ಆರೋಗ್ಯಕರ ಗ್ರಾಮ ನಿರ್ಮಾಣಕ್ಕೆ ನಾಗರಿಕರ ಸಹಭಾಗಿತ್ವ ಅಗತ್ಯ
ಹೋತಪೇಠ ಗ್ರಾಪಂಗೆ ಇಓ ಬಿರೇದಾರ ಭೇಟಿ
yadgiri, ಶಹಾಪುರಃ ಗ್ರಾಮೀಣ ಪ್ರದೇಶದ ಜನರಿಗೆ ಪೂರೈಸುವ ಶುದ್ಧ ಕುಡಿಯುವ ನೀರು ಕಲುಷಿತಗೊಳ್ಳದಂತೆ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಎಚ್ಚರಿಕೆ ವಹಿಸಿ, ಅಗತ್ಯ ಮುನ್ನೆಚ್ಚರಿಕೆವಹಿಸಬೇಕೆಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ ಬಿರೇದಾರ ತಿಳಿಸಿದರು.
ತಾಲೂಕಿನ ಹೋತಪೇಠ ಗ್ರಾಮ ಪಂಚಾಯತಿ ಕಚೇರಿಗೆ ಶುಕ್ರವಾರ ಭೇಟಿ ನೀಡಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಗ್ರಾಮ ಸ್ವಚ್ಛತೆ ಕುರಿತು ಗ್ರಾಮದ ಕೆಲವು ವಾರ್ಡ್‍ಗಳಲ್ಲಿನ ಚರಂಡಿ ನಿರ್ವಹಣೆ ಹಾಗೂ ಸ್ವಚ್ಛತೆ ಪರಿಶೀಲಿಸಿ ಅವರು ಮಾತನಾಡಿದರು.
ಮಳೆಗಾಲ ಆರಂಭವಾಗಿದ್ದು, ರಸ್ತೆ, ಚರಂಡಿ, ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಿ, ಸ್ವಚ್ಛತೆ ಕಾಪಾಡಿ, ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ, ಜನ-ಜಾನುವಾರುಗಳಿಗೆ ಕಚ್ಚುವುದರಿಂದ ಸಾಂಕ್ರಾಮಿಕ ರೋಗಗಳು ಬರುವುದನ್ನು ತಡೆಗಟ್ಟಲು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಗ್ರಾಮದಲ್ಲಿ ನೈರ್ಮಲ್ಯ ಕಾಪಾಡಲು ಆಧ್ಯತೆ ನೀಡಬೇಕೆಂದು ಸೂಚಿಸಿದರು.
ಗ್ರಾಮೀಣ ಪ್ರದೇಶದಲ್ಲಿನ ಕುಡಿಯುವ ನೀರಿನ ಪೈಪುಗಳು ರಸ್ತೆ, ಚರಂಡಿಗಳ ಮೂಲಕ ಹಾದು ಹೋಗಿ ಪೈಪ್ ಒಡೆದು ಕಲುಷಿತ ನೀರು ಪೂರೈಕೆಯಾಗಿ ಅದನ್ನು ಸೇವಿಸಿದ ಜನರಿಗೆ ವಾಂತಿ ಬೇಧಿಯಂತ ಸಮಸ್ಯೆಗಳು ನಡೆದಿವೆ. ಹೀಗಾಗಿ ಈ ಕುರಿತು ಪಂಚಾಯತ್ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದಕ್ಕೂ ಮೊದಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ನಿರ್ವಹಣೆ ಸಮಿತಿಯ ರಚನೆ, ಕರ್ತವ್ಯ ಹಾಗೂ ಜವಾಬ್ದಾರಿಗಳ ನಿರ್ವಹಣೆ ಕುರಿತು ಗ್ರಾಮ ಪಂಚಾಯಿತಿಯ ಸದಸ್ಯರು ಹಾಗೂ ಗ್ರಾಮಸ್ಥರೊಂದಿಗೆ ಸಭೆ ನಡೆಸಿದ ಅವರು, ಗ್ರಾಮದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ, ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವ ಕೆಲಸ ನಿರ್ವಹಣೆಯಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜತೆ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಹೇಳಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ನಿರ್ವಹಣೆ ಸಮಿತಿಯಲ್ಲಿ ಬಹುಪಾಲು ಮಹಿಳೆಯರು ಇದ್ದು, ಪ್ರತಿ ಎರಡು ತಿಂಗಳಿಗೊಮ್ಮೆ ಸಭೆ ಸೇರಿ ಗ್ರಾಮದ ಕುಡಿಯುವ ನೀರು ಪೂರೈಕೆ ಹಾಗೂ ನೈರ್ಮಲ್ಯ ನಿರ್ವಹಣೆ ಕುರಿತು ಪರಿಶೀಲನೆ ಮಾಡಿ, ಗ್ರಾಮದಲ್ಲಿನ ಕುಡಿಯುವ ನೀರಿನ ಮೂಲಗಳು ಕಲುಷಿತಗೊಳ್ಳದಂತೆ ಸಂರಕ್ಷಿಸಿ, ಕುಡಿಯುವ ನೀರನ್ನು ಪರೀಕ್ಷೆ ಮಾಡಿಸಲು ಸೂಕ್ತಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಈ ವೇಳೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಡಿವಾಳಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾನಿಭಾಯಿ, ಗ್ರಾಮ ಪಂಚಾಯಿತಿ ಸದಸ್ಯರಾದ ಅಮೃತರೆಡ್ಡಿ, ಕಾರ್ಯದರ್ಶಿ ಮಹಾದೇವಪ್ಪ ಕರವಸೂಲಿಗಾರ ಖಾಜೇಸಾಬ,…ಟಿಎಇ ಸಂಪತ್ತಕುಮಾರ, ಸಿಡಿಇಒ ದೇವರಾಜ, ಸುಧಾಕರ ರಡ್ಡಿ, ಇಬ್ರಾಹಿಂ ಕುರೇಷಿ, ಮಲ್ಲಿಕಾರ್ಜುನ, ದೇವಿಂದ್ರ, ನಿಂಗಪ್ಪ, ಅಮೋಗ್ಯಪ್ಪ, ರಾಜಶೇಖರ ಹೊಸಮನಿ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.