ಧಾರ್ಮಿಕತೆಯಲ್ಲಿ ಡಾಂಭಿಕತೆ ಅನುಸರಿಸಿದರೆ ಶೂನ್ಯ ಫಲ- ಶಿವಕುಮಾರ ಶ್ರೀ
ಜ್ಞಾನ ದಾಸೋಹ – 2 ದಿನ ಕಾರ್ಯಕ್ರಮ
ಯಾದಗಿರಿ,ಶಹಾಪುರಃ ಮಾನವ ಜನ್ಮಕ್ಕೆ ಬರಬೇಕಾದರೆ 84 ಲಕ್ಷ ಕೋಟಿ ಜನ್ಮ ದಾಟಿ ಬರಬೇಕಾಗುತ್ತದೆ. ಹಾಗೇ ಬಂದ ಈ ಶರೀರವು ಮೊದಲು ತನ್ನ ತಾನು ಅರಿತು ನಡೆದುಕೊಂಡಾಗ ಮಾತ್ರ ಸತ್ಯದ ಶುಭ ಫಲಗಳು ದೊರೆಯಲು ಸಾಧ್ಯವಿದೆ ಎಂದು ಬೀದರನ ಸಿದ್ಧಾರೂಢ ಮಠದ ಸದ್ಗುರು ಡಾ.ಶಿವಕುಮಾರ ಮಹಾಸ್ವಾಮೀಜಿ ತಿಳಿಸಿದರು.
ತಾಲೂಕಿನ ಭೀಮರಾಯನ ಗುಡಿಯ ಸಿದ್ಧಾರೂಢ ಮಠದಲ್ಲಿ ನಡೆಯುತ್ತಿರುವ ಎರಡನೇ ದಿನದ ಜ್ಞಾನ ದಾಸೋಹ ಕಾರ್ಯಕ್ರಮದಲ್ಲಿ ಭಾಗವಹಿಸಿ ‘ಗುರುಪಾದ ಸೇವೆಯನೊಲವಿಂದೆ ಮಾಡದೆ’ ಎಂಬ ವಿಷಯದ ಮೇಲೆ ಅವರು ಮಾತನಾಡಿದರು.
ಪ್ರಪಂಚದಲ್ಲಿ ನಿರಂತರ ದುಡಿಮೆ ಅಪಾರ ಆಸ್ತಿ, ಮನೆ ಜಮೀನು ಗಳಿಸುವದಲ್ಲದೆ ಸುಖೀ ಜೀವನಕ್ಕಾಗಿ ಬೇಕಾದ ವ್ಯವಸ್ಥೆ ಕಲ್ಪಿಸಿಕೊಂಡು ಕಾರಿನೊಳು ತಣ್ಣನೆಯ ಗಾಳಿಯಡಿ ಹೊರಡುವ ವಿಲಾಸಿ ಜೀವನವೇ ಬದುಕು ಅಂದುಕೊಂಡಿದ್ದರೆ ತಪ್ಪು.
ಅದಾರೆಚೆಗೆ ಸುಂದರ ಅತಿಸುಂದರತೆಯ ಜೀವನವಿದೆ. ಅದು ಅನುಭವಿಸುವಾಗ ಅರ್ಥವಾಗಲಿದೆ.
ಧಾರ್ಮಿಕತೆಯಲ್ಲಿ ಡಾಂಭಿಕತನ ಅನುಸರಿಸಿದರೆ ನಿಜ ಶಾಂತಿ ನೆಮ್ಮದಿ ದೊರೆಯಲಿದೆಯೇ,? ಸಾಧ್ಯವಿಲ್ಲ. ಶ್ರದ್ಧೆ ಭಕ್ತಿಯಿಂದ ಗುರುವಿನ ಅಣತಿಯಂತೆ ಗುರು ಸೇವೆ ಮೂಲಕ ಶ್ರೀದೇವರನ್ನು ಕಾಣಬಹುದು. ಅಲ್ಲಿ ನಿಷ್ಕಲ್ಮಶ ಸೇವೆ, ತ್ಯಾಗ ಪ್ರೀತಿ ಭಕ್ತಿ ಮಾರ್ಗ ಕುರಿತು ಅರಿವಿಗೆ ಬರಲಿದೆ. ಆಗ ಬದುಕಿನಲ್ಲಿ ಕಂಡುಕೊಳ್ಳುವ ಅನುಭವ ಉಂಟಾಗುವ ಸಂಚಲನ ಪರಮಾತ್ಮನಿಂದ ಪಾರಮಾರ್ಥದಡೆಗೆ ಕೊಂಡೊಯ್ಯುವ ಅಗೋಚರ ಶಕ್ತಿ ನಮ್ಮನ್ನು ಬದಲಾಯಿಸುತ್ತದೆ.
ಆಸೆ ಆಕಾಂಕ್ಷೆಯಿಂದ ಬಹು ದೂರ ಸರಿಸಲಿದೆ. ಅಗಾಧ ಜ್ಞಾನ, ಶೂನ್ಯ ಸಂಪಾದನೆ ಅರಿವಿಗೆ ಬರಲಿದೆ. ಆಗ ನಮಗೆ ಬದುಕಿನ ಸತ್ಯ ಅರಿವಾಗಲಿದೆ. ಅಲ್ಲಿಂದ ನಾವೆಲ್ಲ ಕೈಗೊಳ್ಳುವ ಪುಣ್ಯದ ಫಲದಿಂದ ಮನುಷ್ಯ ಜನ್ಮಕ್ಕೆ ಪರಮಾತ್ಮನ ದರ್ಶನದ ಅವಕಾಶವಿದೆ. ಜೊತೆಗೆ ಜ್ಞಾನದಿಂದ ಮಾತ್ರ ಮುಕ್ತಿ ದೊರೆಯಲು ಸಾಧ್ಯವಿದೆ ಎಂದರು.
ಈ ಸಂದರ್ಭದಲ್ಲಿ ಕಲಬುರ್ಗಿಯ ಮಾತೋಶ್ರೀ ಲಕ್ಷ್ಮೀದೇವಿ, ಶ್ರೀಮಠದ ಜ್ಞಾನೇಶ್ವರಿ ದೇವಿ, ಗೋಪಾಲಸ್ವಾಮಿ ಶಾಸ್ತ್ರೀ ಉಪಸ್ಥಿತರಿದ್ದರು. ಅರುಣಾ ಮಾತಾ ಪ್ರಾರ್ಥಿಸಿದರು. ದೋರನಹಳ್ಳಯ ಮಹೇಶ ಪತ್ತಾರ ನಿರೂಪಿಸಿದರು.