ಶೀಲ ಶಂಕಿಸಿ ಪತ್ನಿಯನ್ನೆ ಕೊಲೆಗೈದ ಪತಿ ಅರೆಸ್ಟ್
ಪತಿಯಿಂದ ಪತ್ನಿಯ ಕಗ್ಗೊಲೆ
ಯಾದಗಿರಿಃ ಪತ್ನಿ ಶೀಲ ಶಂಕಿಸಿ ಪತಿ ಮಹಾಶಯ ಮಂಳವಾರ ಬೆಳಗ್ಗೆ ಕೆಲಸದಲ್ಲಿ ಮಗ್ನಳಾಗಿದ್ದ ಹೆಂಡತಿಯ ಕುತ್ತಿಗೆಗೆ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಹತ್ತಿಗೂಡೂರ ಗ್ರಾಮದಲ್ಲಿ ನಡೆದಿದೆ. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿ ಪತಿ ಯಲ್ಲಪ್ಪನನ್ನು ಅರೆಸ್ಟ್ ಮಾಡಿದ್ದಾರೆ.
ಹತ್ತು ವರ್ಷಗಳ ಹಿಂದೆ ಸುರಪುರ ತಾಲೂಕಿನ ಶಖಾಪುರ ಗ್ರಾಮದ ರೇಣುಕಾ, ಹತ್ತಿಗುಡೂರು ಗ್ರಾಮದ ಯಲ್ಲಪ್ಪ ಮದುವೆ ಆಗಿತ್ತು. ಈ ನಡುವೆ ಕುಡಿತಕ್ಕೆ ದಾಸನಾಗಿದ್ದ ಯಲ್ಲಪ್ಪನ ಕಿರುಕುಳದಿಂದ ಬೇಸತ್ತ ರೇಣುಕಾ ತವರಿಗೆ ಶಖಾಪುರಕ್ಕೆ ಹೋಗಿದ್ದಳು ಎನ್ನಲಾಗಿದೆ. ಇತ್ತೀಚೆಗೆ ಹತ್ತಿಗೂಡೂರ ಗ್ರಾಮದಲ್ಲಿ ಯಲ್ಲಪ್ಪನಿಗೆ ಸರ್ಕಾರಿ ಆಶ್ರಯ ಮನೆ ಮಂಜೂರಾಗಿತ್ತು. ಕೆಲ ಹಿರಿಯರನ್ನು ಸಂಪರ್ಕಿಸಿ ಹೆಂಡತಿಯ ನ್ಯಾಯಪಂಚಾಯತಿ ಮಾಡಿ ಮನೆಗೆ ಕರೆದು ಕೊಂಡು ಬಂದಿದ್ದ ಎನ್ನಲಾಗಿದೆ.
ಮನೆಗೆ ಕರೆ ತಂದ ಮೇಲೂ ತನ್ನ ದುಶ್ಚಟ ಬಿಡದೆ ಪತ್ನಿ ಮೇಲೆ ಸಂಶಯಪಟ್ಟು ಕಿರಿಕರಿ ಮಾಡುತ್ತಿದ್ದನು. ಮಂಗಳವಾರ ಬೆಳಗ್ಗೆಯೇ ಜಗಳವಾಡಿಕೊಂಡಿದ್ದು, ತದ ನಂತರ ಕುಡಿದು ಬಂದು ಕೊಡ್ಲಿಯಿಂದ ಹೊಡೆದಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ ಭಗವಾನ್ ಸೋನಾವಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಡಿವೈಎಸ್‍ಪಿ ಶಿವನಗೌಡ, ಸಿಪಿಐ ಹನುಮರಡ್ಡೆಪ್ಪ ಸೇರಿದಂತೆ ಪೊಲೀಸ್ ಸಿಬ್ಬಂದಿ ಇದ್ದರು. ಈ ಕುರಿತು ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಆಸ್ಪತ್ರೆ ಹತ್ತಿರ ಸಂಬಂಧಿಕರ ರೋದನ
ಕೊಲೆಯಾದ ರೇಣುಕಾಳಿಗೆ ಮುದ್ದಾದ ಒಂದು ಹೆಣ್ಣು , ಎರಡು ಗಂಡು ಮಕ್ಕಳಿವೆ. ತೀರ ಚಿಕ್ಕ ವಯಸ್ಸಿನ ಈ ಮೂರು ಮಕ್ಕಳನ್ನು ಮುಂದೆ ಸಲುವವರು ಯಾರು.? ಎಂದು ಸಂಬಂಧಿಕರು ನಗರದ ಸರ್ಕಾರಿ ಆಸ್ಪತ್ರೆ ಹತ್ತಿರ ರೋಧಿಸುತ್ತಿರುವದು ಕಂಡು ಬಂದಿತು.
ಕೊಲೆಯಾದ ನಂತರ ರೇಣುಕಾಳನ್ನು ನಗರದ ಸರ್ಕಾರಿ ಆಸ್ಪತ್ರೆಗೆ ತರಲಾಗಿದೆ. ಆಸ್ಪತ್ರೆಗೆ ಬರುತ್ತಿದ್ದಂತೆ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಆಸ್ಪತ್ರೆ ಹತ್ತಿರ ಜಮಾಯಿಸಿದ ಸಾರ್ವಜನಿಕರು ಕೊಲೆ ಮಾಡಿದ ಆರೋಪಿ ತಂದೆ ಯಲ್ಲಪ್ಪ ಜೈಲು ಪಾಲಾದರೆ, ಈ ಮೂರು ಮಕ್ಕಳನ್ನು ನೋಡಿಕೊಳ್ಳುವವರು ಯಾರು ಎಂದು ಮರುಗಿದರು.
ತಾಯಿಯನ್ನು ಕೊಂದು ತಾನು ಜೈಲಿಗೆ ಹೋಗಿ ಮಕ್ಕಳನ್ನು ಬೀದಿಗೆ ತಂದು ನಿಲ್ಲಿಸಿದ. ಪಾಪ ಮಕ್ಕಳ ಗತಿ ಏನು.? ದೇವರು ಮಕ್ಕಳಿಗೆ ಅನ್ಯಾಯ ಮಾಡಿದ ಎಂದು ಮಹಿಳೆಯರು ಗೋಗರೆದರು.
——————-
ಪತ್ನಿ ಶೀಲ ಶಂಕಿಸಿ ಗಂಡ ಕೊಲೆಗೈದ ಘಟನೆ ನಡೆದಿದೆ. ಸೂಕ್ತ ತನಿಖೆ ನಂತರವೇ ಕೊಲೆಗೆ ಸಮರ್ಪಕ ಕಾರಣ ತಿಳಿದು ಬರಲಿದೆ. ಪ್ರಕರಣ ದಾಖಲಾಗಿದೆ. ಸಮರ್ಪಕ ತನಿಖೆ ಕೈಗೊಳ್ಳಲಾಗಿದೆ. ಆರೋಪಿ ಸದ್ಯ ವಶದಲ್ಲಿದ್ದಾನೆ.
–ಶಿವನಗೌಡ. ಡಿವೈಎಸ್‍ಪಿ.