ಕ್ಷುಲ್ಲಕ ಕಾರಣಕ್ಕೆ ಕಲ್ಲು ತೂರಾಟಃ ಹಲವರಿಗೆ ಸಣ್ಣಪುಟ್ಟ ಗಾಯ
ಯಾದಗಿರಿಃ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ನಡೆದ ಸಾಂಪ್ರದಾಯಿಕ ಜಾತ್ರೆ ವೇಳೆ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪಿನ ನಡುವೆ ಗಲಾಟೆಯಾಗಿದ್ದು, ಎರಡು ಕಡೆಯಿಂದ ಕಲ್ಲು ತೂರಾಟ ನಡೆದ ಪರಿಣಾಮ ಹಲವರು ಸಣ್ಣಪುಟ್ಟ ಗಾಯಗೊಂಡ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಹುರಸಗುಂಡಗಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಗ್ರಾಮ ಸಮೀಪದ ಭೀಮಾನದಿ ದಡದ ಸಮೀಪ ಸಂಕ್ರಾಂತಿ ದಿನದಂದು ಪ್ರತಿ ವರ್ಷ ವಿವಿಧ ಪಲ್ಲಕ್ಕಿಗಳು ಗಂಗಾಸ್ನಾನಕ್ಕೆಂದು ಬರುತ್ತವೆ. ಈ ಸಂದರ್ಭದಲ್ಲಿ ಇಲ್ಲಿ ಸಣ್ಣ ಜಾತ್ರೆಯೇ ನೆರೆಯುತ್ತದೆ.
ಜಾತ್ರೆ ಅಂಗವಾಗಿ ಪಾನ್ ಡಬ್ಬಾವೊಂದರ ಮುಂದೆ ನಿಂತಾಗ ಓರ್ವ ಇನ್ನೊಬ್ಬ ವ್ಯಕ್ತಿಯ ಕಾಲು ತುಳಿದ ಪರಿಣಾಮ ಪರಸ್ಪರರ ನಡುವೆ ಮಾತಿಗೆ ಮಾತು ಬೆಳೆದು ಗುಂಪು ಘರ್ಷಣೆಗೆ ಕಾರಣವಾಗಿದೆ. ಗ್ರಾಮದ ದೇವಪ್ಪ ಎಂಬುವರ ಮಗ ಪಾನ್ಶಾಪ್ ಮುಂದೆ ನಿಂತಾಗ ಇನ್ನೋರ್ವ ಪಾನಡಬ್ಬಾಗೆ ಆಗಮಿಸಿದ ವೇಳೆ ಕಾಲು ತುಳಿದಿದ್ದಾನೆ ಎನ್ನಲಾಗಿದೆ. ಇಷ್ಟಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದು ಬಡಿದಾಟ ನಡೆದಿದೆ. ನಂತರ ಗುಂಪಾದ ಎರಡು ಕಡೆಯ ಜನ ತಮ್ಮ ತಮ್ಮ ಸಮುದಾಯದವರನ್ನು ಮೇಲೆತ್ತಿಕೊಂಡು ಗಲಾಟೆ ಶುರುವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ನಂತರ ಎರಡು ಕಡೆ ಗುಂಪಾಗಿ ಸೇರಿದ್ದ ಜನ. ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಎರಡು ಕಡೆಯವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳಕ್ಕೆ ಗ್ರಾಮೀಣ ಸಿಪಿಐ ಮಹ್ಮದ್ ಸಾಜೀದ್, ಭೀ.ಗುಡಿ ಪಿಎಸ್ಐ ತಿಪ್ಪಣ್ಣ ರಾಠೋಡ ಮತ್ತು ಪೊಲೀಸ್ ಸಿಬ್ಬಂದಿ ತೆರಳಿ ಹತೋಟಿಗೆ ತಂದಿದ್ದಾರೆ. ಪ್ರಸ್ತುತ ಗ್ರಾಮದಲ್ಲಿದ್ದ ಕ್ಷೋಭೆ ಶಾಂತಿಯುತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎರಡು ಸಮುದಾಯದ ಜನರು ಸಾಧಾರಣ ಗಾಯಗೊಂಡಿದ್ದು, ಪ್ರಸಕ್ತ ಗ್ರಾಮ ಶಾಂತಿ ವಾತವರಣಕ್ಕೆ ತಲುಪಿದೆ ಎಂದು ತಿಳಿದು ಬಂದಿದೆ. ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆಗೊಳಿಸಲಾಗಿದೆ.