ವಿನಯ ವಿಶೇಷ
ವಿಮೋಚನಾ ದಿನಾಚರಣೆ: ಪತ್ರಕರ್ತ ಷೋಯಿಬುಲ್ಲಾಖಾನ್ ಬಲಿದಾನದ ಕಥೆ
ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ: ಪತ್ರಕರ್ತ ಷೋಯಿಬುಲ್ಲಾಖಾನ್ ಬಲಿದಾನದ ಕಥೆ
ನಮ್ಕಡೆ ವರ್ಸದಾಗ ಮೂರ್ಸಲ ಝಂಡಾ ಹಾರಿಸ್ತೀವಿ ನೋಡ್ರಿ. ಯಾಕಂದ್ರ, ನಮ್ ಹೈದ್ರಾಬಾದ್ ಕರ್ನಾಟಕಕ್ ಮಾತ್ರ ಒಂದ್ ವರ್ಸಾ ತಡಾಗಿ ಸ್ವಾತಂತ್ರ್ಯ ಸಿಕ್ಕಾದಲ್ರಿ ಸಾಹೇಬ್ರ ಅದ್ಕ. ಪಂದ್ರಾ(15) ಆಗಷ್ಟ್ ಗೊಮ್ಮಿ ಸ್ವಾತಂತ್ರ್ರೋತ್ಸವ ಮಾಡ್ತೀವಿ. ಚಬ್ಬೀಸ್ (26) ಜನೇವರಿಗೊಮ್ಮಿ ಗಣರಾಜ್ಯೋತ್ಸವ ಆಚರಿಸ್ತೀವಿ. ಮತ್ತ ಸತ್ರಾ(17) ಸೆಪ್ಟಂಬರ್ ಗೊಮ್ಮಿ ನಮ್ ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಅಂತ ಆಚರಿಸ್ತೀವ್ರೀ. ಅದಾ ನಮ್ಗ ಇಂಪಾರ್ಟೆಂಟ್.!
ಯಾಕಂದ್ರ, ಇಡೀ ದೇಶಕ್ಕ ಸ್ವಾತಂತ್ರ್ಯ ಸಿಕ್ರೂನೂ ನಮ್ ಹೈದ್ರಾಬಾದ್ ಕರ್ನಾಟಕಕ್ಕ ಮಾತ್ರ ಸ್ವಾತಂತ್ರ್ಯ ಸಿಕ್ಕಿದ್ದು ಸತ್ರಾ(17) ಸೆಪ್ಟಂಬರ್ 1948ಕ್ರೀ. ಅದ್ಕ ನಮ್ ಕಡೆ ವರ್ಸದಾಗ ಮೂರು ಸಲ ತಿರಂಗಾ ಹಾರಸ್ತೀವಿ ನೋಡ್ರಿ. ಬಿಟ್ರಿಷ್ರು ಸ್ವಾತಂತ್ರ್ಯ ಕೊಟ್ ಹೋಗೋ ಟೈಮ್ನ್ಯಾಗ ಈಗಿನ ಹೈದ್ರಾಬಾದ್ ಕರ್ನಾಟಕ ಅಂದ್ರ ಆಗಿನ ಹೈದ್ರಾಬಾದ್ ಸಂಸ್ಥಾನ ನಿಜಾಮ ಸುಲ್ತಾನ ಉಸ್ಮಾನ್ ಅಲಿ ಬಹದ್ದೂರ್ ಕೈಯಾಗ ಇತ್ತಂತ್ರಿ. ದೇಸೀ ಸಂಸ್ಥಾನಗಳೊಳಗಾ ಭಾಳ ದೊಡ್ಡ ಸಂಸ್ಥಾನ ಆಗಿತ್ತಂತ್ರಿ ಇದು. ಆ ಬ್ರಿಟಿಷ್ನೋರ್ ಭಾರತ ಬಿಟ್ಟೋಗಾಗ ಸುಮ್ನೇ ಹೋಗಿರ್ಲಿಲ್ರೀ. ದೇಸೀ ಸಂಸ್ಥಾನಗಳು ಹೆಂಗಾವ ಹಂಗೆ ಇರ್ಬೇಕು ಅಂತ ಒಂದ್ ಕಂಡಿಷನ್ ಬ್ಯಾರೇ ಹಾಕಿದ್ರಂತ್ರಿ. ನಿಜಾಮ ಸುಲ್ತಾನ ಬಿಡಬೇಕಲ್ರೀ ಅದ್ನೇ ಹಿಡ್ಕೊಂಡು ಕುಂತ್ನಂತ್ರಿ. ಕಾಶೀಂರಜವಿ ಅಂಬವ್ನ ಡೈರೆಕ್ಷನ್ ತೊಗೊಂಡು ಇಡೀ ಭಾರತದ ಚಕ್ರವರ್ತಿ ಆಗೋ ಆಸಿ ಇಟ್ಕೊಂಡಿದ್ನಂತ್ರಿ ಆ ಸುಲ್ತಾನ. ಅದ್ಕ ಸ್ವಾತಂತ್ರ್ಯ ಭಾರತದಾಗ ಸೇರ್ಲಾಕ ಒಲ್ಯ ಅಂದ್ಬಿಟ್ನಂತ್ರಿ.
ಹಿಂಗಾಗಿ, ಭಾರತಕ್ಕ ಸ್ವಾತಂತ್ರ್ಯ ಸಿಕ್ಕಮ್ಯಾಲ ಹೈದ್ರಾಬಾದ್ ಕರ್ನಾಟಕದ ಮಂದಿ ಮತ್ತೊಂದು ವರ್ಸದ ತನಕಾ ನಿಜಾಮ ಸುಲ್ತಾನನ ವಿರುದ್ಧ ಹೋರಾಟ ಮಾಡ್ಬೇಕಾತಂತ್ರಿ. ಅವಾಗ್ನೂ ಮಸ್ತ್ ಬಲಿದಾನ ಆಗ್ಯಾವ್ರಿ. ಅದರಾಗ ಒಬ್ಬ ಒಳ್ಳೇ ಪತ್ರಕರ್ತ ನಿಜಾಮ ಸುಲ್ತಾನನ ಎದರ ಹಾಕ್ಕೊಂಡು ಪ್ರಾಣಾನೇ ಬಲಿಕೊಟ್ನಂತ್ರಿ. ಅವ್ನ ಕಥಿ ಹೇಳ್ತೀನಿ ಕೇಳ್ರಿಲ್ಲಿ…
ಷೋಯಿಬುಲ್ಲಾ ಖಾನ್ ಅಂಥೇಳಿ ಆ ಪತ್ರಕರ್ತನ ಹೆಸ್ರು. ಅವ್ರಪ್ಪ ಹಬೀಬುಲ್ಲಾ ಖಾನ್ ನಿಜಾಮನ ಸರ್ಕಾರದಾಗ ಪೊಲೀಸ್ ಜವಾನ ಆಗಿದ್ನಂತ್ರಿ. ನಿಯತ್ತಿನಿಂದ ಕೆಲ್ಸ ಮಾಡೋ ಹಬೀಬುಲ್ಲಾ ಭಾಳ ಒಳ್ಳೇ ಮನ್ಷಾ ಇದ್ನಂತ್ರಿ. ಅಪ್ಪನೇ ಒಳ್ಳೇ ಮನ್ಷಾ ಅಂದ್ಮ್ಯಾಲ ಮಗ ಒಳ್ಳೇಂವ ಇದ್ದ ಇರ್ತಾನ ಹೌದಿಲ್ರೀ. ಅಂಥ ಹಬೀಬುಲ್ಲಾಗ ನಾಲ್ಕು ಮಂದಿ ಮಕ್ಕಳಾಗಿದ್ರೂ ಒಂದೂ ಬದುಕುಳಿದಿದ್ದಿಲ್ಲಂತ್ರಿ ಪಾಪ. ಆದ್ರ, ಒಂದ್ಸಲ ಮಹಾತ್ಮಾ ಗಾಂಧೀಜಿ ಅವ್ರು ರೈಲಿನಲ್ಲಿ ಹೋಗ್ಬೇಕಾದ್ರ ಈ ಹಬೀಬುಲ್ಲಾ ಅದೇ ಜಾಗ್ದಾಗ ಡ್ಯೂಟಿ ಮಾಡ್ತಿದ್ನಂತ್ರಿ. ಮಹಾತ್ಮ ಗಾಂಧೀಜಿಗಿ ಅಗ್ಧಿ ಸಮೀಪದಿಂದ ಭೆಟ್ಟಿ ಮಾಡಿ ಮನಸಿನ್ಯಾಗೇ ಕೈ ಮುಗಿದಿದ್ನಂತ್ರಿ. ಅವತ್ ಫುಲ್ ಖುಷ್ಯಾಗಿ ಮನಿಗಿ ಬಂದವ್ನಿಗೆ ಹೆಂಡತಿ ಗಂಡು ಮಗು ಹಡದ ಸುದ್ದಿ ಕೇಳಿ ಬೆರಗಾಗಿತ್ತಂತ್ರಿ. ಮಗನಿಗಿ ನೋಡಿದವ್ನೇ ‘ಏ ತೋ ಗಾಂಧೀ ಹೀ ಹೈ’ ಅಂದ್ಬಿಟ್ನಂತ್ರಿ’. ಹಬೀಬುಲ್ಲಾ. ಖರೇವಂದ್ರ ಆ ಪಾರ ಹೈದ್ರಾಬಾದಿನ ಪಾಲಿಗೆ ಮುಂದ ಗಾಂಧೀನೇ ಆದ್ನಂತ ನೋಡ್ರೀ.
ಷೋಯಿಬುಲ್ಲಾ ಖಾನ್ ಚೊಲೋ ಓದಿ ಬಿ.ಎ ಡಿಗ್ರಿ ಪಡದ್ನಂತ್ರಿ. ಆಮ್ಯಾಲ ಪತ್ರಕರ್ತನಾಗಿ ಭಾರೀ ಕೆಲ್ಸ ಮಾಡ್ಯಾನ್ರೀ. 1942ರಾಗ ಎಮ್.ನರಸಿಂಗರಾವ್ ಅವ್ರ ಸಂಪಾದಕತ್ವದಾಗ ಶುರುವಾಗಿದ್ದ ‘ರೈಯತ್’ ಅನ್ನೋ ಉರ್ದು ಪತ್ರಿಕ್ಯಾಗ ರಿಪೋರ್ಟರ್ ಆಗಿದ್ನಂತ್ರಿ. ಸ್ವಾತಂತ್ರ್ಯ ಭಾರತದಾಗ ಹೈದ್ರಾಬಾದ್ ಕರ್ನಾಟಕನೂ ಸೇರ್ಬೇಕು. ಅರಸೊತ್ತಿಗೆ ತಗೊಳ್ಳೋದು ಬಂದ್ ಆಗ್ಬೇಕು. ಪ್ರಜಾ ಪ್ರಭುತ್ವ ಜಾರಿಗೆ ಬರ್ಬೇಕು. ಮಾಮೂಲಿ ಮನ್ಷಾನೂ ಆರಾಮಾಗಿ ಬದುಕ್ಬೇಕು ಅನ್ನೋದು ಪತ್ರಿಕೆಯ ಧೋರಣೆ ಆಗಿತ್ತಂತ್ರಿ. ಹಿಂಗಾಗಿ, ಷೋಯಿಬುಲ್ಲಾ ಖಾನ್ ಅಂಜಿಕಿಲ್ದೇ ನಿಜಾಮನ ವಿರುದ್ಧ ಕಂಡಂಗ ಬರೀತಿದ್ನಂತ್ರಿ. ಜನ್ರಲ್ಲಿ ರಾಷ್ಟ್ರಪ್ರೇಮವನ್ನ ಜಾಗೃತಗೊಳಿಸ್ತಿದ್ನಂತ್ರಿ. ಇವ್ನ ಕಾಟ ತಾಳಲಾರ್ದೇ ನಿಜಾಮನ ಡೈರೆಕ್ಟರ್ ಕಾಶೀಂರಜವಿ ಪತ್ರಿಕೆ ಮ್ಯಾಲ ನಿಷೇದ ಹೇರಿದ್ನಂತ್ರಿ. ಅವಾಗ ಅದೇ ಧೋರಣೆ ಇಟ್ಕೊಂಡು ಷೋಯಿಬುಲ್ಲಾಖಾನ್ ‘ಇಮ್ರೊಜ್’ ಎಂಬ ಮತ್ತೊಂದು ಪತ್ರಿಕೆ ಶುರು ಮಾಡಿ ಖುದ್ದು ತಾನೇ ಹೋರಾಟಕ್ಕೆ ಇಳಿದ್ನಂತ್ರಿ.
ನಿಜಾಮನ ಆಡಳಿತವನ್ನ ತೀವ್ರವಾಗಿ ವಿರೋಧಿಸಿ ದೇಶದ್ರೋಹಿಗಳನ್ನ ಉಗ್ರವಾಗಿ ವಿಮರ್ಶಿಸಿದ್ನಂತ್ರಿ. ರಜಾಕಾರರಿಂದ ಉಲ್ಬಣವಾಗಿದ್ದ ಸುಲಿಗೆ, ಕ್ರೌರ್ಯ, ಲೂಟಿ, ದಬ್ಬಾಳಿಕೆ ಸ್ತ್ರೀಯರ ಮಾನಾಪಹರಣ ಎಲ್ಲವನ್ನೂ ಕಟುವಾಗಿ ಬರ್ದು ಸತ್ಯ ಬಯಲಿಗೆಳಿತಿದ್ನಂತ್ರಿ. ಮತ್ತ ನಿಜಾಮಗ ಒಳ್ಳೇ ಬುದ್ಧಿ ಮಾತುಗಳನ್ನೂ ಹೇಳ್ತಿದ್ನಂತ್ರಿ.
ಆದ್ರ, ಷೋಯಿಬುಲ್ಲಾಖಾನನ ಹೊಡೆತ ತಾಳ್ದೆ , ಉತ್ತರಿಸಲೂ ಆಗ್ದೇ ದಿಕ್ಕೆಟ್ಟ ರಜಾಕಾರರು ಕಡೀಗಿ 21-08-1948ರ ಮದ್ಯ ರಾತ್ರಿ 1ಗಂಟೆಗೆ ‘ಇಮ್ರೋಜ್’ ಪತ್ರಿಕಾ ಕಛೇರಿಗೇ ಬಂದು ಷೋಯಿಬುಲ್ಲಾ ಖಾನ್ ಮೇಲೆ ಗುಂಡು ಹಾರಿಸಿ ಬಲಿ ತೊಗೊಂಡ ಬಿಟ್ರಂತ್ರಿ ಪಾಪಿಗಳು. ಅಲ್ಲಿಗಿ ‘ ಏ ತೋ ಗಾಂಧಿ ಹೀ ಹೈ’ ಅಂದಿದ್ದ ಹಬೀಬುಲ್ಲಾನ ಮಾತು ಸತ್ಯವೇ ಆಗಿಬಿಟ್ಟಿತ್ನೋಡ್ರೀ…!
ಹಿಂಗ: ಇಂಥ ಮಹಾತ್ಮರ ತ್ಯಾಗ, ಬಲಿದಾನದ ನಂತ್ರ ಭಾರತ ಸರ್ಕಾರ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ನೇತೃತ್ವದಲ್ಲಿ ಹೈದ್ರಾಬಾದ್ ಸಂಸ್ಥಾನದ ಮ್ಯಾಲ ಪೊಲೀಸ್ ಕಾರ್ಯಾಚರಣೆ ಮಾಡಿತಂತ್ರಿ. ಅದ್ರ ಫಲವಾಗಿ ಸತ್ರಾ(17) ಸೆಪ್ಟಂಬರ್ 1948 ಕ್ಕೆ ಹೈದ್ರಾಬಾದ್ ಸಂಸ್ಥಾನವೂ ಭಾರತದೊಂದಿಗೆ ಸೇರ್ಕೊಂಡಿತ್ತತಂತ್ರಿ.
ಆಮ್ಯಾಲೆ ಹೈದ್ರಾಬಾದಿಗೆ ಬಂದಿದ್ದ ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಹುತಾತ್ಮ ಪತ್ರಕರ್ತ ಷೋಯಿಬುಲ್ಲಾಖಾನ್ ಮನಿಗೋಗಿ ಸಂತಾಪ ಸೂಚಿಸಿದ್ರಂತ್ರಿ. ಆಗ ಷೋಯಿಬುಲ್ಲಾಖಾನ್ ಅವ್ರ ಅಪ್ಪ ಹಬೀಬುಲ್ಲಾಖಾನ್ ದೇಶಕ್ಕಾಗಿ ಪ್ರಾಣ ಬಿಟ್ಟ ‘ ಮೇರಾ ಲಾಲ್ ಚಲಾಗಯೇ ತೋ ಕ್ಯಾ ಹುವಾ, ಮೇರಾ ಜವಾಹರ್ ಲಾಲ್ ತೋ ಹೈ ನಾ’ ಎಂದು ಮನತುಂಬಿ ನುಡಿದಾಗ ಪ್ರಧಾನಿ ಕಣ್ಣೀರಾಗಿದ್ದರಂತೆ…
– ಮುದನೂರ್
Super sir
Thank u..