ಇಂದು ಸ್ವಾತಂತ್ರ್ಯ ದಿನ
ಯೋಚಿಸೋಣ ಒಂದು ಕ್ಷಣ
ಸಾರ್ಥಕವಾಗಿದೆಯೇ
ವೀರ ಯೋಧರ ಬಲಿದಾನ?
ಅಂದು ಬಿಳಿಯ ಆಂಗ್ಲರ ದರ್ಬಾರು
ಇಂದು ನಮ್ಮವರದ್ದೇ ದರ್ಕಾರಿಲ್ಲದ ಕಾರ್ಬಾರು
ಅಂದು ಸ್ವರಾಜ್ಯಕ್ಕಾಗಿ ವೀರಪುರುಷರ ಕ್ರಾಂತಿ
ಇಂದು ಸ್ವ-ಅಭಿವೃದ್ಧಿಯದ್ದೇ ಭ್ರಷ್ಟನಾಯಕರ ಭ್ರಾಂತಿ!
ಆಚರಿಸುತ್ತೇವೆ ಸ್ವಾತಂತ್ರ್ಯೋತ್ಸವ
ಈವತ್ತೊಂದು ದಿನ
ಖಾದಿ, ಗಾಂಧೀಟೋಪಿ, ಭೀಷಣ, ಭಾಷಣ
ಪಥ ಸಂಚಲನ, ರಾಷ್ಟ್ರ ದ್ವಜಾರೋಹಣ
ಆದರೆ, ಕೊರತೆ ಕಾಣುತ್ತಲೇ ಇದೆ
ರಾಷ್ಟ್ರಪ್ರೇಮ, ಅಭಿವೃದ್ಧಿ
ಮತ್ತದರ ಕ್ರಿಯಾತ್ಮಕ ಅನುಷ್ಠಾನ!
ಜಾಗತೀಕರಣದ ಸೋಗಿನಲ್ಲಿ
ಮತ್ತೊಮ್ಮೆ ನಮ್ಮನ್ನಾಳಲು
ಬರುತ್ತಿದ್ದಾರೆ ವಿದೇಶಿಯರು.
ವಿದೇಶಿ ಆಡಂಬರಕ್ಕೆ ಬೆರಗಾಗಿ
ಕಂಡೂ ಕಾಣದಂತೆ ಕುಳಿತಿದ್ದೇವೆ ಸ್ವದೇಶಿಯರು!
ಇಂದಾದರೂ ಯೋಚಿಸೋಣ ಒಂದು ಕ್ಷಣ
ವೀರ ಯೋಧರ ಬಲಿದಾನ…!
-ಬಸವರಾಜ ಮುದನೂರ್
(10ವರ್ಷಗಳ ಹಿಂದೆ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದ್ದ ಕವಿತೆ)
SUPER & NICE