ಮಕ್ಕಳ ಅರ್ಧವಾರ್ಷಿಕ ರಜೆಃ ಸದುಪಯೋಗವಾಗಲು ಅನುಸರಿಸಿ ಹೀಗೆ.!
ಜೊತೆಗಿದ್ದು ಮಕ್ಕಳಿಗೆ ಕ್ರಿಯಾತ್ಮಕ, ವ್ಯಾವಹಾರಿಕ ಜ್ಞಾನ ಕಲ್ಪನೆ ಮೂಡಿಸಿ
ಮಕ್ಕಳಿಗೆ ಈಗ ಅರ್ಧವಾರ್ಷಿಕ ಪರೀಕ್ಷೆ ಮುಗಿದಿವೆ. ದೀಪಾವಳಿ ಹಬ್ಬಕ್ಕೆಂದು ರಜೆಯೂ ಶುರುವಾಗಿದೆ. ಮನೆಯಲ್ಲಿ ಟಿವಿ ಮುಂದೆ ಕುಳಿತುಕೊಂಡರೆ ಶುರುವಾಗುತ್ತೆ ನೋಡಿ ರಿಮೋಟ್ ಸಲುವಾಗಿ ಜಗಳ. ಜಗಳ ಬಗೆಹರಿಸುವುದರಲ್ಲಿ ತಲೆ ಕೆಟ್ಟು ಹೋಗುತ್ತೆ. ಮಗಳಿಗೆ ಬೈದರೆ ಮುಖ ಉಬ್ಬಿಸಿಕೊಂಡು ಕೋಣೆ ಸೇರುತ್ತಾಳೆ. ಎಷ್ಟು ಕರೆದ್ರೂ ಊಟಕ್ಕೆ ಬರೋದಿಲ್ಲ. ಮಗನ್ನ ಬೈದರೆ ನೀನು ಯಾವಾಗಲೂ ಅವಳ ಪರ ನಾನ್ಯಾವಾಗ ಟಿವಿ ನೋಡೋದು? ಎಂದು ಜೋರಾಗಿ ಚೀರ್ತಾನೆ. ಬೇಸಿಗೆ ಸೂಟಿ ಆದ್ರ ಬೇಸಿಗೆ ಶಿಬಿರಕ್ಕೆ ಹಾಕಿ ಕೈ ತೊಳಕೊಳ್ಳಬಹುದಿತ್ತು. ಈ ಅಕ್ಟೋಬರ್ ಸೂಟಿಯೊಳಗ ಹಿಡಿಯೂದು ತ್ರಾಸ ಆಗೈತಿ ಏನು ಮಾಡೋದು ತಿಳಿಯುತ್ತಿಲ್ಲ. ಎಂದಳು ಗೆಳತಿ ಸುಮತಿ.
ಹೌದು ಸುಮತಿ ಹೇಳಿದಂತೆ ಮಧ್ಯಂತರ ರಜೆ ಕಳೆಯೋದನ್ನು ಬಹಳಷ್ಟು ಜನ ಪಾಲಕರು ಯೋಜಿಸುವುದೇ ಇಲ್ಲ. ಸಿಗುವ ಹದಿನೈದು ದಿನಗಳಲ್ಲಿ ಮಕ್ಕಳು ಏನು ಮಹಾ ಮಾಡಿಯಾರು? ಎನ್ನುವ ಉದಾಸೀನತೆ ಇದಕ್ಕೆ ಕಾರಣ ಎನಿಸುತ್ತದೆ. ಹೀಗಾಗಿ ಮಕ್ಕಳು. ಎಂದಿನಂತೆ ಕಂಪ್ಯೂಟರ್, ವಿಡಿಯೋ ಗೇಮ್ಗಳಲ್ಲಿ ಮುಖ ಹುದುಗಿಸಿಕೊಂಡು ಕುಳಿತುಕೊಳ್ಳುತ್ತವೆ. ಬೇಸರವಾದ ಮೇಲೆ ಇಲ್ಲ ಸಲ್ಲದ ವಿಚಾರ ತೆಗೆದು ಜಗಳವಾಡುತ್ತವೆ.ರಜೆ ಎಷ್ಟೇ ದಿನವಿನವಿರಲಿ ಅದರ ಸದುಪಯೋಗ ಪಡಿಸಿಕೊಳ್ಳುವಂತೆ ಪಾಲಕರಾದವರು ಮೊದಲೇ ಯೋಚಿಸಿ ಯೋಜಿಸಿಕೊಂಡಿದ್ದರೆ ಚೆನ್ನ.
ನೀವು ಮಾಡಬೇಕಾದದ್ದೇನು..?
ಕೇವಲ ಕೆಲವೇ ದಿನಗಳ ರಜೆ ಎಂಬ ನಿರ್ಲಕ್ಷ್ಯ. ಬೇಡ. ಸಮಯ ಅಮೂಲ್ಯವಾದುದು ಅದು ಒಂದು ದಿನವಾದರೂ ಸರಿ ಒಂದು ತಾಸಾದರೂ ಸರಿ. ಸಮಯದ ಸದುಪಯೋಗ ಹೇಳಿ ಕೊಡಲು ಸಾಮಾಜಿಕ ಸಂಬಂಧ ವೃದ್ಧಿಗೆ ನೆರವಾಗುವ ಸದವಕಾಶ ಇದನ್ನು ಬಳಸಿಕೊಳ್ಳಿ. ಅಜ್ಜ –ಅಜ್ಜಿಯ ಮನೆಗೆ ಮಾಮ ಚಿಕ್ಕಪ್ಪ ದೊಡ್ಡವ್ವನ ಮನೆಗೆ ಕಳಿಸಿ. ಇಲ್ಲವೇ ಕುಟುಂಬ ಸಮೇತ ಪ್ರವಾಸಕ್ಕೆ ಹೋಗಿ ಬನ್ನಿ. ಇದರಿಂದ ಸಾಮಾಜಿಕ ಸಂಬಂಧಗಳು ಮತ್ತು ಇತರರೊಂದಿಗೆ ಹೊಂದಿಕೊಂಡು ಬದುಕುವ ಕಲೆಯನ್ನು ಕಲಿಸಿದಂತಾಗುತ್ತದೆ.
ಈಗ ತಾನೆ ಪರೀಕ್ಷೆ ಮುಗಿಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟ ಮಕ್ಕಳಿಗೆ ಮತ್ತೆ ಅದೇ ಪಠ್ಯ ಪುಸ್ತಕಗಳನ್ನು ಓದಲು ಒತ್ತಾಯಿಸಬೇಡಿ. ಶಾಲೆಯಲ್ಲಿ ಮನೆಗೆಲಸ ಕೊಟ್ಟಿದ್ದರೆ ಮಾಡಲು ಸಹಕರಿಸಿ. ಕತೆ ಕವಿತೆ ಪುಸ್ತಕಗಳನ್ನು ಓದಲು ಪ್ರೋತ್ಸಾಹಿಸಿ . ಇದರಿಂದ ಮಕ್ಕಳನ್ನು ಸಾಹಿತ್ಯದ ಉತ್ಸಾಹಿ ಓದುಗರನ್ನಾಗಿ ತಯಾರಿಸಲು ಸಾಧ್ಯ. ಇದಲ್ಲದೇ ಭಾಷಾ ಜ್ಞಾನ, ಬದುಕಿನಲ್ಲಿ ಭಾವನೆಗಳ ಮಹತ್ವದ ಪಾಠವನ್ನು ಹೇಳಿ ಕೊಟ್ಟಂತಾಗುತ್ತದೆ. ಓದಿನ ಬಗೆಗಿರುವ ಆಲಸ್ಯತನವನ್ನು ಹೋಗಲಾಡಿಸಲು ಇದು ಉಪಯೋಗಕಾರಿ. ಚಿಕ್ಕ ಚಿಕ್ಕ ಗಾತ್ರದಲ್ಲಿ ದೊರೆಯುವ ಮಹಾನ ಪುರುಷರ ಜೀವನ ಚರಿತ್ರೆ ಓದಲು ಕೊಡಿ. ಇದರಿಂದ ಉತ್ತಮ ಚಾರಿತ್ರ್ಯದ, ಸಾಮಾಜಿಕ ಸೇವೆಯ ನಿದರ್ಶನಗಳನ್ನು ತೋರಿದಂತಾಗುತ್ತದೆ. ಮನಸ್ಸಿದ್ದಲ್ಲಿ ಸಾಧನೆಗೆ ಮಾರ್ಗ ತಾನಾಗಿಯೇ ಸಿಗುತ್ತದೆ ಎಂಬುದನ್ನು ಅರಿತುಕೊಳ್ಳುತ್ತಾರೆ. ಸಾಧ್ಯವಾದರೆ ನಿಮ್ಮೊಂದಿಗೆ ವಾಚನಾಲಯಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಮಕ್ಕಳಿಗಾಗಿ ಲಭ್ಯವಿರುವ ನಿಯತಕಲಿಕೆಗಳನ್ನು ಓದುವಂತೆ ಪ್ರೇರೆಪಿಸಿ.
ನೀವು ವಿದ್ಯುತ್ ಬಿಲ್ ಕಟ್ಟಲು ಹೊರಟಿದ್ದರೆ, ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ನತ್ತ ಪಯಣ ಬೆಳೆಸಿದರೆ ಅವರನ್ನೂ ಕರೆದುಕೊಂಡು ಹೋಗಿ ತರಕಾರಿ ಮಾರುಕಟ್ಟೆಗೂ ಅವರು ನಿಮ್ಮೊಂದಿಗೆ ಬರಲಿ. ಇದರಿಂದ ಆರ್ಥಿಕ ಸೇವೆಗಳ ಕುರಿತು ಪ್ರಾಯೋಗಿಕ ಜ್ಞಾನ ನೀಡಿದಂತಾಗುತ್ತದೆ. ಜನರೊಂದಿಗೆ ಹೇಗೆ ವ್ಯವಹರಿಸಬೇಕೆಂಬುದರ ಅರಿವೂ ಮೂಡುತ್ತದೆ.
ಚಿತ್ರ ತೆಗೆಯುವುದು ಬಣ್ಣ ತುಂಬುವುದು, ಹಾಡು ನೃತ್ಯ ರಂಗೋಲಿ ಹೇಳಿಕೊಡಬಹುದು. ತಾವೇ ಮಾಡಿ ಕಲಿಯುವುದರಿಂದ ಮಕ್ಕಳು ಸಂತೋಷ ಪಡುತ್ತಾರೆ. ಮತ್ತು ಆಸಕ್ತಿ ಹೆಚ್ಚಿಸಿಕೊಳ್ಳುತ್ತಾರೆ. ಗಂಡು ಮಕ್ಕಳಿಗೆ ಕ್ರಿಕೆಟ್ ವ್ಹಾಲಿಬಾಲ್ ಬ್ಯಾಡ್ಮಿಂಟನ್ ಆಟ ಕಲಿಸಬಹುದು.
ಮನೆಯ ಸಣ್ಣ ಪುಟ್ಟ ಕೆಲಸಗಳನ್ನು ನಿಮ್ಮ ಸುಪುರ್ದಿಯಲ್ಲಿ ಮಾಡಲು ಹೇಳಿ. ಮನೆಯ ಮುಂದಿನ ಹೂದೋಟಕ್ಕೆ ನೀರುಣಿಸುವುದು. ಹೂದಾನಿಗಳನ್ನು ಸ್ವಚ್ಛಗೊಳಿಸುವುದು. ಬಟ್ಟೆಗಳನ್ನು ಮಡಚಿಟ್ಟುಕೊಳ್ಳುವುದು. ಕೋಣೆಯನ್ನು ನೀಟಾಗಿಡುವುದು. ಕಸ ಗೂಡಿಸುವುದು. ಸೋಫಾ ಕುರ್ಚಿ ಮೇಜು ಒರೆಸುವುದು ಮಕ್ಕಳು ಸ್ವಲ್ಪ ದೊಡ್ಡವರಾಗಿದ್ದರೆ ತರಕಾರಿ ಹೆಚ್ಚಿಕೊಡಲು ಚಪಾತಿ ಲಟ್ಟಿಸಲು ದೋಸೆ ಹುಯ್ಯಲು ಹೇಳಬಹುದು. ಹೀಗೆ ಅಡುಗೆಗೆ ಸಹಾಯ ಮಾಡುವಂತೆ ಪ್ರೇರೇಪಿಸಿದರೆ ಅನಿವಾರ್ಯ ಸಂದರ್ಭಗಳಲ್ಲಿ ಅವರಿಂದ ಸ್ವಯಂ ನಳಪಾಕ ಸಾಧ್ಯವಾಗುವುದು. ಅಡುಗೆ ಕೆಲಸಗಳಲ್ಲಿ ಸಹಾಯ ಮಾಡುವಾಗ ತುಸು ಹೆಚ್ಚು ಕಮ್ಮಿ ಆದರೆ ಬಯ್ಯಬೇಡಿ. ಬದಲಾಗಿ ಸಲಹೆಗಗಳನ್ನು ಹೇಳಿ ಕೊಡಿ. ಹಬ್ಬದ ದಿನ ತಳಿರು ತೋರಣ ಕಟ್ಟಲು ಹೇಳಿ ದೇವರ ಪೂಜೆಗೆ ಸಹಾಯ ಮಾಡಲು ತಿಳಿಸಿ. ಪೂಜೆ ಮಾಡುವಾಗ ನಿಮ್ಮೊಂದಿಗೆ ಪ್ರಾರ್ಥನೆ ಮಂಗಳಾರತಿ ಪದಗಳನ್ನು ಹಾಡಲು ಪ್ರೋತ್ಸಾಹಿಸಿ. ಪ್ರಸಾದ ಹಂಚಲು ಕೊಡಿ. ಊಟ ಬಡಿಸುವುದನ್ನು ಹೇಳಿಕೊಡಿ.
ಸಾಯಂಕಾಲದ ವೇಳೆ ಮನೆಯ ಹೊರಗೆ ಅಥವಾ ಉದ್ಯಾನವನಗಳಲ್ಲಿ ಅಕ್ಕ -ತಮ್ಮ ಅಣ್ಣ_ತಂಗಿ ಇಲ್ಲವೇ ಗೆಳೆಯ/ತಿಯರೊಂದಿಗೆ ಆಟವಾಡಲು ಬಿಡಿ ಇದು ದೈಹಿಕವಾಗಿ ವ್ಯಾಯಾಮ ಒದಗಿಸುವುದರ ಜೊತೆಗೆ ಸ್ನೇಹ ಭಾವ ಬೆಳೆಸುತ್ತದೆ. ಕೂಡಿ ಆಡಿ ನಲಿಯುವುದರಲ್ಲಿಯ ಮಜಾ ಅವರಿಗೆ ಮರು ಚೈತನ್ಯ ನೀಡುವುದು. ಚದುರಂಗ ಪದ ಬಂಧ ಸುಡೋಕುದಂತಹ ಆಟ ಕಲಿಸಿಕೊಡಿ ಇವು ಮೆದುಳಿಗೆ ಕಸರತ್ತು ನೀಡುತ್ತವೆ.
ಮಕ್ಕಳಿಗೆ ನಮ್ಮ ಪ್ರೀತಿ ಕಾಳಜಿ ಅವರಿಗೆ ಅರ್ಥವಾಗುವಂತಿರಲಿ ಅವರೊಂದಿಗೆ ಸ್ನೇಹಿತರಂತೆ ವರ್ತಿಸೋಣ. ಅಗ ಕಷ್ಟವೆನಿಸಿರುವ ಮಕ್ಕಳ ರಜೆಯ ನಿರ್ವಹಣೆಯನ್ನು ದಕ್ಷತೆಯಿಂದ ನಿಭಾಯಿಸಬಹುದು. ಅಲ್ಲದೇ ಮಕ್ಕಳನ್ನು ಬದುಕಿನ ಹೊಸ ಪುಟಗಳಿಗೆ ಸಜ್ಜುಗೊಳಿಸಬಹುದು. ತಪ್ಪಿಸಿಕೊಂಡ ಕರ್ತವ್ಯವು ವಾಪಾಸು ಮಾಡದ ಸಾಲದಂತೆ ಎಂಬುದನ್ನು ನೆನಪಿಲ್ಲಿಟ್ಟುಕೊಂಡು ನಮ್ಮ ಕರ್ತವ್ಯ ಮೆರೆಯೋಣವಲ್ಲವೇ?
–ಜಯಶ್ರೀ ಜೆ.ಅಬ್ಬಿಗೇರಿ. ಲೇಖಕರು.
ಆಂಗ್ಲ ಉಪನ್ಯಾಸಕರು.
ಹಿರೇಬಾಗೇವಾಡಿ, ಬೆಳಗಾವಿ.
Very nice article
ಅತ್ಯುತ್ತಮ ಲೇಖನ
ಪೋಷಕರಿಗೆ ಉಪಯುಕ್ತ ಸಲಹೆ