದಗಿರಿ ಜಿಲ್ಲೆಯ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಲ್ಲದೆ ಡಾ.ಭರತಕುಮಾರ ಪೊಲಿಪು, ವಿಮಲಾ ಭಟ್ ಮುಂತಾದವರ ನಿರ್ದೇಶನದ ನಾಟಕಗಳಲ್ಲಿ ನಟಿಸಿದ್ದಾರೆ. ದಲಿತ ಚಳುವಳಿಗಳು ಹಮ್ಮಿಕೊಂಡ ಹಲವಾರು ಸಮಾವೇಶಗಳಲ್ಲಿ ದಲಿತ ಸಮುದಾಯಗಳ ಜಾಗೃತಿಗಾಗಿ ಕಿರು ನಾಟಕಗಳನ್ನು ರಚಿಸಿ, ನಿರ್ದೇಶಿಸಿ ನಟಿಸಿದ್ದಾರೆ.
ನಾಡಿನ ಪ್ರಗತಿಪರ, ದಲಿತ ಸಂವೇದನಾಶೀಲ ಸಾಹಿತಿ, ಚಿಂತಕರಲ್ಲಿ ಒಬ್ಬರಾಗಿರುವ ಡಾ. ಮರಿಯಪ್ಪ ನಾಟೇಕರ್ ಅವರ ಬರಹಗಳಲ್ಲಿ ತಳ ಸಮುದಾಯಗಳ ಸಂಕಟಗಳು, ಶೋಷಣೆಗಳು, ತಲ್ಲಣಗಳು, ಅನ್ಯಾಯದ ಬಗ್ಗೆ ಆಕ್ರೋಶ, ಶೋಷಿತ ಸಮುದಾಯಗಳ ಜನರ ಬದುಕು ಎತ್ತರಿಸಬೇಕೆನ್ನುವ ಜೀವಪರ ಕಾಳಜಿ, ಚೆಲುವು, ಒಲವು ಮುಂತಾದವು ಕಂಡುಬರುತ್ತವೆ. ಬಡತನದ ಬವಣೆಗಳಲ್ಲಿ ನಿಷ್ಕಲ್ಮಶ ಮನಸ್ಸಿನಿಂದ ಹೊಸ ಜೀವನ ಕಂಡುಕೊಳ್ಳಬೇಕೆನ್ನುವ ಜೀವನ ಪ್ರೀತಿ, ಆಪ್ತತೆ ಹೊಂದಿರುವ ಕವಿ, ಲೇಖಕರಾಗಿದ್ದಾರೆ.
ನಮ್ಮ ಸಾಹಿತ್ಯ ಪರಂಪರೆಯ ವಿಸ್ತಾರವಾದ ಓದು ಇರುವುದರಿಂದ ದಲಿತ, ಬಂಡಾಯ, ಇತರ ಸಾಹಿತ್ಯದ ಪ್ರಕಾರಗಳ ಪ್ರಭಾವ ನಾಟೇಕರ್ ಅವರ ಬರಹಗಳಲ್ಲಿ ಕಾಣಬಹುದಾಗಿದೆ. ಅವರ ಬರವಣಿಗೆಯಲ್ಲಿ ಅವಸರವಿಲ್ಲ. ಗಾಂಭೀರ್ಯತೆ ಇದೆ, ಸಾಮಾಜಿಕ ಚಿಂತನೆ ಇದೆ, ಆಪ್ತತೆ ಇದೆ. ಯಾರ ಹಂಗಿಗೆ ಒಳಗಾಗದ ಸ್ವಾತಂತ್ರ್ಯ ಇದೆ, ವೈವಿಧ್ಯತೆ ಇದೆ, ಬಿನ್ನ ನಿಲುವುಗಳಿವೆ., ಸೂಕ್ಷ್ಮ ಅವಲೋಕನ ದೃಷ್ಟಿಯಿದೆ. ಸಮಕಾಲೀನ ಘಟನೆಗಳಿಗೆ ಮುಖಾಮುಖಿ ಆಗುತ್ತವೆ. ಜನಪರ ನಿಲುವುಗಳಿವೆ.
ಜನರ ಬವಣೆಗಳಿಗೆ ಧ್ವನಿ ಇದೆ. ನಿಷ್ಠುರತೆ, ಬದ್ದತೆ, ಪ್ರಮಾಣಿಕತೆ ಕಂಡುಬರುತ್ತದೆ. ಸಾಮಾಜಿಕ ಹಲವು ಸಮಸ್ಯೆಗಳಿಗೆ, ಆತಂಕಗಳಿಗೆ ಪ್ರತಿಕ್ರಿಯಿಸುತ್ತವೆ. ತನ್ನ ಸುತ್ತಲಿನ ಬದುಕಿಗೆ ಸ್ಪಂದಿಸುವ ಮುಕ್ತ ಮನಸ್ಸಿನ ಪ್ರಗತಿಪರ ಆಲೋಚನೆವುಳ್ಳವರಾಗಿದ್ದಾರೆ. ತಮ್ಮ ಅದ್ಯಯನ, ಅದ್ಯಾಪನ, ಬರಹಗಳೊಂದಿಗೆ ಸಾಮಾಜಿಕ, ಸಾಂಸ್ಕೃತಿಕ ಜೀವನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಸರಳ ಸೌಜನ್ಯಮೂರ್ತಿ , ಮೃದು ಮಾತಿನ, ವಿನಯವಂತಿಕೆ, ಸೂಕ್ಷ್ಮ ಸಂವೇದನೆಯ ಲೇಖಕ ಡಾ. ಮರಿಯಪ್ಪ ನಾಟೇಕರ್ ಅವರು ಸಮಕಾಲೀನ ರಾಜಕಾರಣದೊಂದಿಗೆ ಅನುಸಂಧಾನ ಮಾಡುತ್ತಿರುವ ಸಾಹಿತಿ. ಇದು ಅಗತ್ಯವೂ ಆಗಿದೆ. ಹಿರಿಯ ಸಾಹಿತಿ ಶಾಂತರಸರು ಹೇಳುವಂತೆ ಸಾಹಿತಿಯಾದವನು ಸಮಕಾಲೀನ ರಾಜಕಾರಣದೊಂದಿಗೆ ಅನುಸಂಧಾನ ಮಾಡಲೇಬೇಕು. ಜೀವಂತ ಮಾನವ ಸಮಾಜದೊಂದಿಗೆ ಮುಖಾಮುಖಿಯಾಗಬೇಕು, ತನ್ನ ಸುತ್ತಲಿನ ಬದುಕಿಗೆ ತೆರದ ಕಣ್ಣುಗಳಿಂದ ಸ್ಪಂದಿಸಬೇಕು.
ಕಲ್ಯಾಣ ಕರ್ನಾಟಕದ ಪ್ರತಿಭಾವಂತ ಸಾಹಿತಿ, ಚಿಂತಕ, ಲೇಖಕರಲ್ಲಿ ಒಬ್ಬರಾಗಿರುವ ಡಾ. ಮರಿಯಪ್ಪ ನಾಟೇಕರ್ ಅವರಿಂದ ಮೌಲಿಕ ಕೃತಿಗಳು ಹೊರಬರಲಿ. ನಾಡಿನ ಸಾಹಿತ್ಯ ಲೋಕಕ್ಕೆ ವಿಶಿಷ್ಟ ಕೊಡುಗೆ ನೀಡಲಿ ಎಂದು ಆಶಿಸೋಣ.
ಲೇಖನಗಳು ಚೆನ್ನಾಗಿವೆ…