ಪ್ರವಾಹ ನಿಂತು ಹೋದ ಮೇಲೆ..ಸಮಸ್ಯೆಗಳ ಸರಮಾಲೆ
ಕೃಷ್ಣೆಯ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದ ಹೆದ್ದಾರಿ
ನೆರೆ ಹಾವಳಿಗೆ ನುಚ್ಚು ನೂರಾದ ರಾಜ್ಯ ಹೆದ್ದಾರಿ
ಮಲ್ಲಿಕಾರ್ಜುನ ಮುದ್ನೂರ
ಯಾದಗಿರಿ, ಶಹಾಪುರಃ ತಾಲೂಕಿನ ಕೊಳ್ಳೂರ(ಎಂ) ಸೇತುವೆ ಸಂಪೂರ್ಣ ಕೃಷ್ಣೆಯ ಪ್ರವಾಹದಲ್ಲಿ ಮುಳುಗಿದ್ದು, ಅಲ್ಲದೆ ಸುಮಾರು 1 ಕೀ.ಮೀಗೂ ಹೆಚ್ಚು ಹೆದ್ದಾರಿಯೇ ನೀರಿನ ರಭಸಕ್ಕೆ ಕೊಂಚಿಕೊಂಡು ಹೋಗಿದೆ.
ಇನ್ನೂ ನೀರು ಹರಿಯುತ್ತಿದ್ದು, ಸೇತುವೆ ಕಾಣುತ್ತಿಲ್ಲ. ಇದುವರೆಗೂ ನೀರಿನಲ್ಲಿಯೇ ಮುಳುಗಿದೆ. ಆದರೆ ದಿನ ಕಳೆದಂತೆ ರಸ್ತೆ ತೇಲುತ್ತಿದೆ. ಆದರೆ ಡಾಂಬರೀಕರಣದಿಂದ ಕೂಡಿದ್ದ ಹೆದ್ದಾರಿ ಸಂಪೂಣ ಹದಗೆಟ್ಟಿದ್ದು, ಕಂಕರ್‍ಗಳು ಮಾತ್ರ ತೇಲಿರುವದು ಕಂಡು ಬಂದಿದೆ. ಇದರಲ್ಲಿ ನಡೆದುಕೊಂಡು ಹೋಗುವದೇ ಕಷ್ಟ. ಇಂತದರಲ್ಲಿ ವಾಹನ ಸಂಚಾರ ಸಾಧ್ಯವಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಪ್ರವಾಹ ಇಳಿಮುಖವಾಗುತ್ತಿದ್ದಂತೆ ವಾರಗಟ್ಟಲೇ ರೌದ್ರವತಾರ ತಾಳಿದ್ದ ಕೃಷ್ಣೆ ಸದ್ಯ ಶಾಂತಚಿತ್ತದತ್ತ ಸಾಗುತ್ತಿದ್ದಾಳೆ. ಕೂಡಲೇ ನೀರಿನ ಹರಿವು ಒಳ ಸರಿದಂತೆ ರಸ್ತೆ ದುರಸ್ಥಿ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಬೇಕು ಎಂದು ಗ್ರಾಮದ ಅಂಬಲಪ್ಪ ಸುಣ್ಣ ಮನವಿ ಮಾಡಿದ್ದಾರೆ.
ಗ್ರಾಮದ ಸೇತುವೆ ಇನ್ನೂ ಕಾಣುತ್ತಿಲ್ಲ. ಎಷ್ಟೊಂದು ದೂರ, ಎತ್ತರಕ್ಕೆ ನೀರು ಹರಿದು ಬಂದಿದ್ದವು ಎಂಬುದು ನೆನಪಿಸಿಕೊಂಡಲ್ಲಿ ಭಯವಾಗುತ್ತದೆ. ಇಡಿ ಗ್ರಾಮವನ್ನು ಕೃಷ್ಣೆ ಸುತ್ತುವರೆದಿದ್ದಳು. ಪ್ರಸ್ತುತ ಕೃಷ್ಣೆ ತಣ್ಣಗಾಗಿರುವದು ಸಮಧಾನ ತಂದಿದೆ.
ಆದರೆ ನೂರಾರು ರೈತರ ಸಾವಿರಾರು ಎಕರೆ ಕೃಷಿ ಭೂಮಿ ಹಾಳಾಗಿದೆ. ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಹಯ್ಯಾಳ(ಬಿ) ಯಕ್ಷಿಂತಿ. ಟೊಣ್ಣೂರ, ಗೌಡೂರ, ಕೊಳ್ಳೂರ(ಎಂ) ಸೇರಿದಂತೆ ವಡಿಗೇರಿ ತಾಲೂಕಿಕ ಹಲವಾರು ಗ್ರಾಮಗಳು ಪ್ರವಾಹದ ತುತ್ತಿಗೆ ಒಳಗಾಗಿ ನೂರಾರು ಕುಟುಂಬಗಳು ಸಂಕಷ್ಟದಲ್ಲಿವೆ. ಬದುಕಿನ ಬಂಡಿ ಕಟ್ಟಿಕೊಳ್ಳಲು ಪರಿತಪಿಸುವಂತಾಗಿದೆ. ಕೂಡಲೇ ಜಿಲ್ಲಾಡಳಿತ ಅಂತಹ ಕುಟುಂಬಗಳನ್ನು ಗುರುತಿಸಿ ಸಹಾಯ ಸಹಕಾರ ನೀಡಬೇಕಿದೆ ಎಂಬುದು ಗ್ರಾಮಸ್ಥರ ಮನವಿಯಾಗಿದೆ.
ಪ್ರವಾಹದ ಪ್ರಹಾರದಿಂದ ರಸ್ತೆ ನುಚ್ಚು ನೂರು..
ಗ್ರಾಮದ ಸೇತುವೆ ಬಳಿ. ಪ್ರವಾಹ ನೀರು ಇಳಿಮುಖವಾದಂತೆ. ಕೃಷ್ಣೆಯ ರೌದ್ರವತಾರದಿಂದ ಉಂಟಾದ ಅಪಾರ ನಷ್ಟ. ಕಣ್ಣಿಗೆ ಗೋಚರವಾಗುತ್ತಿದೆ. ಹೊಲಗಳಲ್ಲಿ ಬೆಳೆಗಳು ಕೊಳೆತುಹೋಗಿವೆ. ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ನೀರಿನ ಹರಿವು ಕಡಿಮೆಯಾದಂತೆ ಒಂದೊಂದೆ ಸಮಸ್ಯೆಗಳು ಜಾಸ್ತಿಯಾಗುತ್ತಿವೆ. ಜಿಲ್ಲಾಡಳಿತ ಈ ಸಂದರ್ಭದಲ್ಲಿ ಹೆಚ್ಚಿನ ನೆರವು ಸಹಾಯ ನೀಡಬೇಕಾದ ಅಗತ್ಯವಿದೆ.
–ಶಿವರಡ್ಡಿ ಪಾಟೀಲ್ ಕೊಳ್ಳೂರ.