ಶಹಾಪುರ: ನಗರದಲ್ಲೆಡೆ ಹೋಳಿ ಸಡಗರ ಸಂಭ್ರಮ
ಬಣ್ಣದೋಕುಳಿಯಲ್ಲಿ ಮಿಂದೆದ್ದ ಯುವಕರು
ಯಾದಗಿರಿ, ಶಹಾಪುರ: ಪಟ್ಟಣದ ದೇವಿ ನಗರ, ಗಣೇಶ ನಗರ ಗಾಂಧಿಚೌಕ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಶುಕ್ರವಾರ ಓಕುಳಿ ಆಟದ ರಂಗು ಕಂಡು ಬಂದಿತು. ಅಲ್ಲದೆ ಬೇರೆಡೆ ಕಾಮ ದಹನದ ನಂತರ ಬಣ್ಣದಾಟವಾಡಿದರೆ, ಶಹಾಪುರದಲ್ಲಿ ಮಾತ್ರ ಓಕುಳಿ ಆಡಿದ ನಂತರ ಕಾಮ ದಹಿಸುವ ವಾಡಿಕೆ ಮೊದಲಿನಿಂದಲೂ ಚಾಲ್ತಿಯಲ್ಲಿದೆ.
ಅಂತೆಯೇ ಶುಕ್ರವಾರ ಬೆಳಗ್ಗೆಯಿಂದ ಬಣ್ಣದಲ್ಲಿ ಮಿಂದೆದ್ದ ಜನತೆ ಸಂಜೆ ಪಟ್ಟಣದ ಗಾಂಧಿ ಚೌಕ್, ದಿಗ್ಗಿ ಬೇಸ್ ಹತ್ತಿರ, ಗಣೇಶ, ಬುದ್ಧ, ಲಕ್ಷ್ಮೀ ನಗರ ಸೇರಿದಂತೆ ಇತರಡೆ ಕಾಮದಹನ ಮಾಡಲಾಯಿತು.
ಕಾಮ ದಹಿಸುವ ಮುಂಚೆಯೇ ಬಡಾವಣೆಯ ಮಹಿಳೆಯರು, ಮಕ್ಕಳು ಕಾಮದೇವನಿಗೆ ಹೋಳಿಗೆ, ಕಡಬು ಸೇರಿದಂತೆ ಖಾದ್ಯ ಪದಾರ್ಥಗಳ ನೈವೇದ್ಯ ಅರ್ಪಿಸಿದರು.
ಬೆಳಗ್ಗೆಯಿಂದಲೇ ಪಟ್ಟಣಾದ್ಯಂತ ಬಣ್ಣದ ಓಕುಳಿ ಸಡಗರ ಸಂಭ್ರಮ ಮನೆ ಮಾಡಿತ್ತು. ಹೋಳಿ ಹಬ್ಬದಂಗವಾಗಿ ವ್ಯಾಪಾರ ವ್ಯವಹಾರಕ್ಕೆ ಅಲ್ಪ ಬ್ರೇಕ್ ಹಾಕಲಾಗಿತ್ತು. ಬೆಳಗ್ಗೆಯಿಂದಲೇ ಮಕ್ಕಳು, ಹಿರಿಯರು ಮಹಿಳೆಯರು ಸೇರಿದಂತೆ ಯುವತಿಯರು ಪರಸ್ಪರ ಬಣ್ಣ ಹಚ್ಚುವ ಮೂಲಕ ಸಂತಸ ಹಂಚಿಕೊಂಡರು.
ಹಲವಡೆ ಮಕ್ಕಳು ಅಣಕು ಶವ ಪ್ರದರ್ಶಿಸುವ ಮೂಲಕ ಖುಷಿ ಪಡೆದು ಓಕುಳಿ ಹಬ್ಬಕ್ಕೆ ರಂಗು ತಂದರು. ಉಳಿದಂತೆ ಹಲವಡೆ ಹಲಗೆ ನಾದಕ್ಕೆ ಕುಣಿದು ಕುಪ್ಪಳಿಸಿದರು. ಯಾವುದೇ ಗಲಾಟೆ ನಡೆಯದೇ ಶಾಂತಿ ಸೌಹಾರ್ಧಯುತವಾಗಿ ಹೋಳಿ ಆಚರಣೆ ನಡೆದಿರುವುದು ಸಮಾಧಾನ ತಂದಿದೆ. ಹೋಳಿ ನಿಮಿತ್ತ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು.ತಾಲೂಕಿನ ಉಮ್ಮರದೊಡ್ಡಿ ಸೇರಿದಂತೆ ಹಲವು ಗ್ರಾಮಗಳಲ್ಲಿಯೂ ಬಣ್ಣದಾಟದಲ್ಲಿ ಯುವಕರು ಮುಳುಗಿರುವದು ಕಂಡು ಬಂದಿತು.