ಕುಖ್ಯಾತ ದರೋಡೆಕೋರರ ಸೆರೆಃಪಿಸ್ತೂಲ್ ವಶ
ಇಬ್ಬರು ಕುಖ್ಯಾತ ಅಂತರಾಜ್ಯ ಕಳ್ಳರ ಬಂಧನ
ಹುಬ್ಬಳ್ಳಿ: ಇಲ್ಲಿನ ಉಪ ನಗರ ಪೊಲೀಸರು ಇಂದು ಇಬ್ಬರು ಅಂತರಾಜ್ಯ ದರೋಡೆಕೋರರನ್ನು ಬಂಧಿಸುವ ಮೂಲಕ ಭರ್ಜರಿ ಭೇಟೆಯಾಡಿದ್ದಾರೆ. ಇತ್ತೀಚೆಗೆ ಈ ದರೋಡೆಕೋರರು ಮುಖಕ್ಕೆ ಕಪ್ಪು ಬಟ್ಟೆ ಧರಿಸಿ ದರೋಡೆ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು.
ಎಮ್.ಟಿ.ಮಿಲ್ ಬಳಿ ನಿನ್ನೆ ತಡರಾತ್ರಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಪ್ರಕಾಶ್ ಅಲಿಯಾಸ್ ಪಕ್ಯಾ ಪಾಟೀಲ್ (32), ರವಿ ಧನರಾಜ್ (32)ರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ಇವರು ಅಂತರಾಜ್ಯ ಕುಖ್ಯಾತ ದರೋಡೆಕೋರರು ಎಂಬುದು ತಿಳಿದು ಬಂದಿದೆ. ಪರಿಣಾಮ 10 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದಲ್ಲಿ 32 ಕ್ಕೂ ಹೆಚ್ಚು ಕಳ್ಳತನ, ದರೋಡೆ ಕೃತ್ಯ ಎಸಗುವ ಮೂಲಕ 24 ಲಕ್ಷ ಮೌಲ್ಯದ 832 ಗ್ರಾಂ ಚಿನ್ನ ಆಭರಣ, ಮತ್ತು ಒಂದು ಕೇಜಿ ಬೆಳ್ಳಿ ಸೇರಿದಂತೆ ಒಂದು ಮೇಡ್ ಇನ್ ಯುಎಸ್ಎ ಪಿಸ್ತೂಲ್, (7.65 ಎಂ.ಎಂ) ಮೂರು ಜೀವಂತ ಗುಂಡುಗಳನ್ನು ಬಂಧಿತರಿಂದ ವಶಕ್ಕೆ ಪಡೆಯಲಾಗಿದೆ. ಅಲ್ಲದೆ ಮನೆಗಳ್ಳತನಕ್ಕೆ ಬಳಸುತ್ತಿದ್ದ ಬಜಾಜ್ ಬೈಕ್ , ನಾಲ್ಕು ಮೊಬೈಲ್ ಸೇರಿದಂತೆ ಇತರೆ ಮಾರಕಾಸ್ತ್ರಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ಉಪ ಪೋಲೀಸ್ ಆಯುಕ್ತ ಪಿ.ಎಸ್ .ನ್ಯಾಮಗೌಡ ಮಾಧ್ಯಮದವರೊಂದಿಗೆ ಮಾತನಾಡಿ ಈ ಆರೋಪಿಗಳು ಮೂರು ರಾಜ್ಯಗಳ ಪೊಲೀಸರಿಗೆ ಬೇಕಾಗಿದ್ದರು. ಕಳೆದ ಒಂದು ತಿಂಗಳಿಂದ ನಗರದ ಜನತೆಗೆ ತಲೆ ಬಿಸಿ ಮಾಡಿದ್ದರು. ನಿನ್ನೆ ತಡರಾತ್ರಿ ಪೊಲೀಸರ ಸೂಕ್ಷ ದಾಳಿಯಿಂದ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದಿದ್ದಾರೆ. ಹುಬ್ಬಳ್ಳಿ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.