ಕಠಿಣ ಅಭ್ಯಾಸದಿಂದ ಉತ್ತಮ ಫಲಿತಾಂಶ
ಹೊಸೂರ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ
ಯಾದಗಿರಿ, ಶಹಾಪುರಃ ಅಭ್ಯಾಸ ಮಾಡಲು ಏಕಾಗ್ರತೆ ಬಹುಮುಖ್ಯ. ಆ ನಿಟ್ಟಿನಲ್ಲಿ ಮಕ್ಕಳು ತಮ್ಮ ಓದಿನ ಕಡೆ ಗಮನ ಹರಿಸಿ ಕಠಿಣ ಅಭ್ಯಾಸದಲ್ಲಿ ತೊಡಗಿಸಿಕೊಂಡಲ್ಲಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು ಎಂದು ಶಿರವಾಳ ಕ್ಲಸ್ಟರ್‍ನ ಸಂಪನ್ಮೂಲ ವ್ಯಕ್ತಿ ಗುತ್ತಪ್ಪ ಬಸವಗುಡಿ ಹೇಳಿದರು.
ತಾಲೂಕಿನ ಹೊಸೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 2018-19 ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಹಾಗೂ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಯಾವ ಖಾಸಗಿ ಶಾಲೆಗಿಂತ ಕಡಿಮೆ ಇಲ್ಲದಂತೆ ಗುಣಮಟ್ಟ ಶಿಕ್ಷಣ ನೀಡುವಲ್ಲಿ ಈ ಶಾಲೆ ತಾಲೂಕಿನಲ್ಲಿಯೇ ಅಗ್ರಗಣ್ಯ ಸ್ಥಾನ ಪಡೆದಿದೆ. ಇಂತಹ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳು ಇನ್ನೂ ಉತ್ತಮ ಅಭ್ಯಾಸ ಮಾಡಿ ಶಾಲಾ ಶಿಕ್ಷಕರಿಗೆ ಮತ್ತು ಪಾಲಕರಿಗೆ ಕೀರ್ತಿ ತಂದು ಕೊಡಬೇಕು. ಶೈಕ್ಷಣಿಕ ಗುನಮಟ್ಟ ಸುಧಾರಣೆಗಾಗಿ ಇಲ್ಲಿನ ಶಿಕ್ಷಕರು ಹಲವಾರು ಚಟುವಟಿಕೆಗಳನ್ನು ನಡೆಸುತ್ತಿರುವದು ಶ್ಲಾಘನೀಯ ಎಂದರು.
ಮುಖ್ಯೋಪಾಧ್ಯಾಯಿನಿ ಗೋವಿಂದಮ್ಮ ಪಲ್ಮಾರಿ ಮಾತನಾಡಿ, ಮಕ್ಕಳಲ್ಲಿ ಅಗಾಧ ಪ್ರತಿಭೆ ಅಡಗಿದ್ದು, ಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳು ಆಚರಿಸುವ ಮೂಲಕ ಸೂಕ್ತ ವೇದಿಕೆ ಕಲ್ಪಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ.
ಮನೆಯಲ್ಲೂ ಸಹ ಪಾಲಕರು ಟಿವಿಯಿಂದ ಹೊರಬಂದು ಮಕ್ಕಳಿಗೆ ಉತ್ತಮ ವಾತಾವರಣ ನಿರ್ಮಿಸಿಕೊಡಬೇಕು. ಮಕ್ಕಳ ಕಲಿಕೆಗೆ ಬೇಕಾದ ವಾತಾವರಣ ಇರದಿದ್ದರೆ ವಿಧ್ಯಾಭ್ಯಾಸ ಸಮರ್ಪಕವಾಗಿ ನಡೆಯುವುದು ಕಷ್ಟಕರ. ಪಾಲಕರು ಮನೆಯಲ್ಲಿ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯ ಕಲ್ಪಿಸುವ ಜೊತೆಗೆ ಪ್ರೋತ್ಸಾಹ ಬಹುಮುಖ್ಯವಿದೆ ಎಂದರು.
ಇದೇ ಸಂದರ್ಭದಲ್ಲಿ ಎನ್‍ಎನ್‍ಎಮ್‍ಎಸ್ ಪರೀಕ್ಷೆಯಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನಗಳಿಸಿ ಶಿಷ್ಯ ವೇತನಕ್ಕೆ ಆಯ್ಕೆಯಾದ 8 ನೇ ತರಗತಿ ವಿದ್ಯಾರ್ಥಿನಿಯನ್ನು ಸನ್ಮಾನಿಸಲಾಯಿತು. ಅಲ್ಲದೆ ಪ್ರತಿಭಾವಂತ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ನಂತರ ಜನಪದ ನೃತ್ಯ, ಕೋಲಾಟ, ಭರತ ನಾಟ್ಯ ಸೇರಿದಂತೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಶಿಕ್ಷಕ ಪರಸಪ್ಪ ಅಜಗಪ್ಪ ಶಾಲಾ ವರದಿ ವಾಚನ ಮಾಡಿದರು. ಎಸ್‍ಡಿಎಂಸಿ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಹೇಶ ಪತ್ತಾರ, ಸಂಗಣ್ಣ ಹುರಸಗುಂಡಗಿ, ಲೋಕಣ್ಣ ನುನ್ನಾ, ಬುರಾನಸಾಬ, ಗುರುಲಿಂಗಪ್ಪ, ದೇವಿಂದ್ರಪ್ಪ ವಿಶ್ವಕರ್ಮ. ಪ್ರಕಾಶ ಕುಲ್ಕರ್ಣಿ, ರವೀಂದ್ರನಾಥ ಮಹಾದೇವಪ್ಪ, ಬಸವರಾಜೇಶ್ವರಿ, ವೀಣಾ ಇತರರು ಉಪಸ್ಥಿತರಿದ್ದರು. ರಾಜಶೇಖರ ಪತ್ತಾರ ನಿರೂಪಿಸಿ ವಂದಿಸಿದರು.