ದೋಸ್ತಿ ಖತಂ : ‘ಕೈ’ ಹೈಕಮಾಂಡ್ ಬಳಿಗೆ ರಾಜ್ಯ ಕಾಂಗ್ರೆಸ್ ನಿಯೋಗ?
ವಿನಯ ಮುದನೂರ್
ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ದೋಸ್ತಿ ಸರ್ಕಾರ ಪತನವಾಗಿದ್ದು ಕಾಂಗ್ರೆಸ್ ಪಕ್ಷದ ಸಂಘಟನೆಗೆ ಸಕಾರಾತ್ಮಕ ಬೆಳವಣಿಗೆಯೇ ಆಗಿದೆ ಎಂಬುದಾಗಿ ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿಕೊಡಲು ರಾಜ್ಯ ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ. ಈಗಾಗಲೇ ರಾಜ್ಯದ ಕೆಲ ನಾಯಕರು ಸೇರಿ ಚರ್ಚೆ ನಡೆಸಿದ್ದು ತಮ್ಮದೇ ಆದ ಲೆಕ್ಕಾಚಾರಗಳನ್ನು ಸಂಗ್ರಹಿಸಿ ಹೈಕಮಾಂಡ್ ಮುಂದಿಡಲು ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.
‘ಕರ್ನಾಟಕ ದೋಸ್ತಿ ಸರ್ಕಾರ ಪತನಕ್ಕೆ ಆಂತರಿಕ ದುಷ್ಕೃತ್ಯವೇ ಕಾರಣ’ ಎಂದು ರಾಹುಲ್ ಗಾಂಧಿ ಇತ್ತೀಚೆಗೆ ಟ್ವೀಟ್ ಮಾಡಿದ್ದರು. ಆದರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ದೋಸ್ತಿಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ. ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ಗೆ ಪ್ರಮುಖ ಸ್ಪರ್ಧಿ ಜೆಡಿಎಸ್ ಪಕ್ಷ. ಮೈತ್ರಿಯಿಂದಾಗಿ ಪಕ್ಷ ಸಂಘಟನೆಗೆ ತೊಡಕಾಗಿ ಪರಿಣಮಿಸಿದೆ. ಮುಂದಿನ ವಿಧಾನ ಸಭೆ ಚುನಾವಣೆ ವೇಳೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂಬಂಶವನ್ನು ವರಿಷ್ಠರ ಗಮನಕ್ಕೆ ತರಲು ಕಾಂಗ್ರೆಸ್ ನಾಯಕರು ಪ್ಲಾನ್ ಮಾಡಿದ್ದಾರೆ.
ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವೂ ಅಸ್ಥಿರತೆಯಲ್ಲೇ ನಡೆಯಲಿದೆ. ಅತೃಪ್ತ ಶಾಸಕರು ರಾಜೀನಾಮೆ ನೀಡಿರುವ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದ್ದು ಜನ ಆಪರೇಷನ್ ಕಮಲದ ವಿರುದ್ಧ ಮತ ಹಾಕುವ ಮನೋಸ್ಥಿತಿಯಲ್ಲಿದ್ದು ಕಾಂಗ್ರೆಸ್ ನೇರವಾಗಿ ಅದರ ಲಾಭ ಪಡೆಯಬೇಕಿದೆ. ಕಳೆದ ಬಾರಿಯಂತೆ ಯಡಿಯೂರಪ್ಪ ಸರ್ಕಾರದ ತಪ್ಪುಗಳನ್ನು ಎತ್ತಿಹಿಡಿದು ಹೋರಾಟ ನಡೆಸಿದರೆ ಕಾಂಗ್ರೆಸ್ ಬಲಿಷ್ಠವಾಗುವುದರಲ್ಲಿ ಸಂಶಯವೇ ಇಲ್ಲ. ಅಂತೆಯೇ ಕೆಲವೇ ತಿಂಗಳಲ್ಲಿ ಯಡಿಯೂರಪ್ಪ ಸರ್ಕಾರ ಪತನಗೊಳ್ಳುವುದು ಗ್ಯಾರಂಟಿ. ಹೀಗಾಗಿ, ದೋಸ್ತಿ ಮುಂದುವರೆಸುವ ಅಗತ್ಯವಿಲ್ಲ ಎಂಬುದು ಕೈಪಡೆಯ ಲೆಕ್ಕಾಚಾರವಾಗಿದೆ.
ಅದೇ ಲೆಕ್ಕಾಚಾರದ ಮೇಲೆಯೇ ಮಧ್ಯಂತರ ಚುನಾವಣೆ ಸನ್ನಿಹಿತವಾಗಿದೆ. ಪಕ್ಷದ ಕಾರ್ಯಕರ್ತರು ಚುನಾವಣೆ ಎದುರಿಸಲು ಸನ್ನದ್ಧವಾಗಬೇಕು ಎಂದು ಇತ್ತೀಚೆಗೆ ಸಿದ್ದರಾಮಯ್ಯ ಕಾಂಗ್ರೆಸ್ ಮುಖಂಡರಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆಯೂ ಕಾಂಗ್ರೆಸ್ ಹೈಕಮಾಂಡ್ ಗೆ ಮನವರಿಕೆ ಮಾಡಿಕೊಡಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ. ಖುದ್ದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ಧರಾಮಯ್ಯ ಮತ್ತು ಟೀಮ್ ದೆಹಲಿಗೆ ತೆರಳಿ ಈ ಬಗ್ಗೆ ಹೈಕಮಾಂಡ್ ಗೆ ಮನದಟ್ಟು ಮಾಡಲಿದೆ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿದೆ.