ರೈತರು ಗಮನಿಸಿ: ಹೈಟೆಕ್ ಹಾರ್ವೆಸ್ಟರ್ ಹಬ್ ಗಳ ಸ್ಥಾಪನೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

(Hitech Harvester Hub) ಕೃಷಿ ಇಲಾಖೆ ವತಿಯಿಂದ ಹೈಟೆಕ್ ಹಾರ್ವೆಸ್ಟರ್ ಹಬ್ ಗಳ ಸ್ಥಾಪನೆಗಾಗಿ ಅರ್ಜಿ ಆಹ್ವಾನಿಸಿದ್ದು, ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಕೃಷಿ ಇಲಾಖೆ ವತಿಯಿಂದ ಕ್ಷೇತ್ರದಲ್ಲಿ ಯಂತ್ರೋಪಕರಣಗಳ ಬಳಕೆ ಅಧಿಕ ಮಾಡುವ ನಿಟ್ಟಿನಲ್ಲಿ ಕೃಷಿ ಚಟುವಟಿಕೆಗಳಿಗೆ ಆಧುನಿಕ ತಂತ್ರಜ್ಞಾನದ ಬೃಹತ್ ಯಂತ್ರಗಳನ್ನು ಅಳವಡಿಸಿಕೊಂಡು, ಸಕಾಲದಲ್ಲಿ, ಕೃಷಿ ಕಾರ್ಯಗಳನ್ನು ನೆರವೇರಿಸಲು ಹೈಟೆಕ್ ಹಾರ್ವೆಸ್ಟರ್ ಹಬ್ಗಳ (ಕಟಾವು ಕೇಂದ್ರಗಳು) ಸ್ಥಾಪನೆಗಾಗಿ ಅಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಈ ಅರ್ಜಿಯನ್ನು ಸೆ. 24ರೊಳಗೆ ಸಲ್ಲಿಸಬಹುದಾಗಿದೆ.
ಹೈಟೆಕ್ ಹಾರ್ವೆಸ್ಟರ್ ಹಬ್ ಗಳನ್ನು ಸ್ಥಾಪನೆ ಮಾಡಿ ಈ ಯಂತ್ರಗಳನ್ನು ಬಾಡಿಗೆಗೆ ನೀಡುವ ಮೂಲಕ ರೈತರು ಹೆಚ್ಚುವರಿ ಆದಾಯ ಪಡೆಯಬಹುದಾಗಿದೆ. ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಇನ್ನಷ್ಟು ಬಲಪಡಿಸಲು ಹೈಟೆಕ್ ಹಾರ್ವೆಸ್ಟರ್ ಹಬ್ಗಳನ್ನು ಬೆಳೆಯ ವಿಧ ಮತ್ತು ಕಟಾವು ಅವಧಿಯ ಆಧಾರದ ಮೇಲೆ ಕಾರಿಡಾರ್ ಮಾದರಿಯಲ್ಲಿ ಸ್ಥಾಪಿಸಬಹುದು. ಸಾಮಾನ್ಯ ವರ್ಗದ ರೈತರಿಗೆ ಶೇ. 50 ರಂತೆ ಗರಿಷ್ಠ ರೂ.40 ಲಕ್ಷ ಸಹಾಯಧನ, ಪರಿಶಿಷ್ಟ ಜಾತಿ, ಪರಿಶಿಷ್ಟ ವಂಗಡ ವರ್ಗದ ರೈತರಿಗೆ ಶೇ. 70ಹಾಗೂ ಸಂಘ-ಸಂಸ್ಥೆಗಳಿಗೆ ಚಾಲ್ತಿಯಲ್ಲಿರುವ ಕೃಷಿ ಯಂತ್ರಧಾರ ಕೇಂದ್ರಗಳ ಸೇವಾದಾರ ಸಂಸ್ಥೆ ಎಫ್ಪಿಓ ಒಳಗೊಂಡಂತೆ ಶೇ.20 ರಂತೆ ಗರಿಷ್ಠ ರೂ.50 ಸಹಾಯಧನ ನೀಡಲಾಗುತ್ತದೆ.
ಕೃಷಿ ಯಂತ್ರಧಾರೆ ಕೇಂದ್ರಗಳ ಸೇವಾದಾರ ಸಂಸ್ಥೆಗಳ, ಕೃಷಿ ಯಂತ್ರೋಪಕರಣಗಳ ಬ್ಯಾಂಕ್, ರೈತ ಉತ್ಪಾದಕ ಸಂಸ್ಥೆಗಳು, ಇತರೆ ಸಂಘ-ಸಂಸ್ಥೆಗಳು ರಾಜ್ಯಾದ್ಯಂತ ಅರ್ಜಿಗಳನ್ನು ಸಲ್ಲಿಸಬಹುದು. ಆರು ಅಥವಾ ಒಂಬತ್ತು ವರ್ಷಗಳ ಕಾಲ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಮತ್ತು ತಪಾಸಣೆಯಲ್ಲಿ ಸಂಪೂರ್ಣವಾಗಿ ಲೆಕ್ಕ-ಪತ್ರ ಹಾಗೂ ಯಂತ್ರೋಪಕರಣಗಳನ್ನು ಹಾಜರುವಡಿಸಿರುವ ಕೃಷಿ ಯಂತ್ರಧಾರೆ ಕೇಂದ್ರಗಳ ಸೇವಾದಾರ ಸಂಸ್ಥೆಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಬಹುದಾಗಿದೆ.