ಮಾಧ್ಯಮಗಳಿಂದ ನನ್ನ ಮೇಲೆ ವ್ಯವಸ್ಥಿತ ದಾಳಿ – ಮಾಜಿ ಸಿಎಂ ಕುಮಾರಸ್ವಾಮಿ ಕಿಡಿ
ದಕ್ಷಿಣ ಕನ್ನಡ : ಫೋನ್ ಕದ್ದಾಲಿಕೆ ಪ್ರಕರಣದ ಬಗ್ಗೆ ಸಿಬಿಐ ತನಿಖೆಯನ್ನಾದರೂ ಮಾಡಲಿ. ಅಮೇರಿಕ ಅದ್ಯಕ್ಷ ಟ್ರಂಪ್ ಗೆ ಮಾತಾಡಿ ಅಲ್ಲಿಂದ ಯಾರನ್ನಾದರೂ ಕರೆಸಿಕೊಂಡು ಅಂತರಾಷ್ಟ್ರೀಯ ಮಟ್ಟದ ತನಿಖೆ ಬೇಕಾದರೂ ನಡೆಸಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ನಾನು ಆ ಪ್ರಕರಣದಲ್ಲಿ ಭಾಗಿಯಾದರೆ ತಾನೇ ನಾನು ಆತಂಕಕ್ಕೆ ಒಳಗಾಗಿ ಹೆದರುವುದು. ನಾನು ಮುಕ್ತವಾಗಿದ್ದೇನೆ, ಆ ಪ್ರಕರಣದಲ್ಲಿ ನನ್ನ ಕಡೆ ಬೆಟ್ಟು ತೋರಿಸಲೂ ಸಾಧ್ಯವಿಲ್ಲ ಎಂದಿದ್ದಾರೆ.
ಕೆಲ ಎಲೆಕ್ಟ್ರಾನಿಕ್ ಮಾಧ್ಯಮದವರು ಮಾತ್ರ ಪೋನ್ ಕದ್ದಾಲಿಕೆ ಪ್ರಕರಣವನ್ನು ದೊಡ್ಡ ಸುದ್ದಿಯನ್ನಾಗಿ ಕೊಡುತ್ತಿದ್ದು ಈ ಕುಮರಸ್ವಾಮಿಯನ್ನು ಏನೂ ಮಾಡೋಕಾಗಲ್ಲ. ನನ್ನನ್ನು ರಾಜ್ಯ ರಾಜಕಾರಣದಲ್ಲಿ ಇನ್ನೂ ಎಷ್ಟರ ಮಟ್ಟಿಗೆ ಜನರಿಂದ ದೂರ ಇಡುವ ಷಡ್ಯಂತ್ರ ನಡೆಯುತ್ತಿದೆ. ಪಾಪ, ಮಾಧ್ಯಮದವರು ಸ್ಟೋರಿ ಬಿಲ್ಡಪ್ ಮಾಡಿಕೊಂಡು ಹೊರಟಿದ್ದಾರೆ ಅದರಲ್ಲಿ ಯಶಸ್ಸು ಸಿಗುವುದಿಲ್ಲ. ನನ್ನ ಮೇಲೆ ಜನರಲ್ಲಿರುವ ನಂಬಿಕೆಗೆ ಪೆಟ್ಟು ಕೊಡಲು ವ್ಯವಸ್ಥಿತವಾಗಿ ಹೊರಟಿದ್ದಾರೆ. ನನ್ನ ಮೇಲಿನ ಮಾಧ್ಯಮಗಳ ದಾಳಿ ಮುಂದುವರೆಯಲಿ ಎಂದು ಮಾಜಿ ಸಿಎಂ ಹೆಚ್.ಡಿ.ಕೆ ಮಾಧ್ಯಮಗಳ ವಿರುದ್ಧ ಕಿಡಿಕಾರಿದರು.