ಪ್ರಮುಖ ಸುದ್ದಿ

ರಸ್ತೆ ಅಪಘಾತಃ ನಾಗರಿಕ ಸಮಿತಿಯಿಂದ ರಸ್ತೆ ತಡೆ ಡಿಸಿಗೆ ಮನವಿ

ರಸ್ತೆ ಅಪಘಾತ ಬಾಲಕ ಸಾವು ಪ್ರಕರಣಃ ಕೆಎಸ್ಆರ್ಟಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ

ಯಾದಗಿರಿ, ಶಹಾಪುರಃ ನಗರದ ಹಳೇ ಬಸ್ ನಿಲ್ದಾಣದ ಮುಂಭಾಗದ ರಸ್ತೆಯಲ್ಲಿ ಹೆಚ್ಚಾಗಿ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಬಸ್ ನಿಲುಗಡೆಗೆ ತಾತ್ಕಾಲಿಕ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಇಲ್ಲಿನ ನಾಗರಿಕ ಹೋರಾಟ ಒಕ್ಕೂಟ ಸಮಿತಿ ರಸ್ತೆ ತಡೆ ನಡೆಸಿ ಜಿಲ್ಲಾಧಿಕಾರಿ ಕೂರ್ಮಾರಾವ್ ಅವರಿಗೆ ಮನವಿ ಸಲ್ಲಿಸಿದರು.

ಅ.29 ರಂದು ನಗರದಲ್ಲಿ ನಡೆದ ಅಪಘಾತದಲ್ಲಿ ಬಾಲಕ ಕೆಎಸ್‍ಆರ್‍ಟಿಸಿ ಬಸ್‍ನ ಹಿಂಬದಿ ಚಕ್ರಕ್ಕೆ ಸಿಲುಕಿ ಮೃತಪಟ್ಟರೆ, ಜೊತೆಯಲ್ಲಿದ್ದ ಬಾಲಕನ ಅಜ್ಜಿ ನೂರಜಾಹ (50) ತೀವ್ರಗಾಯಗೊಂಡಿದ್ದು, ಕಲಬುರ್ಗಿಯ ಸರ್ಕಾರಿ ಆಸ್ಪತ್ರೆಯಲ್ಲಿ ಸಾವು ನೋವಿನ ಮಧ್ಯೆ ಹೋರಾಡುತ್ತಿದ್ದಾಳೆ.

ಕೂಲಿನಾಲಿ ಮಾಡಿ ಬದುಕುವ ಈ ಬಡ ಕುಟುಂಬಕ್ಕೆ ಜಿಲ್ಲಾಡಳಿತ ಸೂಕ್ತ ಸ್ಪಂದನೆ ನೀಡಬೇಕಿದೆ. ಮೃತಪಟ್ಟ ಬಾಲಕನ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.

ಹಳೇ ಬಸ್ ನಿಲ್ದಾಣ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ಬಸ್ ನಿಲುಗಡೆಗೆ ಸೂಕ್ತ ಸ್ಥಳವಕಾಶ ಇಲ್ಲದ ಕಾರಣ ಹೆದ್ದಾರಿ ಮೇಲೆಯೇ ನಿಲ್ಲುತ್ತಿವೆ. ಅಲ್ಲದೆ ಹೆದ್ದಾರಿ ಬದಿಯಲ್ಲಿ ಆಟೋಗಳ ನಿಲುಗಡೆ ಮತ್ತು ಇತರೆ ವಾಹನಗಳ ಅಡ್ಡಾದಿಡ್ಡಿ ನಿಲುಗಡೆಯಿಂದಾಗಿ ನಿತ್ಯ ಒಂದಿಲ್ಲೊಂದು ಅವಘಡಗಳು ಸಂಭವಿಸುತ್ತಿವೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.

ಮತ್ತು ಶೀಘ್ರದಲ್ಲಿ ತಾತ್ಕಾಲಿಕವಾಗಿ ಬಸ್‍ಗಳನ್ನು ನಿಲ್ದಾಣದ ಹೊರಾಂಗಣದಲ್ಲಿ ನಿಲ್ಲಿಸುವ ವ್ಯವಸ್ಥೆ ಮಾಡಬೇಕು. ಆಟೋ ನಿಲ್ದಾಣಕ್ಕೆ ಬೇರಡೆ ಸ್ಥಳವಕಾಶ ಕಲ್ಪಿಸಬೇಕು ಎಂದು ಪ್ರತಿಭಟನಾನಿರತರು ಮನವಿ ಮಾಡಿದರು. ಅಲ್ಲದೆ ನಿಲ್ದಾಣದ ಎರಡು ಗೇಟ್ ಮುಂಭಾಗದಲ್ಲಿ ನಿರ್ಮಿಸಲಾದ ರಸ್ತೆ ವಿಭಜಕವನ್ನು ಹೊಡೆದು ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು.

ಸರ್ಕಾರಿ ಬಾಲಕಿಯರ ಕಾಲೇಜಿಗೆ ಹೋಗಲು ನಿಲ್ದಾಣದ ಎದುರುಗಡೆ ಇರುವ ರಸ್ತೆ ವಿಭಜಕವನ್ನು ಹೊಡೆದು ಸುಗಮವಾಗಿ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲು ಅನುಕೂಲ ಕಲ್ಪಿಸಬೇಕು. ಅಲ್ಲದೆ ನಿಲ್ದಾಣದ ಕಾಮಗಾರಿ ಕೈಗೊಂಡ ಗುತ್ತಿಗೆದಾರರನ ವಿರುದ್ಧ ಕ್ರಮಕೈಗೊಳ್ಳಬೇಕು. ಕೆಎಸ್‍ಆರ್‍ಟಿಸಿ ನಿಗಮ ನಿಯಮದ ಪ್ರಕಾರ ಕಟ್ಟಡ ನಿರ್ಮಾಣ ಅವಧಿ ಮೀರಿದ್ದು, ಕೂಡಲೇ ನಿಲ್ದಾಣ ಕಾಮಗಾರಿ ಮುಗಿಸಿ ಸಾರ್ವಜನಿಕ ಸೇವೆಗೆ ಲಭ್ಯವಾಗುವಂತೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಸೈಯದ್ ಇಸಾಕ ಹುಸೇನಿ ಖಾಲಿದ್, ಸೈದುದ್ದೀನ್ ಖಾದ್ರಿ, ತಾಪಂ ಸದಸ್ಯ ಪರಶುರಾಮ ಕುರುಕುಂದಿ, ರಫೀಕ್ ಕೆಬಿಎನ್, ನಗರಸಭೆ ಸದಸ್ಯರಾದ ಮಲ್ಲಿಕಾರ್ಜುನ ಗಂಗಾಧರಮಠ,ಲಾಲನಸಾಬ ಖುರೇಶಿ, ಶಿವಕುಮಾರ ತಳವಾರ, ಅಪ್ಪಣ್ಣ ದಶವಂತ, ಸತೀಶ ಪಂಚಭಾವಿ, ರವಿ ಯಕ್ಷಂತಿ ಸೇರಿದಂತೆ ಉಮೇಶ ಬಾಗೇವಾಡಿ, ಭಾಷಾ ಪಟೇಲ್, ದಲಿತ ಮುಖಂಡ ನಾಗಣ್ಣ ಬಡಿಗೇರ, ಸಂಗಯ್ಯ ಸ್ವಾಮಿ, ಅಮೃತ ಹೂಗಾರ, ತಲಕ ಚಾಂದ್, ಶಿವುಪುತ್ರ ಜವಳಿ, ರಾಯಪ್ಪ ಸಾಲಿಮನಿ, ಮೌನೇಶ ನಾಟೇಕಾರ, ಜಾವೀದ್, ಲಕ್ಷ್ಮಿಕಾಂತ, ಅಶೋಕ ತಳವಾರ ಸೇರಿದಂತೆ ವಿವಿಧ ಸಂಘಟನೆ ಮುಖಂಡರು ಇತರರಿದ್ದರು.

ಬಸ್ ನಿಲ್ದಾಣ ಕಾಮಗಾರಿ ವೀಕ್ಷಿಸಿದ ಕೆಎಸ್‍ಆರ್‍ಟಿಸಿ ಜಿಲ್ಲಾಧಿಕಾರಿ

ಅ.29 ರಂದು ಇಲ್ಲಿನ ಹಳೇ ಬಸ್ ನಿಲ್ದಾಣದ ಮುಂದೆ ನಡೆದ ಅಪಘಾತದಲ್ಲಿ ಬಾಲಕ ಮೃತಪಟ್ಟಿರುವ ಘಟನೆ ನಗರದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾದ ಹಿನ್ನೆಲೆಯಲ್ಲಿ, ನಗರಕ್ಕೆ ಆಗಮಿಸಿದ್ದ ಕೆಎಸ್‍ಆರ್‍ಟಿಸಿ ಜಿಲ್ಲಾಧಿಕಾರಿ ಸಂತೋಷ ಗೋಗೇರಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಪ್ರತಿಭಟನೆ ಕೈಗೊಂಡಿದ್ದ ಇಲ್ಲಿನ ನಾಗರಿಕ ಹೋರಾಟ ಒಕ್ಕೂಟ ಸಮಿತಿ ಪ್ರಮುಖರು ಸಂತೋಷ ಗೋಗೇರಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಅಲ್ಲದೆ ಕೂಡಲೇ ಬಸ್ ನಿಲ್ದಾಣ ಕಾಮಗಾರಿ ಮುಗಿಸಲು ಸೂಚಿಸಬೇಕು. ಸದ್ಯ ತಾತ್ಕಾಲಿಕವಾಗಿ ನಿಲ್ದಾಣದೊಳಗೆ ಬಸ್ ನಿಲುಗಡೆಗೆ ವ್ಯವಸ್ಥೆ ಕಲ್ಪಿಸುವ ಮೂಲಕ ಅಪಘಾತ ತಡೆಗೆ ಕ್ರಮಕೈಗೊಳ್ಳಲು ಮನವಿ ಮಾಡಿದರು.

ನಿಲ್ದಾಣದ ಕಾಮಗಾರಿ ಪರಿಶೀಲನೆ ನಡೆಸಿದ ಕೆಎಸ್‍ಆರ್‍ಟಿಸಿ ಜಿಲ್ಲಾಧಿಕಾರಿ ಸಂತೋಷ ಗೋಗೇರಿ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದರು.

—————-
ಹಳೇ ಬಸ್ ನಿಲ್ದಾಣ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಇದಕ್ಕೆ ಕೆಎಸ್‍ಆರ್‍ಟಿಸಿ ಜಿಲ್ಲಾ ಅಧಿಕಾರಿಗಳ ನಿರ್ಲಕ್ಷ ಧೋರಣೆ ಮತ್ತು ಇಲ್ಲಿನ ಬಸ್ ಡಿಪೋ ಅವರ ಬೇಜವಬ್ದಾರಿ ವರ್ತನೆ ಕಾರಣ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂಧಿಸದೆ, ಬಾಲಿಶತನ ಹೇಳಿಕೆ ನೀಡುವ ಇಂತಹ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು.
-ಗುರು ಕಾಮಾ. ಮಾಜಿ ಅಧ್ಯಕ್ಷ
ನಗರ ಪ್ರಾಧಿಕಾರ ಯೋಜನೆ ಶಹಾಪುರ.

——————
ಬಸ್ ನಿಲ್ದಾಣದ ಆವರಣದಲ್ಲಿ ಹಾಕಲಾದ ಕಾಮಗಾರಿಗೆ ಬೇಕಾದ ಸಾಮಾಗ್ರಿ ಉಸುಕು, ಕಂಕರ್ ಇತರೆ ಸಾಮಾಗ್ರಿಯನ್ನು ನಿಕಲ್ದಾಣದ ಹಿಂಬದಿಯಲ್ಲಿ ಸಂಗ್ರಹಿಸಲು ಗುತ್ತಿಗೆದಾರರಿಗೆ ತಿಳಿಸಲಾಗುವದು. ಅಲ್ಲದೆ ನಿಲ್ದಾಣದ ಎದುರಗಡೆ ಹಾಕಲಾದ ರಸ್ತೆ ವಿಭಜಕ ಹೊಡೆದು ಹಾಕುವ ಮೂಲಕ ಬಸ್ ನಿಲ್ದಾಣ ಪ್ರದೇಶ ತಲುಪುವಂತೆ ವ್ಯವಸ್ಥೆಯನ್ನು ತುರ್ತಾಗಿ ಮಾಡುವ ಮೂಲಕ ಅನುಕೂಲ ಕಲ್ಪಿಸಲಾಗುವದು.
-ಸಂತೋಷ ಗೋಗೇರಿ.
ಜಿಲ್ಲಾಧಿಕಾರಿಗಳು. ಕೆಎಸ್ಸಾರ್ಟಿಸಿ ನಿಗಮ ಯಾದಗಿರಿ.

———————

Related Articles

Leave a Reply

Your email address will not be published. Required fields are marked *

Back to top button