ಈ ವಾರದ ಅಚ್ಚರಿ! ಹಾಯ್ ಬೆಂಗಳೂರ್ ಪತ್ರಿಕೆ ಪ್ರಸಾರ ಸಂಖ್ಯೆ ಹೆಚ್ಚಳವಾಗಿದೆಯಂತೆ ಕಣ್ರೀ!
-ಮಲ್ಲಿಕಾರ್ಜುನ್ ಮುದನೂರ್
ರವಿ ಬೆಳಗೆರೆ ಸಾರಥ್ಯದ ಹಾಯ್ ಬೆಂಗಳೂರ್ ಪತ್ರಿಕೆಯನ್ನು ಒಂದು ಕಾಲದಲ್ಲಿ ಜನ ಕಾದು ಕುಳಿತು ಪತ್ರಿಕೆ ಪಡೆಯುವ ಸ್ಥಿತಿ ಇತ್ತು. ರಾಜ್ಯದೆಲ್ಲೆಡೆ ಪ್ರತಿ ತಾಲೂಕು ಮಟ್ಟದಲ್ಲೂ ಸಹ ಒಂದೊಂದು ಬುಕ್ ಸ್ಟಾಲ್ ಗಳಲ್ಲಿ ನೂರಾರು ಪತ್ರಿಕೆಗಳು ಸೇಲ್ ಆಗುತ್ತಿದ್ದವು. ಆದರೆ, ಇತ್ತೀಚೆಗೆ ಅದೂ ಸಹ ಬೆರಳೆಣಿಕೆಗೆ ಇಳಿದಿದೆ. ಪರಿಣಾಮ ಕಳೆದ ವಾರವಷ್ಟೇ ಹಾಯ್ ಬೆಂಗಳೂರ್ ಪತ್ರಿಕೆ ನಿಲ್ಲಿಸುವ ಬಗ್ಗೆ ರವಿ ಬೆಳಗೆರೆ ಚಿಂತನೆ ನಡೆಸಿದ್ದಾರೆಂಬ ಸುದ್ದಿ ಇತ್ತು.
ಹಾಯ್ ಬೆಂಗಳೂರ್ ಪತ್ರಿಕೆ ಬಂದಾಗುತ್ತೆ ಎಂಬ ಸುದ್ದಿಯ ಬೆನ್ನಲ್ಲೇ ಸಹೋದ್ಯೋಗಿ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಕೇಸಿನಲ್ಲಿ ರವಿ ಬೆಳಗೆರೆ ಬಂಧನಕ್ಕೊಳಗಾಗಿದ್ದರು. ಆದರೆ, ರವಿ ಬೆಳಗೆರೆ ಜೈಲಿಗೆ ಹೋಗಿದ್ದಕ್ಕೆ ಅವರ ಪತ್ರಿಕೆಗೆ ಡಿಮ್ಯಾಂಡ್ ಬಂತೋ ಏನೋ ಗೊತ್ತಿಲ್ಲ. ಈ ವಾರ ಹಾಯ್ ಬೆಂಗಳೂರ್ ಪತ್ರಿಕೆಯ ಪ್ರಸಾರ ಸಂಖ್ಯೆ ಹೆಚ್ಚಿದೆ. ಈ ಮೊದಲು 50 ಪತ್ರಿಕೆ ಸೇಲ್ ಆಗುತ್ತಿದ್ದ ಸ್ಟಾಲ್ ಗಳಲ್ಲಿ ಈ ವಾರ ನೂರು ಪತ್ರಿಕೆಗಳು ಸೇಲಾಗಿವೆ ಎಂದು ತಿಳಿದು ಬಂದಿದೆ.
‘ಶನಿಮುಖಿ ಕೊಲೆಗೆ ಸುಪಾರಿ ಬೇರೆ ಕೇಡು’, ‘ನೋಟ್ಸ್ ಫ್ರಮ್ ಸೆಂಟ್ರಲ್ ಜೈಲ್’ ಎಂಬ ಈ ವಾರದ ಕ್ಯಾಚಿ ಹೆಡ್ಡಿಂಗು ಹಾಯ್ ಬೆಂಗಳೂರ್ ಓದುಗರನ್ನು ಸೆಳೆಯುತ್ತಿದೆ. ಅಲ್ಲದೆ ‘ಹಾಯ್ ಎಂಬ ಕಪ್ಪು ಸುಂದರಿ ರವಿ ಬೆಳಗೆರೆ ಅವರ ಕನಸಿನ ಕೂಸು. ಹೊಸ ಹುರುಪಿನೊಂದಿಗೆ ಮೈ ಕೊಡವಿ ಎದ್ದೇಳಲಿದೆ’ ಎಂಬ ಲೈನ್ಸ್ ಹಾಯ್ ಬೆಂಗಳೂರು ಪತ್ರಿಕೆ ಓದುಗರಲ್ಲಿ ಹೊಸ ಆಸೆ ಚಿಗುರಿಸಿದೆ. ಜುಯೇಡಾ ಕಾಡು ಸೇರಿಕೊಂಡು ಪತ್ರಿಕೆ ಆಸೆ ಬಿಟ್ಟಂತಿದ್ದ ರವಿ ಬೆಳಗೆರೆ ಈಗ ಜಿದ್ದಿಗೆ ಬೀಳುತ್ತಾರೆ. ಪತ್ರಿಕೆ ನಿಲ್ಲಿಸೋಲ್ಲ, ಬದಲಾಗಿ ಈ ಮೊದಲಿನಂತೆ ಯಂಗ್ ಅಂಡ್ ಎನರ್ಜಟಿಕ್ ಆಗಿ ಅಚ್ಚರಿಯ ಸುದ್ದಿ ಹೊತ್ತು ತರುತ್ತಾರೆ ನೋಡ್ತಾ ಇರಿ ಎಂದು ರವಿ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿರುವುದು ದಿಟ.