ಮೋದಿ ಬಜೆಟ್ ಮಾಧ್ಯಮಗಳಿಗೆ ತೃಪ್ತಿ ತಂದಿದೆಯೇ? ; ಹೆಚ್.ಡಿ.ಕೆ ಕಿಡಿಕಿಡಿ
ವಿಜಯಪುರ: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಭಾರೀ ಉಡುಗೊರೆ ಕಾದಿದೆ ಎಂದು ಮಾಧ್ಯಮಗಳು ಹೇಳಿದ್ದವು. ದಿನಗಟ್ಟಲೆ ಮಾಧ್ಯಮಗಳು ಮೋದಿ ಬಜೆಟ್ ಬಗ್ಗೆ ಹೊಗಳಿ ಅಟ್ಟಕ್ಕೇರಿಸಿದ್ದವು. ಆದರೆ, ಇಂದಿನ ಬಜೆಟ್ ನಲ್ಲಿ ಪ್ರಧಾನಿ ಮೋದಿ ಕರ್ನಾಟಕಕ್ಕೆ ಸೊನ್ನೆ ನೀಡಿದ್ದಾರೆ. ಹೀಗಾಗಿ, ಮೋದಿ ಬಜೆಟ್ ಮಾಧ್ಯಮಗಳಿಗೆ ತೃಪ್ತಿ ತಂದಿದೆಯೇ ಎಂದು ಪ್ರಶ್ನಿಸಿರುವ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯದ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಈ ಬಗ್ಗೆ ಮಾಧ್ಯಮಗಳು ಸತ್ಯವನ್ನು ಹೇಳಲಿ ಎಂದಿದ್ದಾರೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಪ್ರತಿಕ್ರಿಯಿಸಿರುವ ಹೆಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಮಾಧ್ಯಮಗಳ ವಿರುದ್ಧ ಕಿಡಿ ಕಾರಿದ್ದಾರೆ. ಇಂದು ವಿತ್ತ ಸಚಿವ ಅರುಣ್ ಜೇಟ್ ಮಂಡಿಸಿದ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಸೊನ್ನೆ ನೀಡಿರುವುದು ಸ್ಪಷ್ಟವಾಗಿದೆ. ಆದರೆ, ನಮ್ಮ ಜನ ಸೊನ್ನೆಗೆ ಮರಳಾಗುತ್ತಾರೆ. ಸತ್ಯಾಂಶವನ್ನು ತಿಳಿದುಕೊಂಡು ಬಣ್ಣದ ಮಾತಿಗೆ ಮಾರು ಹೋಗುವುದನ್ನು ಬಿಡಬೇಕು ಎಂದಿದ್ದಾರೆ.