ಪ್ರಧಾನಿಯ ಪದವಿ ಪರಮಾತ್ಮನೇ ಕೊಟ್ಟದ್ದು!
ಹೀಗು ಉಂಟೆ..? ಕಥೆ ಓದಿ ತಿಳಿ
ಪ್ರಧಾನಿಯ ಪದವಿ ಪರಮಾತ್ಮನೇ ಕೊಟ್ಟದ್ದು!
ಮೇಲಿನ ಮಾತುಗಳು ಆಶ್ಚರ್ಯ ಹುಟ್ಟಿಸುತ್ತವಲ್ಲವೇ.? ಹೌದು, ಈ ಮಾತುಗಳನ್ನು ಹೇಳಿದವರು ಪುರಾತನ ಜರ್ಮನಿ ದೇಶದಲ್ಲಿನ ಪ್ರಷ್ಯಾ ರಾಜ್ಯದ ಪ್ರಧಾನಿ.
ಬಹಳ ಹಿಂದೆ ಪ್ರಷ್ಯಾದ ರಾಜಧಾನಿಯಲ್ಲಿ ಬಹುತೇಕ ಬಡವರ ಮಕ್ಕಳೇ ಮಾಡುತ್ತಿದ್ದ ಶಾಲೆಯೊಂದಿತ್ತು. ಒಮ್ಮೆ ಮಹಾರಾಜರು ನಗರ ಸಂಚಾರ ಶಾಲೆಯೊಳಕ್ಕೆ ಬಂದರಂತೆ. ಮಹಾರಾಜರನ್ನು ನೋಡಿ ಉಪಾಧ್ಯಾಯರು, ಮಕ್ಕಳು ಎದ್ದು ನಿಂತು ಗೌರವ ಸಲ್ಲಿಸಿದರು. ಕುಶಲೋಪರಿಯ ಮಾತನ್ನಾಡುತ್ತಾ ಮಹಾರಾಜರು ಉಪಾಧ್ಯಾಯರನ್ನು ಇಂದು ಯಾವ ಪಾಠ ಮಾಡುತ್ತಿದ್ದೀರಿ.? ಎಂದು ಕೇಳಿದರಂತೆ.
ಉಪಾಧ್ಯಾಯರು ವಿನಯಪೂರ್ವಕವಾಗಿ ಮಹಾಸ್ವಾಮಿ! ಭೂಗೋಳದ ಪಾಠ ಮಾಡುತ್ತಿದ್ದೇನೆ. ಎನ್ನುತ್ತಾ ಮೇಜಿನ ಮೇಲಿದ್ದ ಭೂಗೋಳವನ್ನು ತೋರಿಸಿದರು.
ಮಹಾರಾಜರು ಭೂಗೋಳದ ಬಗ್ಗೆ ಮಕ್ಕಳಿಗೆ ನಾನೇನಾದರೂ ಪ್ರಶ್ನೆ ಕೇಳಲೇ? ಎಂದರು. ಉಪಾಧ್ಯಾಯರಿಗೆ ಒಳಗೊಳಗೇ ಹೆದರಿಕೆಯಿದ್ದರೂ, ಆಗಬಹುದೆಂದರು.
ಮಹಾರಾಜರು ಬಾಲಕನೊಬ್ಬನನ್ನು ಮುಂದಕ್ಕೆ ಕರೆದರು. ಅಷ್ಟೇನೂ ಒಳ್ಳೆಯ ಬಟ್ಟೆ ಧರಿಸಿರದ ಆ ಬಾಲಕ ಧೈರ್ಯವಾಗಿ ಮುಂದೆ ಬಂದ. ಮುಗುಳ್ನಗುತ್ತಾ ಮಹಾರಾಜರನ್ನು ದಿಟ್ಟಿಸಿ ನೋಡಿದ.
ಮಹಾರಾಜರು : ನಾನು ಯಾರು ಗೊತ್ತೇನು.?
ಬಾಲಕ : ತಾವು ಪ್ರಷ್ಯಾ ರಾಜ್ಯದ ಮಹಾರಾಜರು.
ಮ : ಪ್ರಷ್ಯಾ ರಾಜ್ಯವೆಲ್ಲಿದೆ?
ಬಾ: ಪ್ರಷ್ಯಾ ರಾಜ್ಯ ಜರ್ಮನಿ ದೇಶದಲ್ಲಿದೆ.!
ಮ : ಜರ್ಮನಿ ದೇಶವೆಲ್ಲಿದೆ.?
ಬಾ: ಜರ್ಮನಿ ದೇಶ ಯೂರೋಪ್ ಖಂಡದಲ್ಲಿದೆ.!
ಮ: ಯೂರೋಪ್ ಎಲ್ಲಿದೆ.?
ಬಾ: ಯೂರೋಪ್ ಖಂಡ ಪ್ರಪಂಚದಲ್ಲಿದೆ.
ಅವನು ಉತ್ತರಿಸುತ್ತ ಹೋಗುವ ಶೈಲಿ ಮಹಾರಾಜರಿಗೆ ಹಿಡಿಸಿತು. ಅವರು ವಾರೆವ್ಹಾ! ಇದು ನನ್ನ ಕೊನೆಯ ಪ್ರಶ್ನೆ? ಪ್ರಪಂಚ ಎಲ್ಲಿದೆ? ಎಂದರು.
ಬಾಲಕ ತಕ್ಷಣ ಹಿಂದೆ ಮುಂದೆ ನೋಡದೆ ಪ್ರಪಂಚ ಪರಮಾತ್ಮನ ಕೈಯಲ್ಲಿದೆ ಎಂದು ಹೇಳಿದ.
ಬಾಲಕನಿಂದ ಅಂತಹ ಉತ್ತರವನ್ನು ನಿರೀಕ್ಷಿಸದಿದ್ದ ಮಹಾರಾಜರಿಗೆ ಪರಮಾಶ್ಚರ್ಯವಾಯಿತು. ಉಪಾಧ್ಯಾಯರೂ ಅಚ್ಚರಿಯಿಂದ ನೋಡುತ್ತ ನಿಂತರು. ಮಹಾರಾಜರು ನಿಧಾನವಾಗಿ ಬಾಲಕನ ಬಳಿ ಹೋಗಿ ಅವನನ್ನು ಬಾಚಿ ತಬ್ಬಿಕೊಂಡರು.
ಆನಂತರ ಶಾಲೆಯ ಮುಖ್ಯಸ್ಥರನ್ನು ಕರೆದು ಈ ಬಾಲಕ ಸಾಮಾನ್ಯನಲ್ಲ. ಮುಂದೆ ಎಷ್ಟು ಬೇಕಾದರೂ ಓದಲಿ! ಓದಿನ ಖರ್ಚನ್ನು ರಾಜ್ಯವೇ ಭರಿಸುತ್ತದೆ. ಅವನ ತಾಯಿ–ತಂದೆಯವರಿಗೂ ಈ ಮಾತನ್ನು ತಿಳಿಸಿ ಎಂದು ಹೇಳಿ ಹೋದರಂತೆ. ಅಲ್ಲಿದ್ದ ವಿದ್ಯಾರ್ಥಿಗಳೆಲ್ಲ ಜೋರಾಗಿ ಚಪ್ಪಾಳೆ ತಟ್ಟಿ ಸಂತೋಷಪಟ್ಟರಂತೆ.
ಮಹಾರಾಜರು ಹಳೆಯ ಕಾಲದವರು. ಚಪ್ಪಾಳೆ ಗಿಟ್ಟಿಸುವುದಕ್ಕಾಗಿ ಒಳ್ಳೆಯ ಮಾತನ್ನಾಡಿ, ನಂತರ ಮರೆಯುವವರಲ್ಲ. ಅವರು ಕೊಟ್ಟ ಮಾತನ್ನುಳಿಸಿಕೊಂಡರು. ಮುಂದೆ ಆತನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದರು.
ಆತ ಚೆನ್ನಾಗಿ ಓದಿ ವಿದ್ಯಾವಂತನಾದ ಮೇಲೆ, ತಮ್ಮ ಸರಕಾರದಲ್ಲಿ ಉದ್ಯೋಗವನ್ನೂ ಕೊಟ್ಟರು.
ಎಲ್ಲೋ ತಮ್ಮ ಪಾಡಿಗೆ ತಾವು ಹೋಗುತ್ತಿದ್ದ ಮಹಾರಾಜರು ಶಾಲೆಯೊಳಕ್ಕೆ ಬಂದದ್ದು, ಆ ಬಾಲಕನನ್ನೇ ಆಯ್ಕೆ ಮಾಡಿ ಪ್ರಶ್ನೆಗಳನ್ನು ಕೇಳಿದ್ದು, ತನಗೆ ಗೊತ್ತಿರುವ ಉತ್ತರಗಳನ್ನು ಧೈರ್ಯವಾಗಿ ಆತ ಹೇಳಿದ್ದು, ಅದರಲ್ಲೂ ’ಪ್ರಪಂಚ ಪರಮಾತ್ಮನ ಕೈಯಲ್ಲಿದೆ’ ಎನ್ನುವ ಮಾತು ಮಹಾರಾಜರ ಮನ ಸೆಳೆದದ್ದು, ಮುಂದೆ ಆತ ಪ್ರಧಾನಿಯಾಗಿದ್ದೂ, ಇವೆಲ್ಲ ನೋಡಿದರೆ ಪರಮಾತ್ಮನೇ ಪ್ರಧಾನಿ ಪದವಿಯನ್ನು ಕರುಣಿಸಿದ ಎನ್ನುವ ಮಾತು ನಿಜವೆನಿಸುವುದಿಲ್ಲವೇ?
ಸಣ್ಣ ವಯಸ್ಸಿನಿಂದಲೇ ಮಕ್ಕಳಿಗೆ ದೇವರಲ್ಲಿ ನಂಬಿಕೆ, ಬುದ್ಧಿವಂತಿಕೆ, ಧೈರ್ಯ ಕಲಿಸಿದರೆ ಇಂತಹ ಪ್ರಸಂಗಗಳು ನಡೆಯುವುದರಲ್ಲಿ ಆಶ್ಚರ್ಯವೇನಿಲ್ಲ ಅಲ್ಲವೇ?
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882