ಹೊನ್ಕಲ್‌ರ ಗಜಲ್ ಹಾಡಿದ ಮೈನಾ..!
ಎಲ್ಲಿದ್ದೆ ಇಲ್ಲೀತನಕ.. ಎಲ್ಲಿಂದ ಬಂದ್ಯಪ್ಪಾ.. !
*ಗ್ರುಪ್ ಸೇರಿಸಿ ಗಜಲ್ ಬರೆಸಿದ್ದಕ್ಕೆ*
ಇಂತಹ ಒಕ್ಕಣೆ ಬರೆದು ಪುಸ್ತಕ ಕೈಗಿಟ್ಟರು.
ಓದುವ ಖುಷಿಗಾಗಿ ಅಂತಲೋ..
ಗೌರವ ಪ್ರತಿ ಅಂತಲೋ.. ವಿಮರ್ಶೆ ಅಥವಾ ಅಭಿಪ್ರಾಯ ಬರೆದುಕೊಡಿ ಅಂತಲೋ..
ಬರೆದು ಹೊಸ ಪುಸ್ತಕಗಳನ್ನು ಪ್ರೀತಿಯಿಂದ ಗೆಳೆಯರಿಗೆ, ಲೇಖಕ ಮಿತ್ರರಿಗೆ ಕೊಡುವುದು ವಾಡಿಕೆ. ಆದರೆ, ಲೇಖಕ ಮಿತ್ರ ಹೀಗೆ ಬರೆದುಕೊಡಬಹುದೇ..?
ನಾನಂತೂ ಈ ಒಕ್ಕಣೆ ನೋಡಿದ ಮೇಲೆ ಕ್ಷಣ ದಂಗಾದೆ.
ವ್ಯಾಟ್ಸಪ್ ನಲ್ಲಿ ‘ಗಜಲ್ ಗ್ರುಪ್’ ವೊಂದರಲ್ಲಿ ಸೇರಿಸಲು ಶಿಫಾರಸ್ಸು ಮಾಡಿದ್ದಕ್ಕಾಗಿಯೇ ಈ ಕೃತಿ ಬಂತು ಎಂಬಂತಹ ವಕ್ರ ದೃಷ್ಟಿಯಿಂದ ಕೊಟ್ಟರೇನೋ? ಈ ಕೃತಿ ಪ್ರಕಟವಾಗುವುದರಲ್ಲಿ ನಿನ್ನ ಪಾಲೂ ಇದೆ ಎಂದು ಪಾಸಿಟಿವ್ ಥಿಂಕಿಂಗ್‌ನಲ್ಲಿ ಕೊಟ್ಟಿದ್ದಾರಾ? ಹೂಂ.. ಹೂಂ.. ಗೊತ್ತಿಲ್ಲ.ಬಹುಷ್ಯ ಎರಡನೆಯದೇ ಇರಬೇಕು.
ಇಂತಹ ಪುಟ್ಟ ಅನುಮಾನವನ್ನಿಟ್ಟುಕೊಂಡೇ ಪುಸ್ತಕವನ್ನು ಹಿಡಿದುಕೊಂಡು ನೋಡತೊಡಗಿದೆ.
ಆಗ್ರಾದ `ಪ್ರೇಮಮಹಲು’ ಚಿತ್ರದೊಂದಿಗೆ *ಆಕಾಶಕ್ಕೆ ಹಲವು ಬಣ್ಣಗಳು* ಎಂಬ ಶೀರ್ಷಿಕೆಯೊಂದಿಗೆ ಆಕರ್ಷಕ ಮುಖಪುಟ ಮತ್ತು ಅಪರೂಪದ ಬುಕ್ ಸೈಜ್ ಜೊತೆಗೆ ಚಿತ್ರ ಮತ್ತು ಗಜಲ್‌ನೊಂದಿಗೆ ಪುಟವಿನ್ಯಾಸ ಥಟ್ಟನೆ ಮನಸೆಳೆಯಿತು.
ಅದಕ್ಕಾಗಿ *ಸಿದ್ಧರಾಮ ಹೊನ್ಕಲ್* ಎಂಬ ಗಜಲ್ ಲೋಕಕ್ಕೆ ಸೇರ್ಪಡೆಯಾದ ನೂತನ ಲೇಖಕರಿಗೆ ಒಂದು *ಚೆಂದನೆಯ ನಮಸ್ಕಾರಗಳು*.
ಐವತ್ತು ಗಜಲಿನ ಈ ಕೃತಿಯನ್ನು ಒಮ್ಮೆ ತಿರುವಿ ಹಾಕುವಾಗ ಥಟ್ಟನೆ ಈ ಸಾಲು ಗಮನಕ್ಕೆ ಬಂತು.
‘ಬಯಲ ಬೆತ್ತಲೆಯ ಸುತ್ತ ಗಾಣದೆತ್ತಿನ ಸವಾರಿ ಶುರುವಾಗಿದೆ.’
ಧ್ಯಾನಸ್ಥ ಸ್ಥಿತಿಯಲ್ಲಿ ಬರೆದ ಸಾಲಾ ಇದು?
ಅನುಭವ ಮತ್ತು ಅನುಭಾವಗಳ ‘ಮಿಲನ’ದ ರಿಫ್ಲೆಕ್ಷನ್ ಎನ್ನಬಹುದು.
`ಅನುಭವವು ಸವಿಯಲ್ಲ; ಅದರ ನೆನಪೇ ಸವಿಯು.
ಅನುಭವದ ತುಮಲಗಳು ಕಾಲ ಕಳೆದರೂ ನೆನಪಾಗಿ ಉಳಿಯುವರಿಂದ; ಭಾವಗಳ ನಂಟಿನ ಜೊತೆ; ಮನಸ್ಸಿನ ಉಮ್ಮೇದಿನ ಜೊತೆ ಮರುಕಳಿಸುವಾಗ ಶೇರ್‌ಗಳಾಗಿದ್ದು, ಆ ಮೂಲಕ ಗಜಲಿನ ಭಾವ ಜಗತ್ತು ನಿರ್ಮಿಸಿಕೊಂಡಿದ್ದು.. .. ಹೊನ್ಕಲ್ ಅವರ ಧ್ಯೇನಿಸುವ ಮಾಂತ್ರಿಕತೆಗೆ ದಕ್ಕಿದ ನಾದಲೋಕವಿದು.
ಮನಸಾರೆ *ಆಕಾಶಕ್ಕೆ ಬಣ್ಣ* ಗಳನ್ನು ಎರಚಿ ಆಕರ್ಷಿಸುವಂತೆ, ಒಂದೇ ಗಿಕ್ಕಿಗೆ ಎಲ್ಲಾ ಐವತ್ತು ಗಜಲ್‌ಗಳನ್ನು ಓದುಗನ ಮುಂದೆ ಹರವಿ ಬಿಡಬೇಕು ಎನ್ನುವ ಉತ್ಕಟ ಆಕಾಂಕ್ಷೆಯು ಈ ಹೊನ್ಕಲ್ ರ ಒಳಗಿದೆ.
ಅತ್ಯಂತ ಕಡಿಮೆ ಸಮಯದಲ್ಲಿ ಕಾಫಿ ಹೀರುತ್ತಲೇ ಕಪ್ಪಿನೊಳಗೊಂದು *ಕಾಫಿಯಾ*’ ಹೇಗೆ ಆವಾಹಿಸಿಕೊಂಡರು ಎಂಬುದೇ ನನಗಿವತ್ತೂ ಕಾಡುತ್ತಿರುವ ಅನುಮಾನ.ಕದ್ದು ಕದ್ದು ನೋಡೋ ಆ `ಸಖಿ’ ಯಾರೋ ?
ಗಜಲಿನ ಮೂಲದ್ರವ್ಯ ಎನಿಸುವ ‘ಸಖಿ’ಯ ಬಗ್ಗೆ ಕೇಳ ಬೇಕೆಂದುಕೊಂಡೆ, ಆದರೆ ಹಿಮಾಲಯದಿಂದ ಹಿಡಿದು ಕನ್ಯಾಕುಮಾರಿ, ಪಂಜಾಬ್, ಬಿಹಾರ, ದೆಹಲಿ,ಜಮ್ಮು ಕಾಶ್ಮೀರ,ಸಿಮ್ಲಾ, ಜೈಪೂರ್.. ಹೀಗೆ ದೇಶದೊಳಗೆ ಅಲ್ಲದೆ ಹೊರ ದೇಶಗಳಾದ ನೇಪಾಳ, ಸಿಂಗಾಪುರ, ಮಲೇಷಿಯಾ, ಥೈಲ್ಯಾಂಡ್ ಹೀಗೆ ತರಹೇ ವಾರಿ ಪ್ರದೇಶಗಳಲ್ಲಿ ಓಡಾಡಿ, ತಿರುಗಾಡಿ, ಒಂದಷ್ಟು ದಿನ ಉಸಿರಾಡಿ ಬಂದ ಈ *ಹೊನ್ಕಲ್* ರಿಗೆ ಅಲ್ಲಿನ ಬದುಕು ಮತ್ತು ಭಾಷೆ ಎಲ್ಲವೂ ಒಂದು *ಸಖಿ* ಯಂತೆ ಕಂಡಿರಬಹುದು ಅಥವಾ *ಸಾಕಿ* ಯಾಗಿಯು ಕಾಡಿರಬಹುದು? ಹೀಗೆ ಕಾಣಿಸಿಕೊಳ್ಳಲು ‘ಮಧು ಶಾಲೆಯೇ ಆಗಿರಬೇಕು ಅಂತೇನಿಲ್ಲ.
ಮದಿರೆಯನ್ನು ಸುರಿಯುವ ‘ಸಾಕಿ’, ಆ ನಂತರ ನೆನಪಾಗುವ ‘ಮಾನಿನಿ’, ಬದುಕಿನ ಒಂದಷ್ಟು ಹೊತ್ತಿನ ‘ನಶೆಯಲೋಕ’ವನ್ನು ಕಟ್ಟಿಕೊಂಡಾದ ಮೇಲೆ ರುಚಿ ಅಳೆಯದ ಸಂವೇದನೆಯೊಂದು *ಆತ್ಮಸಾಂಗತ್ಯ* ದ ಕಡೆ ಹೊರಳುತ್ತದೆ. ಹೊನ್ಕಲ್ ರಿಗಿದು ಆಪ್ಯಾಯಮಾನವೇನೋ..?
ಏಕತಾನತೆಯೊಂದಕ್ಕೆ ಜೋತು ಬೀಳದ ಸಿಪ್‌ಗಳಂತೆ, ಕಡು ಬಣ್ಣದ *ಮತ್ಲಾ* ಗಳನ್ನು ನೋಡುವ ಹೊನ್ಕಲ್‌ರ ಗಜಲ್ ಲೋಕವೇ ಚೆಂದನೆಯ *ಕಾಮನಬಿಲ್ಲಿ* ನಂತಿದೆ.
ಗಜಲ್ ಲೋಕವನ್ನು ಯಾವತ್ತಿಗೂ ಇಷ್ಟೇನಾ ಎಂದು ಭಾವಿಸಬಾರದು,ಅದರ ಪ್ರಕಲ್ಪಗಳ ಇಂಚಿಂಚೂ ಅರ್ಥಮಾಡಿಕೊಂಡರೆ ಮಾತ್ರ *ಸಾಕಿ* ಒಲಿಯಬಹುದು.
ಅದ್ಯಾವುದೋ ಬಯಸಿಹೋದ ನಂಟಿನೊಂದಿಗೆ.. ಇನ್ನೊಂದು ಗೆಳೆತನಕ್ಕಾಗಿ ; ಇದೆಲ್ಲವೂ ಅಂದುಕೊಂಡಂತೆ.. ದಕ್ಕದಿದ್ದರೆ ಮದಿರೆಯನ್ನರಸುತ್ತ ಮಧುಶಾಲೆಯೆಡೆಗೆ ಕೈ ಚಾಚಿ ಬಿಡುತ್ತಿರುವವರ ಸಾಧ್ಯತೆಗಳೇ ಹೆಚ್ಚು.ಆದರೆ ಇವರು ಹಾಗಲ್ಲ ಸ್ಥಿತ್ ಪ್ರಜ್ಞ.
ಹಾಗಂತ, ಕಳೆದುಕೊಂಡದ್ದನ್ನು ಪಡೆಯಬಹುದೇ?
ಮರಳಿ ತನ್ನದನ್ನಾಗಿಸಿಕೊಳ್ಳುವ ಉಮ್ಮೇದು ಬೇಡವೆ? ಪ್ರಿಯ ಗೆಳತಿ ಕೋಪಿಸಿಕೊಂಡು ದೂರಾದಳೇಕೆ? ಅವಳ ಮನ ಒಲಿಸುವ ಪರಿ.ಇವುಗಳಲ್ಲಿ ಅದೊಂಥರಾ ಖುಷಿ ಇರುತ್ತದೆಯಾ? ಶುರುವಾದ ಹೊಸ ಸ್ನೇಹ ಮತ್ತು ದಿಢೀರನೆ ಹಳಸಿಹೋದ ಪ್ರೀತಿ ಇವೆರಡೂ ದಿವಿನಾದ ನೋವು ಕೊಡುತ್ತದೆಯಾ….? ನನಗೆ ಇವು ಸದಾ ಕಾಡುವವು.ಇವರ ಗಜಲ್ ನಲ್ಲಿ ಅಂಥವುಗಳಿಗೆ ಉತ್ತರ ಸಿಕ್ಕರು ಸಿಕ್ಕಬಹುದು.
ಇಂತಹ ಡಿಫರೆಂಟ್ ‘ಮೊಹಬ್ಬತ್’ ಇಟ್ಟುಕೊಂಡು ತಾಜ್ ಚಿತ್ರದ “ಪ್ರೇಮ ಮಹಲಿನ” ಈ ಕೃತಿ ಕೊಟ್ಟಿರುವ ಲೇಖಕ ಮಿತ್ರರಿಗೆ ಪ್ರೀತಿಯಿಂದ ಹೀಗೆನ್ನಬೇಕೆಂಬ ಸಲುಗೆಯಿಂದ
*ಲವ್ ಯು ಹೊನ್ಕಲ್ *
ನನ್ನನ್ನು ಅನಾಮತ್ತಾಗಿ *ಬೇಹೋಶ್ * ಮಾಡಿರುವ ಈ ಬಣ್ಣಗಳು ಕೈಯಲ್ಲಿಡಿದು ನೋಡುತ್ತಿದ್ದರೆ,
*ನೀ ಕೊಲ್ಲುವವಳಲ್ಲ ಕಾಡುವವಳೆಂದು ಗೊತ್ತು ಅವನಿಗೆ
ಬೇಸತ್ತು ಹೋಗಿಹನು ಈ ಮೌನದಿ ಕೊಲ್ಲಬೇಡ*
ಈ ಕ್ಷಣಕ್ಕೆ ಗಜಲ್ ಸಂಕಲನದ ಸಾಲುಗಳು ಬಹಳ ಸರಳ ಎನಿಸಬಹುದು. ಗಜಲ್ ಜಗತ್ತಿನ ಬದಲಾಗುತ್ತಿರುವ ಸಂವೇದನೆಗಳು ಹೊಸತನ ಹೊಸ ರೂಪಗಳಲ್ಲಿ ಅದ್ದಿ ತೆಗೆಯುತ್ತಿವೆ. ಕನ್ನಡದ ಸಂದರ್ಭಕ್ಕೆ ಈ *ಸಾಕಿ * ಒಗ್ಗಿಕೊಳ್ಳಲೇಬೇಕು.ಇಲ್ಲಿ ಸಾಕಿ ಸಖಿ ಇಬ್ಬರೂ ಒಲಿದಿದ್ದಾರೆ.
ಪ್ರತಿ ಗಜಲಿನ ಶೇರ್‌ಗಳನ್ನು ಮತ್ತು ಅವುಗಳ ಅರ್ಥವಂತಿಕೆಯನ್ನು ನನ್ನಂತಹ ಓದುಗನಿಗೆ ಹೇಳುವುದು *ಹೊಸ ಸಂವೇದನೆ* ಯ ಹಾದಿಗಲ್ಲೇ.
ಉರ್ದುವಿನ ಮೂಲಕ ಕನ್ನಡಕ್ಕೆ ಬಂದ `ಗಜಲ್‌ಲೋಕ’ ಸಾರ್ಥಕತೆ ಪಡೆದುಕೊಳ್ಳುವ ನಿಟ್ಟಿನಲ್ಲಿ ಸೃಜನಶೀಲತೆಯ ಹುಡುಕಾಟ ನಿರಂತರವಾಗಿರಬೇಕೆನಿಸದೆ ಇರಲಾರದು.
*ಬೆಪ್ಪನಂತೆ ಕಂಡಿರಬಹುದು ಅವನ ನಿರಾಕರಿಸಬೇಡ ಸಖಿ*
ಹೀಗೆ ತಿಳಿ ಹೇಳುವ ಕಾಲ ಇನ್ನೂ ಇದೆಯಾ? ಅವಳಿಗೆ ಗೊತ್ತಿಲ್ಲವೇನು? ಅವನು ಬೆಪ್ಪ ಇದ್ದಾನೆಂಬುದು. ನಿರಾಕರಣೆಗೆ ಬೆಪ್ಪುತನವೇ ಕಾರಣವೇ ? ಅಥವಾ ಇಂತಹ ಬೆಪ್ಪನಿಂದ ತನಗೇನಾಗಬೇಕಿದೆ ಎಂದು ಅಸಡ್ಡೆಯೇ ?
ಇಂತಹ *ಅನೂಹ್ಯ ಲೋಕ* ಕಟ್ಟಿಕೊಡುತ್ತಾರೆ ಹೊನ್ಕಲ್ ರವರು.
ತಮ್ಮ ಸಮಕಾಲೀನ ಗಜಲ್ ಬರಹಗಾರರ ನಡುವೆ *ತೀವ್ರತೆ* ಇರುವ ಹೊನ್ಕಲ್ ರ ಮನಸ್ಸು, ಅದು ಸೂಸುವ ಭಿನ್ನ ರುಚಿಯಂತಿರುವ ಶೇರ್, ಮಾನವಿಕ ಸಂಬಂಧಗಳನ್ನು ಆಯ್ದುಕೊಂಡು ಆಕರ್ಷಕವಾಗಿ ರಚನೆ ಮಾಡಿದ್ದು, ನನಗಂತೂ ಪರಿಣಾಮ ಬೀರಿದೆ.
ಗಜಲನ್ನು ಕಳೆದ ಆರೇ ತಿಂಗಳಲ್ಲಿ ಕಡು ವ್ಯಾಮೋಹಿಯಂತೆ ಪ್ರೀತಿಸಿರುವ ಹೊನ್ಕಲ್ ರು, ಸಂತನಂತೆ, ಧ್ಯಾನಸ್ಥನಂತೆ ಕಂಡರೂ ಸಹ *ವರ್ತಮಾನದ ಸಂಗತಿಗಳ ಜೊತೆಗೆ ಏಗುವ* ವೃತ್ತಿಯ ನಡುವೆಯೂ *ಸಾಕಿ* ಯನ್ನು ತನ್ನದನ್ನಾಗಿಸಿಕೊಳ್ಳುವ ಬಗೆ ಇದೆಯಲ್ಲಾ..? ಅದು ಹೊನ್ಕಲ್ ರಿಗೆ ದಕ್ಕಿಸಿಕೊಳ್ಳಲು ಸಾಧ್ಯವಿದೆ. ಅದಕ್ಕಾಗಿಯೇ ಅವರಕ ಆಕಾಶಕ್ಕೂ ಬಣ್ಣ ಬಳಿಯಲು ಪ್ರಯತ್ನಿಸಿದ್ದು, ಅದರಲ್ಲಿ ಸಫಲತೆಯನ್ನು ಕಂಡುಕೊಳ್ಳುವ ಆಶಾವಾದಿ ಅವರು.
ಹೊನ್ಕಲ್ ರು ನಿಜವಾಗಿಯೂ ಹೀಗಿದ್ದಾರೇನು..?
ಅವರೊಂದಿಗೆ ಮಾತಿಗೆ ಕುಳಿತಾಗ ಅನಿಸುವುದಿಲ್ಲವಲ್ಲ..!
ಏಕಾಂತದ ಮುಖಾ ಮುಖಿಯಲ್ಲಿ `ಸಾಕಿ’ ನೆನಪಿಸಿಕೊಂಡು ಬರೆದ ಈ `ಬಣ್ಣಗಳಿಂದ’ ನಾವು ಹೇಗೆ ಪಾರಾಗಬೇಕು? ಯಾಕೆಂದರೆ `ಕಾಡುವ’ ಗಜಲಿನ ಹಂಬಲಗಳು ನನ್ನಂತಹ ಸೂಕ್ಷ್ಮ ಸಂವೇದಿಯನ್ನೇ ಅರೆಕ್ಷಣ ಬೆತ್ತಲಾಗಿಸುವಂತೆ ತುಯ್ಯುತ್ತಿವೆ.. ಮಧುರ ಮಧುರ ಮಂಜುಳ ಗಾನದಂತೆ.
ನವಿರಾಗಿ ತನ್ನ ಭಾವನೆಗಳನ್ನು ಎಳೆ ಎಳೆಯಾಗಿ ಬಿಚ್ಚಿಡುವ.., ಸುಂದರ ನವಿಲಿನ ಗರಿ ಬಿಚ್ಚಿ ಆಡುವಂತೆ ತೆರೆದುಕೊಳ್ಳುವ.. ಹೊನ್ಕಲ್ ರ ಈ ಗಜಲ್‌ಗಳು, ಹೂವಿನ ಪಕಳೆಗಳ ಮೇಲಿನ ಮಂಜಿನ ಹನಿಯಂತೆ ಆಕರ್ಷಿಸುತ್ತವೆ.
`ಸಖಿ, ನಾವು ಮಾತು ಮರೆತಿರಬಹುದು
ಅವು ಹೃದಯದ ಭಾಷೆ ಬಲ್ಲವು..’
ಪ್ರೇಮ ಸಂವಾದದಂತೆ ಕಂಡುಬರುವ ಈ ಸಾಲುಗಳು ಮಧು ಶಾಲೆಯ ಪಿಸು ಮಾತುಗಳಂತಿವೆ.
ಪ್ರೀತಿ, ವಿರಹ, ಆಧ್ಯಾತ್ಮ, ಮೋಹ.. ಇಂತಹ `ಪ್ರೇಮನಾದ’ ವನ್ನು ಗಟ್ಟಿಯಾಗಿಟ್ಟುಕೊಂಡು, ಅದರೊಳಗಿನ `ಅಸ್ಮಿತೆ’ ಯನ್ನು ಇಮ್ಮಡಿಗೊಳಿಸುವ ರೀತಿ ವಿಶಿಷ್ಟವೆನಿಸಿವೆ.
ಬರೀ ಪ್ರೇಮ, ಕಾಮ, ವಿರಹಕ್ಕೆ ಸೀಮಿತವಾಗದೇ, ದಾರ್ಶನಿಕರಾದ ಬುದ್ಧ, ಬಸವ, ಅಂಬೇಡ್ಕರ್ ಅವರ ಕುರಿತು ಗಜಲ್ ರಚನೆಯಾಗಿಸಿದ್ದು, ಅಕ್ಕಮಹಾದೇವಿ, ಮೀರಾ, ದ್ರೌಪದಿ, ಸೀತೆ.. ಹೀಗೆ ಅನೇಕ ಪಾತ್ರಗಳನ್ನು ತಮ್ಮ ಗಜಲಿನ `ಟಂಕಸಾಲೆ’ ಯಲ್ಲಿ ಅಚ್ಚಾಗಿಸಿದ್ದಾರೆ.
`ಮರೆತುಬಿಡೆಂದು ಪದೇ ಪದೇ ನೀ ಯಾಕೆ ಅನ್ನುವದು ಏನು ಮರೆತುಬಿಡುವುದು’
ಮತ್ತು
`ಎದೆಬಡಿತ ಬಿಸಿಯುಸಿರು ತಾಗಲಿಲ್ಲ ನೀ ಹೇಳಬಹುದು ಏನು ಮರೆತು ಬಿಡುವುದು’
—
ಪ್ರಿಯ ಹೊನ್ಕಲ್‌ರೆ,
`ಬಣ್ಣ’ ಬಳಿದ `ಆಕಾಶ’ ಕಂಡು ಮನಸ್ಸು ಪ್ರಫುಲ್ಲವಾಯಿತು.
`ಪ್ರೇಮ’ ಕ್ಕೆ ಉದಾಹರಣೆಯಾಗಿರುವ ಮಹಲಿನ ನಿನಾದವು ಮಂತ್ರಮುಗ್ಧಗೊಳಿಸಿದ್ದಕ್ಕೆ ನಿಮಗೆ ಥ್ಯಾಂಕ್ಸ್ ಹೇಗೆ ಹೇಳಬೇಕು ಗೊತ್ತಿಲ್ಲ.
ಕೊನೆ ಸಿಪ್ :
ಗಜಲಿನ ಈ `ಮಜಲು’ ಏರುತ್ತಿರಲಿ..
-ಮಹಿಪಾಲರೆಡ್ಡಿ *ಮೈನಾ*
*9731666052*
ಒಳ್ಳೆಯ ಬರಹ