ಯುವಕರ ಅಕಾಲಿಕ ಮರಣ : ಸಾವು, ನೋವು ಮತ್ತು ಆತಂಕ!
-ಮಲ್ಲಿಕಾರ್ಜುನ ಮುದನೂರ್
ಇತ್ತೀಚೆಗೆ ನನಗೆ ಹಲ್ಲು ಬೇನೆಯಾಗಿತ್ತು. ಸುಮಾರು ದಿನಗಳಿಂದ ನೋವನ್ನು ನಿರ್ಲಕ್ಷಿಸುತ್ತ ಬಂದಿದ್ದೆ. ಮೊನ್ನೆ ಶನಿವಾರ ಯಾದಗಿರಿಯಿಂದ ಡ್ಯೂಟಿ ಮುಗಿಸಿಕೊಂಡು ಬಂದ ಗೆಳೆಯ ಡಾ.ಆನಂದ ಇದ್ದಕ್ಕಿದ್ದಂತೆ ಹಲ್ಲು ನೋವು ಹೇಗಿದೆ ಅಂತ ಕೇಳಿದ. ಕಡಿಮೆ ಆಗುತ್ತೆ ಬಿಡು ಅನ್ನುವಷ್ಟರಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲೆಂದೇ ಬಂದವನಂತೆ ಹತ್ತು ಕಾರು ಎಂದು ತಗ್ನ ವೈದ್ಯರ ಬಳಿಗೆ ಕರೆದುಕೊಂಡು ಹೋದ. ಪರೀಕ್ಷಿಸಿದ ವೈದ್ಯರು ಒಂದುಸಲ ಕಲಬುರಗಿಗೆ ಹೋಗಿ ತಪಾಸಣೆ ಮಾಡಿಸಿ ಎಂದು ಸೂಚಿಸಿದರು.
ಮನೆಗೆ ಬಂದು ಸೋಮವಾರ ಕಲಬುರಗಿಗೆ ಹೋಗಿ ಬರುತ್ತೇನೆ ಅಂತ ಹೇಳಿದೆ ಅಷ್ಟೇ. ಅಪ್ಪ ಒಮ್ಮೆಲೆ ಧೋತ್ರ ತೊಟ್ಟುಕೊಂಡು ‘ಈಗಲೇ ಹೋಗಿ ಬರೋಣ ನಡಿಯಪ್ಪ ಸುಮ್ಮನೆ ಆನಂದಗೆ ಫೋನ್ ಮಾಡು. ಮತ್ಯಾಕೆ ಎರಡು ದಿನ ಕಾಯೋದು’ ಅಂತ ಆತಂಕಕ್ಕೆ ಒಳಗಾದವರಂತೆ ವರ್ತಿಸಿದರು. ಅದೆಂಥ ಸಮಸ್ಯೆ ಎದುರಾದರೂ ಕಲ್ಲಿನಂತೆ ಗಟ್ಟಿಯಾಗಿರುತ್ತಿದ್ದ ಅಪ್ಪ ಈವತ್ತು ಯಾಕೆ ಅಧೀರರಾದರು. ಅಂಥದ್ದೇನಾಯಿತು ಅಂತ ಯೋಚಿಸುತ್ತ ಸೋಮವಾರ ಹೋಗ್ತೀನಿ ಬಿಡಪ್ಪ ಆನಂದನೂ ಜೊತೆಗೆ ಬರುತ್ತಾನೆ ಅಂತ ಹೇಳಿದೆ. ಅಪ್ಪ ಸಮಾಧಾನ ಆಗಲೇ ಇಲ್ಲ.
‘ಕಾಲಮಾನ ಭಾಳ ನಾಜೂಕೈತೋ ಮಲ್ಲು, ನಿನಗೆ ಗೊತ್ತಾಗೋದಿಲ್ಲ. ಹುಂಬತನ ಮಾಡಬೇಡ. ನೋಡು ಮೊನ್ನೆ ಬಸ್ಸುನ ದೋಸ್ತ್ ಕಿರಣಗೆ ಹೃದಯಾಘಾತ, ನಿನ್ನೆ ಆ ಹುಡುಗ ರಮೇಶ… ಅವರೆಲ್ಲಾ ಹೋಗೋ ವಯಸ್ಸೇನಪಾ?. ಯಾವ ಕ್ಷಣದಾಗ ಯಾರಿಗೆ ಏನಾಗತೈತಿ ಅನ್ನೋದೆ ತಿಳ್ಯವಲ್ದು. ಮೊನ್ನೆ ನೋಡು ಜಾಕಾ ಗಿರಿ ಮತ್ತು ಅವನ ದೋಸ್ತ್ ಅವರಷ್ಟಕ್ಕ ಅವರು ಬೈಕಿನ್ಯಾಗ ಹೊರಟಿದ್ರೂ ಲಾರಿಯಂವ ಬಂದು ಪಾಪ ಅವರನ್ನು…’ ಅಂತ ಹೇಳುತ್ತಲೇ ಒಂದು ಕ್ಷಣ ಗದ್ಗದಿತರಾದರು. ಅಕ್ಷರಶ ಅಮ್ಮನಂತಾದರು ಅಪ್ಪ!
ಆ ಕ್ಷಣಕ್ಕೆ ಅಪ್ಪನನ್ನು ಹೇಗೋ ಸಮಾಧಾನ ಪಡಿಸಿದೆ. ಆದರೆ, ಸೋಮವಾರ ಕಲಬುರಗಿಗೆ ಹೋಗಿ ತಪಾಸಣೆ ಮಾಡಿಸಿದ ಬಳಿಕವಷ್ಟೇ ಅಪ್ಪನ ಆತಂಕ ನಿವಾರಣೆ ಆಯಿತು. ಇದು ನಮ್ಮ ಮನೆಯ ಕಥೆ ಮಾತ್ರ ಅಲ್ಲ. ಶಹಾಪರದಲ್ಲಿ ಇತ್ತೀಚೆಗೆ ಸಂಭವಿಸಿರುವ ಯುವಕರ ಸರಣಿ ಸಾವು ಪ್ರತಿ ಮನೆಗಳಲ್ಲೂ ನೋವು ಮತ್ತು ಆತಂಕ ಮೂಡಿಸಿದೆ. ಹೀಗಾಗಿ, ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಿರಬೇಕಿದೆ. ಗೆಳೆಯರು, ಸಂಬಂಧಿಕರು ಒಬ್ಬರಿಗೊಬ್ಬರು ಆರೋಗ್ಯ ಮತ್ತು ಕಷ್ಟ-ಸುಖದ ಬಗ್ಗೆ ಮಾತನಾಡಿಕೊಳ್ಳಬೇಕಿದೆ.
ನಮ್ಮೂರಿನ ಅನೇಕ ಯುವ ವೈದ್ಯರು ಸ್ನೇಹಜೀವಿಗಳಾಗಿದ್ದಾರೆ, ಜೀವಪರ ಕಾಳಜಿ ಹೊಂದಿದ್ದಾರೆ. ಡಾ.ಆನಂದಕುಮಾರ್ ಕರಕಳ್ಳಿ, ಡಾ. ಗಂಗಾಧರ ಚಟ್ರಕಿ, ಡಾ.ವೆಂಕಟೇಶ ಟೊಣಪೆ, ಡಾ.ರಾಜೇಂದ್ರ ತಡಿಬಿಡಿ, ಡಾ. ಜಗದೀಶ ಉಪ್ಪಿನ್, ಡಾ.ಭೀಮರಡ್ಡಿ, .ಜ್ಯೋತಿ ಕಟ್ಟಿಮನಿ, ಡಾ.ಬಸವರಾಜ ಇಜೇರಿ, ಡಾ.ಚಂದ್ರಶೇಖರ ಬಿ.ದರ್ಶನಾಪುರ, ಡಾ.ಚಂದ್ರಶೇಖರ ಚವ್ಹಾಣ್, ಡಾ.ವಿಶಾಲ್ ಜೈನ್, ಡಾ.ವಿಶ್ವನಾಥ್ ಬಂಗಾರೆ ಸೇರಿದಂತೆ ಹಲವರು ಉತ್ತಮ ವೈದ್ಯರಿದ್ದಾರೆ. ಅಲ್ಲದೆ ರಾಷ್ಟ್ರಮಟ್ಟದಲ್ಲಿ ಕೀರ್ತಿಗಳಿಸಿದ ನಮ್ಮೂರಿನವರೇ ಆದ ಕ್ಯಾನ್ಸರ್ ತಜ್ಞರಾದ ಡಾ.ಶೇಖರ್ ಪಾಟೀಲ್ ಉಕ್ಕಿನಾಳ್ ಹಾಗೂ ಅನಾರೋಗ್ಯ ಅಂತ ಬಂದವರಿಗೆ ಸೂಕ್ತ ಸಲಹೆ ನೀಡಿ ಮಾರ್ಗದರ್ಶನ ನೀಡುವ ಡಾ.ಮಲ್ಲನಗೌಡ ಉಕ್ಕಿನಾಳ್ ಅಂತವರ ಸಹಾಯ ಪಡೆಯಬಹುದಾಗಿದೆ.
ಹೀಗೆ ಅನೇಕ ಜನಪರ ವೈದ್ಯರು ನಮ್ಮ ನಡುವೆ ಇದ್ದಾರೆ. ಅವರ ಬಳಿ ನಮ್ಮ ಆರೋಗ್ಯ ಸಮಸ್ಯೆಗಳನ್ನು ಹೇಳಿಕೊಂಡು ಸೂಕ್ತ ಸಲಹೆ, ಚಿಕಿತ್ಸೆ ಪಡೆಯುವುದು. ಮಡದಿ, ಮಕ್ಕಳು, ಸಂಬಂಧಿಕರು, ಸ್ನೇಹಿತರಿಗೆ ಆರೋಗ್ಯ ಸಮಸ್ಯೆ ಎದುರಾದಾಗ ನೂರು ಕೆಲಸಗಳಿದ್ದರೂ ಬಿಟ್ಟು ವೈದ್ಯರ ಬಳಿ ಕರೆದೊಯ್ದು ತಪಾಸಣೆ ಮಾಡಿಸುವ ಕೆಲಸ ಮೊದಲು ಆಗಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ರೋಗಗಳು ಬರುವುದಕ್ಕಿಂತ ಮುನ್ನವೇ ರೋಗ ಬಾರದಂತೆ ತಡೆಗಟ್ಟುವುದು ಹೇಗೆ ಎಂಬುದರ ಬಗ್ಗೆ ಚರ್ಚೆಗಳು ನಡೆಯಬೇಕಿದೆ.
ಆರೋಗ್ಯ ಇಲಾಖೆ, ನಗರಸಭೆ, ತಾಲ್ಲೂಕು ಆಡಳಿತ ಹಾಗೂ ಜನಪರ ಸಂಘ ಸಂಸ್ಥೆಗಳು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಆರೋಗ್ಯದ ಜೊತೆಗೆ ಮಾನವೀಯ ಸಂಬಂಧಗಳನ್ನು ಜೀವಂತವಾಗಿರಿಸುವುದು. ಆ ಮೂಲಕ ಪರಸ್ಪರ ನೋವು-ನಲಿವುಗಳನ್ನು ಹಂಚಿಕೊಳ್ಳುವುದು. ಖುಷಿಗಿಂತ ಹೆಚ್ಚು ಕಷ್ಟಕ್ಕೆ ಜೊತೆಯಾಗುವ ಸಂಖ್ಯೆ ಹೆಚ್ಚಾಗಬೇಕಿದೆ. ಸಾವಿನ ಘಂಟೆ ಬಾರಿಸಿದಾಗ ಯಾರಾದರೂ ಎದ್ದು ಹೋಗಲೇ ಬೇಕು ಎಂಬ ಪರಮ ಸತ್ಯ ಎಲ್ಲರಿಗೂ ಗೊತ್ತು.
ಆದರೆ ಅಕಾಲಿಕ ಮೃತ್ಯು ಸಂಭವಿಸದಿರಲಿ. ನಮ್ಮ ಆರೋಗ್ಯವೇ ನಮ್ಮ ನಿಜವಾದ ಸಂಪತ್ತು ಎಂಬ ಮಹಾತ್ಮ ಗಾಂಧೀಜಿ ಅವರ ನುಡಿಯನ್ನು ಅರಿತು ಬದುಕೋಣ.
Very relevant sir,
to the subject and excellent narration of real life incidents
Thank u sir
thank u sir