ಕಾವ್ಯ ಖುಷಿಯಿಂದ ಓಡಿ ಬಂದ್ದದ್ಯಾಕೆ..? “ಹಿಂದಿರುಗಿದಾಗ” ಪಾಟೀಲರ ಕಾದಂಬರಿ ಭಾಗ-9
ಕಾವ್ಯ ಖುಷಿಯಿಂದ ಓಡಿ ಬಂದ್ದದ್ಯಾಕೆ..?
“ಹಿಂದಿರುಗಿದಾಗ” ಪಾಟೀಲರ ಕಾದಂಬರಿ ಭಾಗ-9
ಗಂಡಿನ ಕಡೆಯವರು ಊರಿಗೆ ಹೋಗಿ ಏನು ಎಂಬ ವಿಷಯ ತಿಳಿಸುತ್ತೇವೆಯಂದು ಹೊರಟರು. ಹೆಣ್ಣಿನವರಿಗೆ ಮತ್ತೆ ಒಂದು ಕಾಗದ ಬರುವುದು. ಹೆಣ್ಣು ನಮಗೆ ಮೆಚ್ಚುಗೆಯಾಗಿದೆ. ತಾವು ಬಂದು ಹುಡುಗನ ಹೊಲ ಮನೆ ನೋಡಬೇಕೆಂದು. ಹೆಣ್ಣಿನ ಕಡೆಯವರು ಹುಡುಗನ ಹೊಲ ಮನೆ ನೋಡಲು ಹೋಗಿ ಮನಸಿಗೆ ಬಂದಿದೆ ಎಂದು ತಿಳಿಸಿದರು.
ಹಿರಿಯರೆಲ್ಲ ಕೂಡಿ ನಿಶ್ಚಯ ಮಾತು ಕಥೆ ಮುಗಿಸಿದರು. ಹುಡುಗನಿಗೆ ಸೈನ ಧೋತ್ರ, ಎಚ್.ಎಮ್.ಟಿ ವಾಚ್ ಹಾಕಬೇಕು. ಹುಡುಗಿಗೆ ಅವರು ಎಣ್ಣಿ ಅರಶಿಣ ಸೀರಿ ಮೇಲು ಮುಸುಗ, ಬೆಂಡೋಲಿ, ಕಾಲುಂಗರ, ಚೈನು ತರಬೇಕಿತ್ತು. ಶುಭದಿನ ನೋಡಿ ಸ್ವಾಮಿಗಳ ಮಠಕ್ಕೆ ಹೋಗಿ ಮದುವೆ ಮೂಹೂರ್ತ ನಿಶ್ಚಯ ಮಾಡಿ, ಲಗ್ನ ಪತ್ರಿಕೆ ಮಾಡಿಸಿ, ಬಂಧು-ಬಳಗ ಆಪ್ತರಿಗೆಲ್ಲ ಹಂಚಿ ಮದುವೆಗೆ ಕರೆಯಲಾಯಿತು.
ಜವಳಿ ಖರೀದಿಯು ಬಜಾರಕ್ಕೆ ಹೋಗಿ ಮುಗಿಸಿಕೊಂಡು ಬರಲಾಯಿತು. ಗಂಡಿನ ಕಡೆಯವರು ಹೆಣ್ಣು ಕರೆಯಲು ಬಂದರು. ಮದುವೆಯ ದಿಬ್ಬಣ ಹಲಗೆ ವಾದ್ಯ ಮತ್ತು ಅಂಬರಿ ಕಂಟಿಯಿಂದ ಮಾಡಿದ ಸನಾದಿ ವಾದ್ಯದೊಂದಿಗೆ ಗಂಡಿನ ಮನೆಗೆ ಹೊರಟರು.
ಗಂಡಿನ ಮನೆಯವರು ಒಳಕಲ್ ಪೂಜೆ ಮುಗಿಸಿದರು. ಬೀಗರನ್ನು ಎದುರುಗೊಳ್ಳುವ ಕಾರ್ಯಕ್ರಮ ನೇರವೇರಿತು. ಬಂದ ಬೀಗರಿಗೆಲ್ಲ ಉಪಹಾರ ನೀಡಿ ಸತ್ಕರಿಸಿದರು. ಎಲ್ಲಾ ಹಿರಿಯರ ಸಮ್ಮುಖದಲ್ಲಿ ಸುಲಗಿ ಸುತ್ತು ಎಣ್ಣೆ ಅರಶಿಣ ಕಾರ್ಯಕ್ರಮ ಶುರುವಾಯಿತು. ಚೌಕಾಕಾರವಾಗಿ ನಾಲ್ಕು ದಿಕ್ಕಿನಲ್ಲಿ ಸಗಣಿಯನ್ನು ಹಾಕಿ, ಅದರ ಮೇಲೆ ತಂಬಿಗಳನ್ನು ಇಟ್ಟು, ಕೌದಿ ಹೊಲಿಯುವ ನೂಲಿನ ದಾರವನ್ನು ಸುತ್ತರಿಸಿ, ಸುಲಿಗಿಯಲ್ಲಿ ಮಧುಮಕ್ಕಳನ್ನು ಕೂಡಿಸಿ, ಹಳ್ಳದಿಂದ ಪಾತ್ರೆಯಲ್ಲಿ ತಂದ ನೀರು ಎಣ್ಣೆ ಅರಸಿಣ ಹಚ್ಚಿ ನೀರು ಸುರಿಯಲಾಯಿತು. ಹೆಣ್ಣು ಹುಡುಗಿಯರೆಲ್ಲ ಒಟ್ಟಾಗಿ ದನಿಗೂಡಿಸಿ ಎಣ್ಣೆ ಅರಶಿನ ಹಚ್ಚುವ ಹಾಡು ಹಾಡತೊಡಗಿದರು.
“ದೇವ ದೇವರೆಣ್ಣಿ ಯಾವ ದೇವರೆಣ್ಣಿ
ಮನಿಯ ದೇವ್ಯರ ಮೊದಲೆಣ್ಣೆ
ಹರಹರ ನಮ ಶಿವಗ ನೆಯ್ಯೆಣ್ಣೆ
ಬಾಲ್ಯಗೆಣ್ಣಿ ಹಚ್ಚೋದಕ ಬಾಗಿಲಿಗೆ ಬಿಸಲ್ಬಂದ
ನಾಲ್ವತ್ವಾಟದ ಎಲಿ ಬಂದ
ಹರಹರ ನಮ ಶಿವಗ ನೆಯ್ಯೆಣ್ಣೆ
ನೀರಿಲ್ಲದಂಗಳದಾಗ ನೀರ್ಯಾಕ ಹರದಾವ
ಊರಿಗೆ ದೊಡ್ಡವರ ಮಗ ಮಿಂದ
ಹರಹರ ನಮ ಶಿವಗ ನೆಯ್ಯೆಣ್ಣೆ.”
ಹಾಡು, ಹೀಗೆ ಅರಶಿಣ ಕಾರ್ಯಕ್ರಮ ಮುಗಿಯಿತು. ಸುಲಗಿ ದಾರವನ್ನು ಒಟ್ಟುಗೂಡಿಸಿ, ಕತ್ತರಿಸಿ ಮಧುಮಕ್ಕಳು ಮತ್ತು ಚಾಜ ಮಾಡಿದವರು ಕೈಯಲ್ಲಿ ಕಂಕಣವಾಗಿ ಕಟ್ಟಿಕೊಂಡರು. ಸ್ವಾಮಿಗಳು ಮಂತ್ರ ಹೇಳಿ, ಹಲಗೆ ಸನಾದಿಯ ವಾದ್ಯ ಮೊಳಗಿ ಮಾಂಗಲ್ಯಧಾರಣೆಯಾಯಿತು. ಸೇರಿದವರೆಲ್ಲ ಅಕ್ಷತೆ ಹಾಕಿ ಹರಸಿ ಕಾಗದದ ಕ್ಯಾಮರದಿಂದ ಪೋಟೋ ತೆಗೆಸಿಕೊಂಡರು.
ಉಳಿದ ತಿಂಡಿಯೆಲ್ಲ ಹಂಚಿಕೊಂಡು ತಿಂದು, ನಕ್ಕು ನಲಿದೇವು. ಸಸಿ ಹೊಗೆಯಲು ಹೋಗಿ ಬಂದಾಗಿನಿಂದ ನನ್ನ ಮನಸ್ಸು ತುಂಬಾ ಕದಡಿತ್ತು. ನನ್ನ ಒಬ್ಬನದಷ್ಟೆ ಅಲ್ಲ ಎಲ್ಲಾ ಹುಡುಗರ ಮನಸ್ಸು ಕದಡಿತ್ತು. ನಮ್ಮ ಗುಂಪಿನಲ್ಲೆ ಹೆಚ್ಚಿನ ತಳಮಳವಿತ್ತು. ಕಣಗಿಲೆ ಬೆಟ್ಟದಲ್ಲಿ ನಾವು ಒಟ್ಟಾಗಿ ಸೇರಿದೇವು. ಎಲ್ಲರೂ ಅವಳ ಸೌಂದರ್ಯವನ್ನು ವರ್ಣೆಸುವವರೆ, ಅವರು ಅವಳನ್ನು ವರ್ಣಿಸಿದರೆ ತನ್ನ ಹೊಟ್ಟೆಯಲ್ಲಿ ಖಾರ ಕಲೆಸಿದಂತಾಗುತಿತ್ತು. ಜಗದ ಚೆಲುವೆಯರ ಮೊಗದ ನಗುವೆಲ್ಲ ಕಸಿದು ದೇವರು ಇವಳಿಗೆ ನೀಡಿರಬೇಕು. ಮುಗಿಲೆಡೆಗೆ ಮೊಗವೆತ್ತಿ ನಕ್ಕರೇ, ಚುಕ್ಕಿ ಚಂದ್ರಮರೇ ಉದುರಿ ನೆಲ ಸೇರುವರು. ಬಂಜೆ ಬಿಳಿ ಮೋಡವಿದ್ದರೂ ಮಳೆಯಾಗಿ ಸುರಿಯಬೇಕು. ನಾವೆಲ್ಲ ಅವಳ ಗುಣಗಾನ ಮಾಡುತ್ತಲೆ ಸಮಯ ಕಳೆದೇವು. ಬಹಳ ಹೊತ್ತಾದ್ದರಿಂದ ಮನೆಯತ್ತ ಹೆಜ್ಜೆ ಹಾಕಿದೇವು. ದೇಸಾಯಿಯವರ ಮಾಳಿಗೆಯ ಮೇಲೆ.. (ಮುಂದುವರೆಯುವುದು.)
–ಶರಣಗೌಡ ಪಾಟೀಲ್. ಚಂದಾಪುರ.
ಲೇಖಕರು. ಶಹಾಪುರ.
Mundina baga yavaga hakatira sir