ಕೋಟೆನಾಡಿನಲ್ಲಿ ಕೇಸರಿ ಕಲರವ… ಹಿಂದೂ ಮಹಾಗಣಪತಿ ವಿಸರ್ಜನೆ, ಶೋಭಾಯಾತ್ರೆ
ಚಿತ್ರದುರ್ಗ: ನಗರದ ತುಂಬ ಸೇರಿರುವ ಲಕ್ಷಾಂತರ ಯುವಪಡೆಯ ದಂಡು… ಎಲ್ಲೆಲ್ಲೂ ಜನಸಾಗರ… ಸಂಗೀತ, ನೃತ್ತದ ಸಡಗರ, ಸಂಭ್ರಮ… ನಗರದೆಲ್ಲೆಡೆ ಕೇಸರಿ ಧ್ವಜಗಳ ಸಾಲು ಸಾಲು. ಮದಕರಿ ನಾಯಕ ವೃತ್ತ, ಒನಕೆ ಓಬವ್ವ ವೃತ್ತ ಸೇರಿ ಪ್ರತಿ ವೃತ್ತಗಳಿಗೂ ಕೇಸರಿ ಅಲಂಕಾರ. ಸ್ವಾಗತ, ಶುಭಾಶಯಗಳನ್ನು ಕೋರುವ ಯುವಪಡೆಯ ಬ್ಯಾನರ್, ಫ್ಲೆಕ್ಸ್. ಕತ್ತಲಾದರೆ ಜಗಮಗಿಸುವ ವಿದ್ಯುದೀಪಗಳು.
ಚಿತ್ರದುರ್ಗ ನಗರದಲ್ಲಿಂದು ಕಂಡು ಬರುತ್ತಿರುವ ದೃಶ್ಯವಿದು. ಹೌದು, ಭಜರಂಗದಳ ಮತ್ತು ವಿಶ್ವ ಹಿಂದೂಪರಿಷತ್ ಸಹಯೋಗದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿ ವಿಸರ್ಜನೆ ಹಾಗೂ ಬೃಹತ್ ಶೋಭಾ ಯಾತ್ರೆ ಇಂದು ದುರ್ಗದಲ್ಲಿ ನಡೆಯುತ್ತಿದೆ. ಶೋಭಾ ಯಾತ್ರೆಗೆ ವಿಶ್ವ ಹಿಂದೂ ಪರಿಷತ್ ನ ಅಂತರಾಷ್ಟ್ರೀಯ ಕಾರ್ಯದರ್ಶಿ ಸುರೇಂದ್ರ ಕುಮಾರ್ ಜೈನ್ ಚಾಲನೆ ನೀಡಿದ್ದಾರೆ. ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಗೋಪಾಲ್ ಜಿ , ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯಶ್ರೀ, ಕುಂಚಿಟಿಗ ಗುರುಪೀಠದ ಶಾಂತವೀರಶ್ರೀ ಸೇರಿದಂತೆ ಅನೇಕ ಮಠಾಧೀಶರು, ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ನಗರದ ಒನಕೆ ಓಬವ್ವ ಸ್ಟೇಡಿಯಂ ರಸ್ತೆಯಿಂದ ಆರಂಭವಾಗಿರುವ ಶೋಭಾ ಯಾತ್ರೆ ಸುಮಾರು 4.2ಕಿ.ಮೀ ದೂರದ ಚಂದ್ರವಳ್ಳಿ ಕೆರೆವರೆಗೆ ನಡೆಯಲಿದೆ. ಬೆಳಗ್ಗೆ 10ಗಂಟೆಗೆ ಆರಂಭವಾಗಿರುವ ಶೋಭಾಯಾತ್ರೆ ಸಂಜೆ 8:30ರ ವೇಳೆಗೆ ಚಂದ್ರವಳ್ಳಿ ಕೆರೆ ತಲುಪುವ ನಿರೀಕ್ಷೆಯಿದೆ. ಶೋಭಾ ಯಾತ್ರೆಯಲ್ಲಿ ಲಕ್ಷಾಂತರ ಜನ ಪಾಲ್ಗೊಂಡಿದ್ದು ಸ್ಟೇಡಿಯಂ ರಸ್ತೆಯಿಂದ ಆರಂಭವಾಗಿರುವ ಶೋಭಾ ಯಾತ್ರೆಯಲ್ಲಿ ಈಗಾಗಲೇ ಕೊನೆಯಾಗುವ ಚಂದ್ರವಳ್ಳಿವರೆಗೂ ಜನಜಾತ್ರೆಯೇ ನೆರೆದಿದೆ.
ಸ್ವಾತಂತ್ರ್ಯ ಯೋಧರು, ಮಹಾ ಪುರುಷರ ಸ್ತಬ್ಧ ಚಿತ್ರಗಳು, ಡೋಲು ಕುಣಿತ, ಜನಪದ ಕಲಾತಂಡಗಳು ಶೋಭಾಯಾತ್ರೆಗೆ ಸಾಂಸ್ಕೃತಿಕ ಮೆರುಗು ನೀಡಿವೆ. ಮತ್ತೊಂದು ಕಡೆ ಯುವ ಪಡೆ ನಾಚ್ ಗಾನಾದಲ್ಲಿ ಬಿಜಿಯಾಗಿದೆ. ಮಹಿಳೆಯರು, ಯುವತಿಯರೂ ಗಣೇಶೋತ್ಸವದಲ್ಲಿ ಭಾಗಿಯಾಗಿದ್ದಾರೆ. ನಗರದ ಶಾಲೆಗಳಿಗೆ ರಜೆ ನೀಡಲಾಗಿದ್ದು ಕೆಲ ವಿದ್ಯಾರ್ಥಿಗಳೂ ಗಣೇಶೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಕೇಸರಿ ಪೇಟ ತೊಟ್ಟು ಸೆಲ್ಫಿಗೆ ಫೋಜ್ ನೀಡುತ್ತಿರುವುದು ಸಾಮಾನ್ಯವಾಗಿದೆ.
ಶಾಂತಿ, ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುಂಜಾಗೃತ ಕ್ರಮವಾಗಿ ಚಿತ್ರದುರ್ಗ ಎಸ್ಪಿ ಶ್ರೀನಾಥ್ ಜೋಶಿ ನೇತೃತ್ವದಲ್ಲಿ 3 ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳದಲ್ಲೇ ಮೊಕ್ಕಾ ಹೂಡಿದ್ದಾರೆ. ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 4ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿದ್ದು, ನೂರಾರು ಪೊಲೀಸ್ ಅಧಿಕಾರಿಗಳು ಶೋಭಾಯಾತ್ರೆ ಉದ್ದಕ್ಕೂ ಜತೆ ಸಾಗುತ್ತಿದ್ದಾರೆ. 85ವಿಡಿಯೋ ಕ್ಯಾಮರಾ, 7ಕಡೆ ಸಿಸಿ ಕ್ಯಾಮರಾ, 1 ತ್ರಿನೇತ್ರ ವಾಹನ, 2ಡ್ರೋಣ್ ಕ್ಯಾಮರಾ ಕೂಡ ಬಳಸಲಾಗುತ್ತಿದೆ. ಆ ಮೂಲಕ ಪೊಲೀಸರು ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ.