ಅಂಗರಕ್ಷಕರು ದೇವೇಗೌಡರನ್ನು ಅನಾಮತ್ತಾಗಿ ಎತ್ತೊಯ್ದು ಗವಿಮಠಕ್ಕಿಳಿಸಿದರು!
ಗವಿಸಿದ್ದೇಶ್ವರನ ಮಹಿಮೆ ಬಲ್ಲವರೇ ಬಲ್ಲರು!
ಕೊಪ್ಪಳ: ಉತ್ತರ ಕರ್ನಾಟಕದ ಪ್ರಸಿದ್ಧ ಮಠಗಳ ಪೈಕಿ ಒಂದಾದ ಕೊಪ್ಪಳದ ಗವಿಮಠಕ್ಕೆ ಇಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಭೇಟಿ ನೀಡಿದರು. ಗವಿ ಸಿದ್ದೇಶ್ವರ ಮಠದ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಬಳಿಕ ಗವಿಮಠದ ಗರ್ಭಗುಡಿಗೆ ತೆರಳಿ ಗವಿ ಸಿದ್ದೇಶ್ವರನ ದರ್ಶನ ಪಡೆಯುವ ಇಂಗಿತವನ್ನು ವ್ಯಕ್ತಪಡಿಸಿದರು.
ಅಂಗರಕ್ಷಕರು ಹಾಗೂ ಅರ್ಚಕರ ಸಹಾಯದೊಂದಿಗೆ ದೇವೇಗೌಡರು ಗವಿಯೊಳಗಿನ ಗರ್ಭಗುಡಿಗೆ ಇಳಿದರು. ಅಂಗರಕ್ಷಕರು ಅನಾಮತ್ತಾಗಿ ದೇವೇಗೌಡರನ್ನು ಎತ್ತಿಕೊಂಡು ಹೋಗಿ ಗವಿಮಠದ ಗರ್ಭಗುಡಿಯೊಳಕ್ಕೆ ಇಳಿಸಿದರು. ಕೆಲ ಹೊತ್ತು ಗರ್ಭಗುಡಿಯಲ್ಲಿದ್ದ ದೇವೇಗೌಡರು ಸಿದ್ದೇಶ್ವರನಿಗೆ ಭಕ್ತಿಯ ಪ್ರಾರ್ಥನೆ ಸಲ್ಲಿಸಿ ಮರಳಿದರು.
ಕಳೆದ ವರ್ಷ ಗವಿಸಿದ್ದೇಶ್ವರ ಜಾತ್ರೆ ವೇಳೆ ದೇವೇಗೌಡರು ಗವಿಮಠಕ್ಕೆ ಭೇಟಿ ನೀಡಿದ್ದರಾದರೂ ಗವಿಸಿದ್ದೇಶ್ವರನ ಗರ್ಭ ಗುಡಿಗಿಳಿದು ದರ್ಶನ ಪಡೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಇದು ಚುನಾವಣೆ ವರ್ಷವಾದ್ದರಿಂದ ದೈವಭಕ್ತರಾದ ದೇವೇಗೌಡರು ಈ ಇಳಿ ವಯಸ್ಸಿನಲ್ಲೂ ಹರಸಾಹಸಪಟ್ಟು
ಬೇಡಿದ ವರ ನೀಡುವ ಗವಿಸಿದ್ದೇಶ್ವರನ ದರ್ಶನ ಪಡೆದಿದ್ದಾರೆ ಎಂದು ಗವಿಸಿದ್ದೇಶ್ವರನ ಭಕ್ತರು ಮಾತನಾಡಿಕೊಳ್ಳುತ್ತಿದ್ದಾರೆ.