ಹೈದ್ರಾಬಾದ್ ಪ್ರಕರಣಃ ಆರೋಪಿತರನ್ನು ಗಲ್ಲಿಗೇರಿಸಿ
ನ್ಯಾಷನಲ್ ವೂಮೆನ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯಿಂದ ಪ್ರತಿಭಟನೆ
ಯಾದಗಿರಿ, ಶಹಾಪುರಃ ತೆಲಂಗಾಣದ ಹೈದ್ರಾಬಾದ್‍ನಲ್ಲಿ ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪಿತರನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿ ಇಲ್ಲಿನ ನ್ಯಾಷನಲ್ ವೂಮೆನ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ ಜಗನ್ನಾಥರಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿತು.
ದೇಶದಲ್ಲಿ ನಿರಂತರವಾಗಿ ಒಂದಿಲ್ಲೊಂದು ಪ್ರದೇಶ ರಾಜ್ಯದಲ್ಲಿ ಅಮಾಯಕ ಹೆಣ್ಣು ಮಕ್ಕಳ ಮೇಲೆ, ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ, ಕೊಲೆ ಸುಲಿಗೆಯಂತ ಘಟನೆಗಳು ನಡೆಯುತ್ತಿವೆ. ಇದಕ್ಕೆಲ್ಲ ಕಡಿವಾಣ ಹಾಕುವುದು ಯಾವಾಗ ಎಂಬುದೆ ದೊಡ್ಡ ಪ್ರಶ್ನೆಯಾಗಿದೆ.
ಇಂತಹ ಪ್ರಕರಣಗಳಲ್ಲಿ ಆರೋಪಿತರಿಗೆ ಕಾನೂನಡಿ ತಕ್ಷಣ ಗಲ್ಲಿಗೇರಿಸುವ ತಿದ್ದುಪಡಿ ತರಬೇಕಿದೆ. ನಮ್ಮ ದೇಶದ ಕಾನೂನು ಇಂತಹ ಪ್ರಕರಣಗಳಡಿ ಆರೋಪಿತರನ್ನು ಸ್ಥಳದಲ್ಲಿಯೇ ತಂದು ಗುಂಡಿಕ್ಕಿ ಕೊಲ್ಲುವಂತ ಕಾನೂನು ಜಾರಿಯಾಗಬೇಕಿದೆ ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.
ಅಲ್ಲದೆ ಹೈದ್ರಾಬಾದ್ ಪಶುವೈದ್ಯೆ ಮೇಲೆ ನಡೆದ ಅತ್ಯಾಚಾರ ಪ್ರಕರಣ ಮಾನವ ಕುಲವನ್ನೇ ಅಪಮಾನ ಮಾಡಿದಂತಿದೆ. ಕೂಡಲೆ ಆರೋಪಿತರಿಗೆ ಗಲ್ಲು ಶಿಕ್ಷೆವಿಧಿಸುವ ಮೂಲಕ ಮುಂದಿನ ಕಾಮುಕರಿಗೆ ಎಚ್ಚರಿಕೆ ಗಂಟೆಯಾಗಬೇಕು ಎಂದು ಒತ್ತಾಯಿಸಿದರು.
ದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಹೀಗಾಗಿ ಕಾಮುಕರು ಅಟ್ಟಹಾಸ ಮೆರೆಯುತ್ತಿದ್ದಾರೆ. ಕೂಡಲೇ ಇದಕ್ಕೆಲ್ಲ ಕಡಿವಾಣ ಹಾಕಬೇಕು. ಇಂತಹ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡುವ ಮೂಲಕ ಸಮಾಜಕ್ಕೆ ಕಠಿಣ ಸಂದೇಶ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಿಜ್ವಾನ ಬೇಗಂ ಜಾಲಹಳ್ಳಿ, ಫಿರ್ದೋಸ್ ಖಾತೂನ್, ಅರುಣಾ, ಶಾಕೀರಾ ಸುಲ್ತಾನಾ, ತಸ್ಲಿಂ ಬೇಗಂ, ಶಫತ್ ಫಾತಿಮಾ, ಅಜರಾ ಅಖ್ತರ, ರಹೆಮತ್ ಸುಲ್ತಾನಾ ಸೇರಿದಂತೆ ಎಸ್‍ಡಿಪಿಐ ಮುಖಂಡ ಸಯ್ಯದ್ ಖಾಲಿದ್, ಮುನೀರ್ ಮುಜಾವರ್ ಅಸಾದ್ ಇತರರಿದ್ದರು.