ಉದ್ಯಮಿಗೆ ಚಾಕು ಇರಿದು 25 ಲಕ್ಷ ರೂ. ದರೋಡೆ!
ಚಿತ್ರದುರ್ಗ : ಜಿಲ್ಲೆಯ ಹಿರಿಯೂರು ನಗರದಲ್ಲಿ ಉದ್ಯಮಿಗೆ ಚಾಕು ಇರಿದು 25 ಲಕ್ಷ ರೂ. ದರೋಡೆ ಮಾಡಿದ ಘಟನೆ ನಡೆದಿದೆ. ಹೊಸದುರ್ಗ ಪಟ್ಟಣದಿಂದ ಹಿರಿಯೂರಿಗೆ ಆಗಮಿಸಿ ಜಯನಗರದಲ್ಲಿನ ಮನೆ ಪ್ರವೇಶಿಸುವ ವೇಳೆ ಬೈಕಿನಲ್ಲಿ ಬಂದ ದರೋಡೆಕೋರರು ಮೂವರು ಉದ್ಯಮಿ ವಲಿಸಾಬ್ ಗೆ ಚಾಕು ಇರಿದು 25 ಲಕ್ಷ ರೂಪಾಯಿಯಿದ್ದ ಬ್ಯಾಗ್ ಕಸಿದು ಎಸ್ಕೇಪ್ ಆಗಿದ್ದಾರೆ. ಮೂವರು ದರೋಡೆಕೋರರು ಬೈಕ್ ಏರಿ ಎಸ್ಕೇಪ್ ಆಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಸ್ಥಳೀಯರು ಬೈಕ್ ಬೆನ್ನತ್ತಲು ಯತ್ನಿಸಿ ವಿಫಲರಾಗಿದ್ದಾರೆ.
ಭುಜ ಭಾಗದಲ್ಲಿ ಗಾಯಗೊಂಡಿರುವ ವಲಿಸಾಬ್ ಹಿರಿಯೂರು ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ಉದ್ಯಮಿ ವಲಿಸಾಬ್ ಹಿರಿಯೂರು ಮತ್ತು ಹೊಸದುರ್ಗ ಪಟ್ಟಗಳಲ್ಲಿನ ವಿವಿಧ ಅಂಗಡಿಗಳಿಗೆ ಗುಟಕಾ, ಅಡಿಕೆ ಪಾಕೇಟ್ ಪೂರೈಸಿ ಹಣ ತೆಗೆದುಕೊಂಡು ಬರುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದ ದರೋಡೆಕೋರರು ಇಂದು ಪಲ್ಸರ್ ಬೈಕ್‌ನಲ್ಲಿ ಹಿಂಬಾಲಿಸಿ ಕೃತ್ಯವೆಸಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಹಿರಿಯೂರು ಪೊಲೀಸರು, ಎಸ್ಪಿ ಡಾ.ಕೆ.ಅರುಣ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಹಿರಿಯೂರು ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.