ಮಾಜಿ ಸಿಎಂ H.D ಕುಮಾರಸ್ವಾಮಿ ಉತ್ತರ ಕರ್ನಾಟಕ ಜನರ ಕ್ಷಮೆ ಕೇಳಿದ್ದೇಕೆ?
ಅಪೋಲೋ ಆಸ್ಪತ್ರೆಯಲ್ಲಿ HDK ಸುದ್ದಿಗೋಷ್ಠಿ
ಬೆಂಗಳೂರು: ಹೃದಯ ಶಸ್ತ್ರಚಿಕಿತ್ಸೆ ಬಳಿಕ ಸಿಎಂ ಸಿದ್ಧರಾಮಯ್ಯ ಆಸ್ಪತ್ರೆಗೆ ಬಂದು ಶೀಘ್ರ ಚೇತರಿಕೆ ಆಗಲಿ ಎಂದು ಹಾರೈಸಿದ್ದರು. ಅದಕ್ಕೆ ನಾನು ಅವರಿಗೆ ಕೃತಗ್ನತೆ ಸಲ್ಲಿಸುತ್ತೇನೆ. ಆದರೆ, ನನ್ನ ಬಳಿಗೆ ಬರುವ ಬದಲು ಜನರ ಬಳಿಗೆ ತೆರಳಿ ಕಷ್ಟ ಕೇಳಿದ್ದರೆ ನನಗೆ ಇನ್ನೂ ಖುಷಿ ಆಗುತ್ತಿತ್ತು. ಬೆಂಗಳೂರಿನಲ್ಲಿ ಮಳೆಯಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮತ್ತೊಂದು ಕಡೆ ರಾಜ್ಯದ ರೈತರು ಬರದಿಂದ ಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ, ಜನರ ಬಳಿಗೆ ತೆರಳಿ ಕಷ್ಟ ಆಲಿಸಬೇಕಿತ್ತು ಅಂತ ಮಾಜಿ ಸಿಎಂ, ಜೆಡಿಎಸ್ ರಾಜ್ಯದ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ನಾನು ಆಸ್ಪತ್ರೆಯಲ್ಲಿದ್ದೇನೆ ಎದ್ದು ಬರಲು ಆಗುತ್ತೋ ಇಲ್ಲವೋ. ದೇವೇಗೌಡರಿಗೆ 84ವರ್ಷ ವಯಸ್ಸಾಗಿದೆ ಅವರಿನ್ನೇನು ಹೋರಾಟ ಮಾಡುತ್ತಾರೆ. ಜೆಡಿಎಸ್ ಒಂದು ಸಣ್ಣ ಪಕ್ಷವಾಗಿದೆ. ಹೀಗಾಗಿ, ಜೆಡಿಎಸ್ ಪಕ್ಷ ಮುಗಿಸಿದರಾಯ್ತು, ಬಿಜೆಪಿಯನ್ನು ಸೋಲಿಸಿ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಹಣ ಹಂಚಿ ರಾಜ್ಯದ ಅಧಿಕಾರ ಹಿಡಿಯಬಹುದೆಂದು ಸಿಎಂ ಸಿದ್ಧರಾಮಯ್ಯ ಅವರು ಭಾವಿಸಿದಂತಿದೆ. ಆದರೆ, ಸಿಎಂ ಕನಸು ಈಡೇರದು. ನಾನು ಆಸ್ಪತ್ರೆಯಲ್ಲಿ ಇದ್ದರೂ ಸಹ ಮಾಧ್ಯಮದ ಮೂಲಕ ರಾಜ್ಯದ ಎಲ್ಲಾ ವಿಚಾರಗಳನ್ನೂ ತಿಳಿದುಕೊಂಡಿದ್ದೇನೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಅಂತೆಯೇ ನಾನು ಉತ್ತರ ಕರ್ನಾಟಕದಲ್ಲಿ ಇರುವುದಾಗಿ ಹೇಳಿ ಮನೆ ಮಾಡಿದ್ದೆ. ಆದರೆ, ಮನೆ ಮಾಡಿ ತಿಂಗಳಲ್ಲಿ ಆರೋಗ್ಯದಲ್ಲಿ ಏರುಪೇರಾಯಿತು. ಪರಿಣಾಮ ಆಸ್ಪತ್ರೆ ಸೇರುವಂತಾಗಿದ್ದು ಉತ್ತರ ಕರ್ನಾಟಕದತ್ತ ಬರಲು ಆಗಿಲ್ಲ. ಈ ಬಗ್ಗೆ ಕ್ಷಮೆ ಇರಲಿ ಎಂದು ಮಾಧ್ಯಮಗಳ ಮೂಲಕ ಉತ್ತರ ಕರ್ನಾಟಕದ ಜನರ ಕ್ಷಮೆ ಕೇಳುತ್ತೆನೆಂದು ತಿಳಿಸಿದರು.
ಹೃದಯ ಶಸ್ತ್ರಚಿಕಿತ್ಸೆ ಬಳಿಕ ಇದೇ ಮೊದಲ ಬಾರಿಗೆ ಆಸ್ಪತ್ರೆಯಲ್ಲೇ ಹೆಚ್.ಡಿ.ಕುಮಾರಸ್ವಾಮಿ ಪತ್ರಿಕಾಗೋಷ್ಠಿ ನಡೆಸಿದರು. ಇದೇ ವೇಳೆ ಹೆಚ್.ಡಿ.ಕುಮಾರಸ್ವಾಮಿ ಅವರು ಶೇಕಡಾ 90ರಷ್ಟು ಗುಣಮುಖರಾಗಿದ್ದಾರೆ. ಅವರು ಬಯಸಿದಾಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುತ್ತೇವೆಂದು ಅಪೋಲೋ ಆಸ್ಪತ್ರೆಯ ವೈದ್ಯರಾದ ಡಾ.ಸತ್ಯಕಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.