ಪ್ರಮುಖ ಸುದ್ದಿ

ಶಹಾಪುರಃ ನಗರಸಭೆಗೆ ತನಿಖಾ ತಂಡ ಭೇಟಿ, 250 ಕಡತ ವಶಕ್ಕೆ

ಸಮಗ್ರ ಮಾಹಿತಿ ಕಲೆ ಹಾಕಿದ ತನಿಖಾ ತಂಡ, ಸಿಬ್ಬಂದಿಗೆ ನಡುಕ

2016 ರ ಅವಧಿಯ 250 ಕಡತಗಳ ಪರಿಶೀಲನೆ 

ಶಹಾಪುರಃ ಇಲ್ಲಿನ ನಗರಸಭೆಗೆ ಗುರುವಾರ ಆಗಮಿಸಿದ ಜಿಲ್ಲಾ ಯೋಜನಾ ಅಭಿವೃದ್ಧಿ ಕೋಶ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಮಲ್ಲಿಕಾರ್ಜುನ ಗಾಬಶೆಟ್ಟಿ ನೇತೃತ್ವದ ತನಿಖಾ ತಂಡ ನಗರಸಭೆ ಸಭಾಂಗಣದಲ್ಲಿ ಪ್ರಸ್ತುತ ಪೌರಾಯುಕ್ತ ರಮೇಶ ನಾಯಕ ಸೇರಿದಂತೆ ಇತರೆ ಅಧಿಕಾರಿ, ಸಿಬ್ಬಂದಿ ವರ್ಗದ ಜೊತೆ ಸಭೆ ನಡೆಸಿ ಸಮರ್ಪಕ ಮಾಹಿತಿ ಪಡೆದರು.

2016 ರ ಅವಧಿಯ 250 ಕಡತಗಳನ್ನು ವಶಕ್ಕೆ ಪಡೆದುಕೊಂಡು ಜಿಲ್ಲಾಧಿಕಾರಿಗಳ ಕಚೇರಿಗೆ ತೆಗೆದುಕೊಂಡು ಹೋಗಿದ್ದಾರೆ. ಸೂಕ್ತ ಪರಿಶೀಲನೆಗಾಗಿ ಪ್ರಕರಣಕ್ಕೆ ಸಂಭಂಧಿತ ಎಲ್ಲ ಕಡತಗಳನ್ನು ಡಿಸಿ ಕಚೇರಿಗೆ ತೆಗೆದುಕೊಂಡು ಹೋಗಲಾಗಿದೆ ಎಂದು ತಿಳಿದು ಬಂದಿದೆ.

ಹಿಂದಿನ ಪೌರಾಯುಕ್ತ ರಮೇಶ ಪಟ್ಟೇದಾರ ಅಧಿಕಾರವಧಿ ವೇಳೆ ಆಡಳಿತಾಧಿಕಾರಿ ಅನುಮೋದನೆ ಪಡೆಯದೆ, ಸಾಕಷ್ಟು ಕಡತಗಳಿಗೆ ಅಕ್ರಮವಾಗಿ ತಾವೇ ಖುದ್ದು ರುಜು ಹಾಕಿ ಹಣ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ  ನ.14 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಮಹತ್ವದ ದಾಖಲೆ ದೊರೆತ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾರಿ ಜೆ.ಮಂಜುನಾಥ ಅವರು 2016 ರ ಅವಧಿಯಲ್ಲಿ ಅಂದರೆ ರಮೇಶ ಪಟ್ಟೇದಾರ ಪೌರಾಯುಕ್ತರಾಗಿದ್ದ ಅವಧಿಯಲ್ಲಿನ ಕಡತಗಳ ಮರು ತನಿಖೆಗೆ ಆದೇಶ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಗಾಬಶೆಟ್ಟಿ ನೇತೃತ್ವದ ತಂಡ ಆಗಮಿಸಿ ಪ್ರಕರಣಕ್ಕೆ ಸಂಭಂಧಿತ ಕಡತಗಳು ಇತರೆ ದಾಖಲಾತಿಗಳನ್ನು ವಶಕ್ಕೆ ಪಡೆದುಕೊಂಡಿದೆ. ಸುಮಾರು ಎರಡು ಗಂಟೆಗಳ ಕಾಲ ನಗರಸಭೆಯಲ್ಲಿ ಹಲವಾರು ಅಧಿಕಾರಿ, ಸಿಬ್ಬಂದಿಗಳಿಂದ ಮಾಹಿತಿ ಕಲೆ ಹಾಕಿದ ತಂಡ ಸಮಗ್ರ ದಾಖಲಾತಿ ಕಲೆಹಾಕುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿದು ಬಂದಿದೆ.

ಅಲ್ಲದೆ ಪಟ್ಟೇದಾರ ಅಧಿಕಾರವಧಿಯಲ್ಲಿ ಯಾವ ಯಾವ ಸಿಬ್ಬಂದಿ ಅವರ ಅಕ್ರಮ ಕೆಲಸಕ್ಕೆ ಸಹಕರಿಸಿದ್ದಾರೆ ಎಂಬುದನ್ನು ಸಹ ತನಿಖೆ ಮೂಲಕ ಪತ್ತೆ ಮಾಡಲಾಗುತ್ತಿದೆ ಎನ್ನಲಾಗಿದೆ. ಅವ್ಯವಹಾರಕ್ಕೆ ಸಹಕರಿಸಿದ ಸಿಬ್ಬಂದಿಗಳ ವಿರುದ್ಧವೂ ಕ್ರಮಕೈಗೊಳ್ಳುವ ಸಾಧ್ಯತೆಗಳಿವೆ.

ತನಿಖಾ ತಂಡದ ಮುಖ್ಯಸ್ಥ ಮಲ್ಲಿಕಾರ್ಜುನ ಗಾಬಶೆಟ್ಟಿ ಹೇಳಿಕೆ

ಪೌರಾಯುಕ್ತ ಪಟ್ಟೇದಾರ ಅಧಿಕಾರವಧಿಯ 2016 ರ 250 ಕಡತಗಳನ್ನು ವಶಕ್ಕೆ ಪಡೆಯಲಾಗಿದ್ದು, ನಮ್ಮ ತಂಡದಿಂದ ಸೂಕ್ತ ಪರಿಶೀಲನೆ ನಡೆಸಲಾಗುತ್ತಿದೆ. ಇಷ್ಟು ಕಡತಗಳನ್ನು ಪರಿಶೀಲಿಸಲು ಸಮಯ ಬೇಕಾಗುತ್ತದೆ. ಹೀಗಾಗಿ ಕಡತಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಜಿಲ್ಲಾ ಕಚೇರಿಗೆ ಒಯ್ಯಲಾಗುತ್ತಿದೆ. ಪರಿಶೀಲನೆ ನಂತರ ಸಮರ್ಪಕ ವರದಿಯನ್ನು ಸೂಕ್ತ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಒಪ್ಪಿಸಲಾಗುವುದು ಎಂದು ತನಿಖಾ ತಂಡದ ಮುಖ್ಯಸ್ಥ ಮಲ್ಲಿಕಾರ್ಜುನ ಗಾಬಶೆಟ್ಟಿ ವಿನಯವಾಣಿಗೆ ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button